ಮಡಿಕೇರಿ: ಸಮಾಜವಾದಿ, ಸರ್ವಧರ್ಮ, ಸಮಭಾವದ ಆಶಯಗಳು ನೆರವೇರಲಿ; ಸಚಿವ ಸೀತಾರಾಂ

Update: 2018-01-26 11:45 GMT

ಮಡಿಕೇರಿ, ಜ.26 : ಶಾಂತಿ, ಸೌಹಾರ್ದತೆ, ಸಹಬಾಳ್ವೆ ಹಾಗೂ ಎಲ್ಲರ ಅಭಿವೃದ್ಧಿ ಗಣತಂತ್ರದ ಆಶಯವಾಗಿದ್ದು, ಸಂವಿಧಾನದ ಪ್ರಸ್ತಾವನೆಯಲ್ಲಿ ಮಂಡಿತವಾಗಿರುವ ಸಾರ್ವಭೌಮ, ಸಮಾಜವಾದಿ, ಸರ್ವಧರ್ಮ, ಸಮಭಾವದ ಆಶಯಗಳು ಜನತಂತ್ರದ ಬುನಾದಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಂ ಕರೆ ನೀಡಿದ್ದಾರೆ. 

ಕೊಡಗು ಜಿಲ್ಲಾಡಳಿತದಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 69ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ತ್ರಿವರ್ಣ ಧ್ವಜಾರೋಹಣಗೈದು ಸಚಿವರು ಸಂದೇಶವನ್ನು ನೀಡಿದರು. 1950 ಜನವರಿ 26 ರಂದು ಸಾಕಾರಗೊಂಡ ಸಂವಿಧಾನದ ಆಶಯಗಳು ದೇಶದ ಸೌರ್ವಭೌಮತೆ ಮತ್ತು ವಿವಿಧತೆಯಲ್ಲಿ ಏಕತೆಯನ್ನು ಎತ್ತಿ ಹಿಡಿದಿವೆ ಎಂದರು. 

ಜನಪರ ಯೋಜನೆ ರೂಪಿಸಿದ ಸರ್ಕಾರ- ಕರ್ನಾಟಕ ರಾಜ್ಯ  ಸರ್ಕಾರ ಎಲ್ಲಾ ಜಾತಿ, ಧರ್ಮ, ಭಾಷೆ, ಪ್ರದೇಶಗಳನ್ನು ಮೀರಿ ನಾಡಿನ ಸಮಸ್ತ ಜನರ ಹಿತಕ್ಕಾಗಿ ಬದ್ಧತೆಯಿಂದ ಕೆಲಸ ಮಾಡಿದೆ.ಸಮಗ್ರ ಅಭಿವೃದ್ಧಿಯೆ ಸರ್ಕಾರದ ಧ್ಯೇಯವಾಗಿದೆ. ಮಡಿಕೇರಿಯಲ್ಲಿ ನಡೆದ ಸರ್ಕಾರದ ಸಾಧನಾ ಸಂಭ್ರಮ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು 122 ಕೋಟಿ ರೂ.ಗಳ ಪ್ರಮುಖ ಕಾಮಗಾರಿಗಳಿಗೆ ಚಾಲನೆ ನೀಡಿ ಸರ್ಕಾರದ ಬದ್ಧತೆಯನ್ನು ತೋರಿರುವುದಾಗಿ ತಿಳಿಸಿದರು.

94 ಸಾವಿರ ಕುಟುಂಬಗಳಿಗೆ ಲಾಭ: ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ 94,011 ಕುಟುಂಬಗಳು ಪ್ರಯೋಜನ ಪಡೆದಿದ್ದಾರಾದರೆ, ಜಿಲ್ಲೆಯಲ್ಲಿ ಅಕ್ರಮ-ಸಕ್ರಮ ಯೋಜನೆಯ 94 ಸಿ ರಡಿ 5514 ಮತ್ತು 94 ಸಿಸಿ ರಡಿ 799 ಹಕ್ಕುಪತ್ರಗಳನ್ನು ವಿತರಿಸಲಾಗಿದೆಯೆಂದು ತಿಳಿಸಿದರು.

ಮಡಿಕೇರಿಯಲ್ಲಿ 4.50 ಕೋಟಿ ವೆಚ್ಚದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆಯಲ್ಲದೆ, ಬಡವರು, ಕೂಲಿ ಕಾರ್ಮಿಕರಿಗೆ ಕಡಿಮೆ ಬೆಲೆಯಲ್ಲಿ ಆಹಾರ ನೀಡಲು ಜಿಲ್ಲೆಯ ಮೂರು ಕಡೆ ಇಂದಿರಾ ಕ್ಯಾಂಟಿನ್ ಪ್ರಾರಂಭಿಸಲಾಗುತ್ತದೆಂದು ಮಾಹಿತಿ ನೀಡಿದರು.

ಸಾಲ ಮನ್ನಾ: ಜಿಲ್ಲೆಯ 33,967 ರೈತರಿಗೆ 151 ಕೋಟಿ ಸಾಲ ಮನ್ನಾ ಮಾಡಲಾಗಿದೆಯೆಂದು ತಿಳಿಸಿದ ಸಚಿವರು, ಜಿಲ್ಲೆಯಲ್ಲಿ 4  ಕೋಟಿ ವೆಚ್ಚದಲ್ಲಿ ಉಪ ವಿಜ್ಞಾನ ಕೇಂದ್ರ ಹಾಗೂ ತಾರಾಲಯ ಕಾಮಗಾರಿ ಪ್ರಗತಿಯಲ್ಲಿದೆ.

ವಸತಿ ಯೋಜನೆ ಗ್ರಾಮೀಣ ಭಾಗದ ಜನರಿಗೆ ಮನೆಯನ್ನು ನಿರ್ಮಿಸಲು ಸರ್ಕಾರ ವಿಶೇಷ ಒತ್ತನ್ನು ನೀಡಿದ್ದು, ವಿವಿಧ ವಸತಿ ಯೋಜನೆಯಡಿ 2013-14 ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 12,277 ಫಲಾನುಭವಿಗಳನ್ನು ಆಯ್ಕೆಗೊಳಿಸಲಾಗಿದ್ದು, 6,092 ಮನೆಗಳು ಪೂರ್ಣಗೊಂಡಿದ್ದು, 2,752 ಮನೆಗಳು ವಿವಿಧ ಹಂತಗಳಲ್ಲಿರುತ್ತವೆ. ಪ್ರಗತಿಯಲ್ಲಿರುವ ಎಲ್ಲಾ ಮನೆಗಳನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಮಡಿರುವುದಾಗಿ ತಿಳಿಸಿದರು. 

ಗ್ರಾಮ ವಿಕಾಸ: 2017-18ನೇ ಸಾಲಿಗೆ ಕೊಡಗು ಜಿಲ್ಲೆಯ 2 ವಿಧಾನ ಸಭಾ ಕ್ಷೇತ್ರಗಳಿಗೆ ಪ್ರತಿ ಗ್ರಾಮಗಳಿಗೆ 100 ಲಕ್ಷದಂತೆ 12 ಗ್ರಾಮಗಳಿಗೆ ಒಟ್ಟು  1200  ಅನುಮೋದನೆಗೊಂಡಿದ್ದು, ಅಂದಾಜು ಪಟ್ಟಿ ತಯಾರಿಕಾ ಹಂತದಲ್ಲಿದೆ. ರಾಜ್ಯ ಸರ್ಕಾರ, ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಕಟಿಬದ್ಧವಾಗಿದೆಯೆಂದು ತಿಳಿಸಿದರು.

ಸಮಾರಂಭದಲ್ಲಿ ಎಂಎಲ್‍ಸಿಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾದ ಟಿ.ಪಿ. ರಮೇಶ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಿ.ಎ. ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಮೂಡಾ ಅಧ್ಯಕ್ಷ ಎ.ಸಿ. ಚುಮ್ಮಿ ದೇವಯ್ಯ, ಜಿಲ್ಲಾಧಿಕಾರಿ ಶ್ರೀವಿದ್ಯಾ, ಪೊಲೀಸ್ ವರಿಷ್ಟಾಧಿಕಾರಿ ರಾಜೇಂದ್ರ ಪ್ರಸಾದ್, ಸಿಇಒ ಅಶೋಕ್ ಕುಮಾರ್ ಚಿಶ್ರ, ಪ್ರಮುಖರಾದ ಮಿಟ್ಟು ಚಂಗಪ್ಪ , ಕೆ.ಪಿ. ಚಂದ್ರಕಲಾ, ಕೊಲ್ಯದ ಗಿರೀಶ್ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News