ದೇಶದ ಐಕ್ಯತೆ, ಸಮಗ್ರತೆಗೆ ಸಂವಿಧಾನ ಪೂರಕ: ಟಿ.ಬಿ.ಜಯಚಂದ್ರ

Update: 2018-01-26 15:04 GMT

ತುಮಕೂರು,ಜ.26: ಹಲವು ಧರ್ಮ, ಬಣ್ಣ, ಭಾಷೆ, ಸಂಸ್ಕೃತಿ, ಆಚಾರ, ವಿಚಾರಗಳ ನಡುವೆಯೂ ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಂಡು ಬರಲು ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವೇ ಕಾರಣವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಆಶಯ ಭಾಷಣ ಮಾಡಿದ ಅವರು, ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಪ್ರಪಂಚದ ಎರಡನೇ ರಾಷ್ಟ್ರವಾಗಿರುವ ಭಾರತದಲ್ಲಿ ಬಡವ, ಶ್ರೀಮಂತನೆನ್ನದೆ ಎಲ್ಲರಿಗೂ ಸಮಾನವಾದ ಹಕ್ಕುಗಳು ದೊರೆಯುವಂತೆ ಸಂವಿಧಾನ ರಚಿಸಲಾಗಿದೆ.ಇತರೆ ದೇಶಗಳಿಗೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಮಾದರಿಯಾಗಿದೆ ಎಂದರು.

ಸಂವಿಧಾನದ ಆಶಯದಂತೆ ಶೋಷಿತ ಸಮುದಾಯಗಳ ಏಳಿಗೆಗಾಗಿ ಸರಕಾರದ ಬಜೆಟ್‍ನಲ್ಲಿ ಅವರ ಜನಸಂಖ್ಯೆಗೆ ಅನುಗುಣವಾಗಿ ಹಣವನ್ನು ಮೀಸಲಿಡಲಾಗಿದೆ.ಅಲ್ಲದೆ 50 ಲಕ್ಷದವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ಒದಗಿಸುವ ಕ್ರಾಂತಿಕಾರ ಕಾನೂನನ್ನು ಇಡೀ ದೇಶದಲ್ಲಿಯೇ ಮೊದಲಭಾರಿಗೆ ಜಾರಿಗೆ ತರಲಾಗಿದೆ.2013ರ ನಂತರ ಕರ್ನಾಟಕದಲ್ಲಿ 2,03ಲಕ್ಷ ಶೌಚಾಲಯ ನಿರ್ಮಿಸಲಾಗಿದೆ.ತುಮಕೂರು ತಾಲೂಕನ್ನು ಬಯಲು ಬಹಿರ್ದೆಸೆ ಮುಕ್ತ ತಾಲೂಕನ್ನಾಗಿ ಘೋಷಿಸಲಾಗಿದೆ.ಇದು ಹೆಮ್ಮೆ ಪಡುವಂತಹ ಸಂಗತಿ ಎಂದು ಸಚಿವರು ತಿಳಿಸಿದರು.

ಗಣರಾಜೋತ್ಸವ ಪೇರೆಡ್‍ನಲ್ಲಿ ಪೊಲೀಸ್, ಗೃಹರಕ್ಷಕ, ಎನ್.ಸಿ.ಸಿ, ಸ್ಕೌಟ್, ಗೈಡ್ಸ್, ಕಲರ್‍ಪಾರ್ಟಿ, ಪ್ರವಾಸಿ ಪೊಲೀಸ್ ಸೇರಿದಂತೆ 24 ತಂಡಗಳು ಭಾಗವಹಿಸಿದ್ದು, ಕೆಲ ವರ್ಷಗಳಿಂದ ನಾಡ ಹಬ್ಬಗಳ ಪೆರೇಡ್‍ನಿಂದ ದೂರ ಉಳಿದಿದ್ದ ಮಾಜಿ ಸೈನಿಕರ ತಂಡ ಈ ಬಾರಿ ನಂಜಾಮರಿ ಅವರ ನೇತೃತ್ವದಲ್ಲಿ ಗಣರಾಜೋತ್ಸವ ಪಥಸಂಚಲನದಲ್ಲಿ ಭಾಗವಹಿಸಿ ಗಮನಸೆಳೆದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. 4ನೇ ಎನ್.ಸಿ.ಸಿ. ಬೇಟಾಲಿಯನ್‍ನ ಸುಮಾರು 300 ಕೆಡೆಟ್‍ಗಳು ಸೇರಿ ಆಯೋಜಿಸಿದ್ದ ಯುದ್ದದ ಅಣುಕ ಪ್ರದರ್ಶನ ನೋಡುಗರ ಮೈನವಿರೇಳುವಂತೆ ಮಾಡಿತ್ತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್, ಸಿಇಓ ಅನಿಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್, ಸಂಸದ ಎಸ್.ಪಿ.ಮುದ್ದಹನುಮೇಗೌಡ, ಶಾಸಕರಾದ ಡಾ.ರಫೀಕ್ ಅಹಮದ್, ಬಿ.ಸುರೇಶಗೌಡ, ಜಿ.ಪಂ.ಉಪಾಧ್ಯಕ್ಷೆ ಶಾರದ ಎನ್.ನರಸಿಂಹಮೂರ್ತಿ  ಹಾಗೂ ಇನ್ನಿತರರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News