ಕರ್ನಾಟಕ ಬಂದ್: ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ

Update: 2018-01-25 04:33 GMT

# ಹಲವೆಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಬೆಂಗಳೂರು, ಜ.25: ಮಹದಾಯಿ, ಕಳಸಾ ಬಂಡೂರಿ ಯೋಜನೆಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ನೀಡಿರುವ ರಾಜ್ಯ ಬಂದ್ ಕರೆಗೆ ದ.ಕ. ಮತ್ತು ಉಡುಪಿ ಜಿಲ್ಲೆಯನ್ನು ಹೊರತುಪಡಿಸಿ ಉಳಿದ ಬಹುತೇಕ ಜಿಲ್ಲೆಗಳಲ್ಲಿ ಬೆಳಗ್ಗೆಯಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಂಗಳೂರು, ಚಿಕ್ಕಮಗಳೂರು, ಧಾರವಾಡ, ಗದಗ, ಬೆಳಗಾವಿ, ಮೈಸೂರುಗಳಲ್ಲಿ ಉತ್ತಮ ಹೆಚ್ಚಿನ ಅಂಗಡಿಮುಂಗಟ್ಟುಗಳು ಮುಚ್ಚಿವೆ. ಸರಕಾರಿ ಬಸ್, ಆಟೋ ರಿಕ್ಷಾ  ಸಂಚಾರ ಸ್ಥಗಿತಗೊಂಡಿವೆ. ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು, ಧಾರವಾಡ, ಗದಗದಲ್ಲಿ ಶಾಲೆಗಳಿಗೆ ರಜೆ ಸಾರಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಶ್ರೀರಂಗಯ್ಯ ಆದೇಶ ಹೊರಡಿಸಿದ್ದಾರೆ. ಈ ನಡುವೆ ಉಡುಪಿಯಲ್ಲಿ ಬಂದ್ ಗೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಆದರೆ ಸರಕಾರಿ ಬಸ್ ಗಳು ಸಂಚಾರವನ್ನು ಮೊಟಕುಗೊಳಿಸಿವೆ. ಬೆಳಗ್ಗೆ ಒಂದು ಟ್ರಿಪ್ ಓಡಾಟ ನಡೆಸಿದ ಬಳಿಕ ಇದ್ದಕ್ಕಿದ್ದಂತೆ ಸಂಚಾರ ಸ್ಥಗಿತಗೊಳಿಸಿದವು.

ಈ ನಡುವೆ ಅಲ್ಲಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ. ಬೆಂಗಳೂರಿನಲ್ಲಿ ಚೆನ್ನೈ ಎಕ್ಸ್‌ಪ್ರೆಸ್ ರೈಲು ತಡೆಗೆ ಯತ್ನಿಸಿದ ಬಂದ್ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದರು. ಮಲ್ಲೇಶ್ವರಂನಲ್ಲಿ ತೆರೆದಿದ್ದ ಹೋಟೆಲ್, ಬೇಕರಿ ಮೇಲೆ ಕಲ್ಲು ತೂರಾಟ ನಡೆದಿರುವುದು ವರದಿಯಾಗಿದೆ. ಮೈಸೂರಿನಲ್ಲಿ ತೆರೆದಿದ್ದ ಅಂಗಡಿಮುಂಗಟ್ಟುಗಳನ್ನು ಬಂದ್ ಬೆಂಬಲಿಗರು ಬಲವಂತವಾಗಿ ಮುಚ್ಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಚಿಕ್ಕಮಗಳೂರಿನಲ್ಲಿ ಕೆಎಸ್ಸಾರ್ಟಿಸಿ ಬಸ್, ಖಾಸಗಿ ಬಸ್ ಸೇರಿದಂತೆ ಆಟೋ ಸಂಚಾರಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದ ಬೆಂಗಳೂರು, ಧರ್ಮಸ್ಥಳ, ಮಂಗಳೂರು ಸೇರಿದಂತೆ ಬೇರೆ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರು ಬೆಳಗ್ಗೆಯಿಂದಲೇ ಪರದಾಡುವಂತಾಗಿದೆ.

ಈ ನಡುವೆ ಚಿಕ್ಕಮಗಳೂರು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಮುಂಭಾಗದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಚರಿಸುತ್ತಿರುವ ವಾಹನಗಳನ್ನು ತಡೆದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News