ಎಬಿವಿಪಿ ಧ್ವಜ ಹಿಡಿದುಕೊಂಡ ಕೆನಡಾ ಪ್ರಜೆ ಅಕ್ಷಯ್ ಕುಮಾರ್ ಗೆ ಟ್ವಿಟರ್ ಮಂಗಳಾರತಿ

Update: 2018-01-25 05:52 GMT

ಹೊಸದಿಲ್ಲಿ, ಜ.25: ಹೆಚ್ಚಿನ ನಟರು ತಮ್ಮ ಹೊಸ ಚಿತ್ರದ ಪ್ರಚಾರಕ್ಕೆ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ತಮ್ಮ ಲೇಟೆಸ್ಟ್ ಚಿತ್ರ 'ಪ್ಯಾಡ್ ಮ್ಯಾನ್' ಮೂಲಕ ಸುದ್ದಿಯಲ್ಲಿರುವ ಅಕ್ಷಯ್ ಕುಮಾರ್ ಕೂಡಾ ಇದಕ್ಕೆ ಹೊರತಾಗಿಲ್ಲ. ನಿಜ ಜೀವನದ ಹಲವಾರು ಕಥೆಗಳನ್ನು ಈ ನಟ ಹೇಳಲು ಆರಂಭಿಸಿದಂದಿನಿಂದ  ಸಾಕಷ್ಟು ಟೀಕೆ ಹಾಗೂ ವಿಮರ್ಶೆಗೂ ಒಳಗಾಗಿದ್ದಾರೆ.

ಕಡಿಮೆ ವೆಚ್ಚದ ಸ್ಯಾನಿಟರಿ ಪ್ಯಾಡ್ ಉತ್ಪಾದಿಸಿ ಕ್ರಾಂತಿಯನ್ನೇ ಸೃಷ್ಟಿಸಿರುವ ಸಾಮಾಜಿಕ ಕಾರ್ಯಕರ್ತ ಅರುಣಾಚಲಂ ಮುರುಗನಾಥಂ ಎಂಬಾತನ ಜೀವನ ಚರಿತ್ರೆ 'ಪ್ಯಾಡ್ ಮ್ಯಾನ್' ಮೂಲಕ ಹೊರಬಂದಿದ್ದರೆ, ಈ ಚಿತ್ರದ ಮೂಲಕ ಸಾಕಷ್ಟು ಪ್ರಚಾರ ಗಿಟ್ಟಿಸುವಲ್ಲಿಯೂ ಯಶಸ್ವಿಯಾಗಿರುವ ಅಕ್ಷಯ್ ಇದೀಗ ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಮಹಿಳೆಯರ ಮ್ಯಾರಥಾನ್ ಒಂದನ್ನು ಉದ್ಘಾಟಿಸಲು ಬಂದಿದ್ದೇ ಅಲ್ಲದೆ  ಅಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ಧ್ವಜವನ್ನು ಕೈಯಲ್ಲಿ ಹಿಡಿದು ತಮ್ಮ ಬೆಂಬಲಿಗರತ್ತ ಬೀಸಿರುವುದು ವಿವಾದಕ್ಕೀಡಾಗಿದೆ. ಅಷ್ಟೇ ಅಲ್ಲದೆ ಅಕ್ಷಯ್ ತಾವು ಕೈಯಲ್ಲಿ ಎಬಿವಿಪಿ ಧ್ವಜ ಹಿಡಿದುಕೊಂಡಿರುವ ಫೋಟೋವನ್ನೂ ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದು ಟ್ವಿಟ್ಟರಿಗರ ಗಮನಕ್ಕೆ ಬಂದಿದ್ದೇ ತಡ ಹಲವಾರು ಪ್ರತಿಕ್ರಿಯೆಗಳು ಹರಿದು ಬಂದು ಹಲವರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜಕೀಯೇತರ ಕಾರ್ಯಕ್ರಮವೊಂದರಲ್ಲಿ ರಾಜಕೀಯ ಸಂಘಟನೆಯ ಧ್ವಜವೊಂದನ್ನು ಹಿಡಿದಿರುವುದು ಎಷ್ಟು ಸರಿ ಎಂದು ಹಲವರು ಪ್ರಶ್ನಿಸಿದ್ದಾರೆ. ಬಲಪಂಥೀಯ ಸಂಘಟನೆಯೊಂದರ ಧ್ವಜವನ್ನು ಹಿಡಿದು ನಟ ತಾನು ಬಲಪಂಥೀಯ ಸಂಘಟನೆಗಳ ಅಲ್ಪಸಂಖ್ಯಾತ ಹಾಗೂ ಮಹಿಳಾವಾದ ವಿರೋಧಿ ನಿಲುವನ್ನು ಬೆಂಬಲಿಸಿದಂತಾಗಿದೆ ಎಂದೂ ಕೆಲವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News