ಮಡಿಕೇರಿ: ಅತ್ಯಾಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 69ನೇ ಗಣರಾಜ್ಯೋತ್ಸವ ಆಚರಣೆ

Update: 2018-01-26 11:53 GMT

ಮಡಿಕೇರಿ, ಜ.26 : ಶಿಸ್ತುಬದ್ಧ ಪಥಸಂಚಲನ, ಶಾಲಾ ವಿದ್ಯಾರ್ಥಿಗಳ ಅತ್ಯಾಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 69ನೇ ಗಣರಾಜ್ಯೋತ್ಸವ ಸಡಗರ ಸಂಭ್ರಗಳೊಂದಿಗೆ ಅರ್ಥಪೂರ್ಣವಾಗಿ ನಗರದಲ್ಲಿ ನಡೆಯಿತು.

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು ಧ್ವಜಾರೋಹಣ ನೆರವೇರಿಸಿ ಪಥಸಂಚಲನವನ್ನು ವೀಕ್ಷಿಸಿ ಗೌರವ ವಂದನೆಯನ್ನು ಸ್ವೀಕರಿಸಿದರು. ಈ ಸಂದರ್ಭ ಜಿಲ್ಲಾ ಪೊಲೀಸ್ ಇಲಾಖೆ, ವಿವಿಧ ಶಾಲೆಗಳ ಎನ್‍ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ , ಸೇವಾದಳ, ಗೃಹ ರಕ್ಷಕ ದಳದಿಂದ ನಡೆದ ಪಥ ಸಂಚಲನ ಗಮನ ಸೆಳೆಯಿತು.

ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳಿಂದ ನಡೆದ ಸ್ತಬ್ಧ ಚಿತ್ರಗಳ ಮೆರವಣಿಗೆ ಸೊಗಸಾಗಿ ಮೂಡಿಬಂದಿತು. ಇದರಲ್ಲಿ ಪಾಲ್ಗೊಂಡ ಮಡಿಕೇರಿ ನಗರಸಭೆಯ ಸ್ವಚ್ಛ ಸರ್ವೇಕ್ಷಣಾ -2018 ಸ್ತಬ್ಧ ಚಿತ್ರ ಮೊದಲ ಸ್ಥಾನವನ್ನು ಪಡೆದುಕೊಂಡರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸ್ತಬ್ಧ ಚಿತ್ರ ದ್ವಿತೀಯ ಮತ್ತು ಅರಣ್ಯ ಇಲಾಖೆಯ ವನ್ಯಜೀವಿಗಳ ಸಂರಕ್ಷಣೆಯ ಕುರಿತು ಸ್ತಬ್ಧ ಚಿತ್ರ ಮೂರನೇ ಬಹುಮಾನಕ್ಕೆ ಪಾತ್ರವಾಯಿತು. ಇವುಗಳೊಂದಿಗೆ ಮೀನುಗಾರಿಕೆ, ತೋಟಗಾರಿಕೆ, ಕೃಷಿ ಇಲಾಖೆ, ಪಶುಪಾಲನಾ ಇಲಾಖೆಗಳ ಸ್ತಬ್ಧ ಚಿತ್ರಗಳು ಗಮನ ಸೆಳೆದವು.

ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ: ನಗರದ ಲಿಟ್ಲ್ ಫ್ಲಾರ್, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕೊಡಗು ವಿದ್ಯಾಲಯ, ಸಂತ ಜೋಸೆಫರ ಶಾಲೆ ಮತ್ತು ಸಿದ್ದಾಪುರ ಗುಹ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ, ಬಂಟ್ವಾಳದ ಚಿಲಿಪಿಲಿ ಬಳಗದ ಗೊಂಬೆ ಕುಣಿತ ಸಾರ್ವಜನಿಕರ ಮೆಚ್ಚುಗೆಗೆ ಫಾತ್ರವಾಯಿತು.

ಪಥ ಸಂಚಲನದಲ್ಲಿ ಪಾಲ್ಗೊಂಡ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸೇವಾದಳ ತಂಡ ಪ್ರಥಮ, ಸಂತ ಮೈಕೆಲರ ಶಾಲೆಯ ಪ್ರಾಥಮಿಕ ವಿಭಾಗದ ಗೈಡ್ಸ್ ದ್ವಿತೀಯ ಮತ್ತು ಸಂತ ಜೋಸೆಫರ ಶಾಲೆಯ ಪ್ರಾಥಮಿಕ ವಿಭಾಗದ ಗೈಡ್ಸ್ ತಂಡ ತೃತೀಯ ಬಹುಮಾನವನ್ನು ಪಡೆದುಕೊಂಡಿತು. 

ಸನ್ಮಾನ-ಬಹುಮಾನ ವಿತರಣೆ: ಎನ್‍ಸಿಸಿಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಬಿ.ಜಿ. ಐಶ್ವರ್ಯ, ನಿಶಾಂತ್ ಬಿ.ಎಸ್., ಅಜಿತ್ ಬಿದ್ದಪ್ಪ, ವಿಕಾಸ್ ಮತ್ತು ಚೋಂದಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸ್ವಚ್ಛ ವಿದ್ಯಾಲಯ ಪುರಸ್ಕಾರಕ್ಕೆ ಪಾತ್ರವಾದ ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಸೀನಿವಾಸನ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಇದೇ ಸಂದರ್ಭ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News