ಚಾಮರಾಜನಗರ: ಕರ್ನಾಟಕ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ

Update: 2018-01-25 18:09 GMT

ಚಾಮರಾಜನಗರ,ಜ.25: ಮಹದಾಯಿ ಕಳಸಾಬಂಡೂರಿ ನದಿ ನೀರಿಗಾಗಿ ಕರೆ ನೀಡಲಾಗಿದ್ದ ಕರ್ನಾಟಕ ಬಂದ್‍ಗೆ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ದೊರೆತಿದೆ.

ಬೆಳ್ಳಂ ಬೆಳಗ್ಗೆ ನಗರದ ಶ್ರೀ ಭುವನೇಶ್ವರಿ ವೃತ್ತದಲ್ಲಿ ಕರ್ನಾಟಕ ಸೇನಾ ಪಡೆಯ ರಾಜ್ಯಾಧ್ಯಕ್ಷ ಚಾ.ರಂ. ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಬೆರಳೆಣಿಕೆಯಷ್ಟು ಕನ್ನಡ ಚಳವಳಿಗಾರರು ಧರಣಿ ನಡೆಸಿ ಕೇಂದ್ರ ಹಾಗೂ ಗೋವಾ ಸರ್ಕಾರದ ವಿರುದ್ದ ಘೊಷಣೆ ಕೂಗಿ ರಸ್ತೆಯ ಮಧ್ಯೆ ಟೈರ್ ಸುಟ್ಟು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಭುವನೇಶ್ವರಿ ವೃತ್ತದಲ್ಲಿ ಕೆಲ ಸಮಯ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದ ರೈಲ್ವೆ ನಿಲ್ದಾಣಕ್ಕೆ ಲಗ್ಗೆ ಇಟ್ಟು ರೈಲು ತಡೆಗೆ ಮುಂದಾದಾಗ ಪೊಲೀಸರು ಅದನ್ನು ವಿಫಲಗೊಳಿಸಿದರು. ರೈಲ್ವೆ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ಕೇಂದ್ರ ಸರ್ಕಾರದವ ವಿರುದ್ದ ಘೋಷಣೆ ಕೂಗಿದರು.
ಬೆಳಗ್ಗೆ 11 ಗಂಟೆಗೆ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ತಲೆಯ ಮೇಲೆ ಚಪ್ಪಡಿ ಕಲ್ಲು ಹೊತ್ತು ಜಿಲ್ಲಾಡಳಿತ ಭವನದವರೆಗೆ ಪಾದಯಾತ್ರೆ ಮೂಲಕ ತೆರಳಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

11.30 ಕ್ಕೆ ಚಾಮಲ್ ರಸ್ತೆಯಲ್ಲಿರುವ ಬಿ.ಎಸ್.ಎನ್.ಎಲ್ ಕಛೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕನ್ನಡ ಚಳವಳಿಗಾರರನ್ನು ಪೊಲೀಸರು ಬಂಧಿಸಿದರು.
ಬಂದ್ ಹಿನ್ನಲೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News