ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಿ ದೇಶಕ್ಕೆ ಮಾದರಿಯಾಗಿದ್ದೇವೆ: ಆರ್.ರೋಷನ್ ಬೇಗ್

Update: 2018-01-26 15:18 GMT

ಚಿಕ್ಕಮಗಳೂರು, ಜ.26: ರಾಜ್ಯದಲ್ಲಿ ನಮ್ಮ ಸರಕಾರವು ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಿ ದೇಶಕ್ಕೆ ಮಾದರಿಯಾಗಿದೆ. 9300 ಶುಧ್ದ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸುವ ಮೂಲಕ 1.5 ಕೋಟಿ ಜನರಿಗೆ ಅತ್ಯಂತ ಕಡಿಮೆ ಬೆಲೆಗೆ ಶುದ್ಧ ಕುಡಿಯುವ ನೀರು ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿ ಆರ್.ರೋಷನ್ ಬೇಗ್ ತಿಳಿಸಿದರು.

ಅವರು ಶುಕ್ರವಾರ ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 69ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಮ್ಮ ಸರ್ಕಾರ ದೇಶದಲ್ಲೇ ಮೊದಲು ಜಾರಿಗೆ ತಂದ ರಾಜೀವ ಆರೋಗ್ಯ ಭಾಗ್ಯ ಯೋಜನೆಯಡಿ 3.5 ಕೋಟಿ ಮಧ್ಯಮ ವರ್ಗದ ಮಂದಿಗೆ ಆರೋಗ್ಯ ಖಾತ್ರಿ ನೀಡಲಾಗುತ್ತಿದೆ. ಗ್ರಾಮೀಣ ಭಾಗಕ್ಕಿದ್ದ ಯಶಸ್ವಿನಿ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಲಾಗಿದೆ ಎಂದು ನುಡಿದರು.

ಕೃಷಿಭಾಗ್ಯ ಯೋಜನೆಯಡಿ 79 ಲಕ್ಷಕ್ಕೂ ಹೆಚ್ಚು ರೈತರಿಗೆ ನೇರವಾಗಿದೆ. ಮಹಿಳೆಯರು ಮತ್ತು ಮಕ್ಕಳು ನಮ್ಮ ಸಮಾಜದ ಎರಡು ಕಣ್ಣುಗಳಿದ್ದಂತೆ. ಅಂಗನವಾಡಿಯಿಂದ, ಕಾಲೇಜು ಓದುತ್ತಿರುವ ಎಲ್ಲಾ ಮಕ್ಕಳಿಗೆ ಸರಕಾರ ಅನೇಕ ನೆರವು ನೀಡುತ್ತಿದೆ. ಇದೇ ಮೊದಲ ಬಾರಿಗೆ ಎಲ್ಲಾ ಸಮುದಾಯಕ್ಕೆ ಸೇರಿದ ಕಾಲೇಜು ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಉಚಿತ ಲ್ಯಾಪ್‌ಟಾಪ್ ನೀಡಲಾಗುತ್ತಿದೆ. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಪುಸ್ತಕ, ಸಮವಸ್ತ್ರ, ಶೂ-ಕಾಲುಚೀಲ ನೀಡುತ್ತಿದ್ದೇವೆ. ಗರ್ಭಿಣಿ ಬಾಣಂತಿಯರಿಗೆ ಮಾತೃಪೂರ್ಣ ಯೋಜನೆಯಡಿ ಉಚಿತವಾಗಿ ಉತ್ತಮ ಆಹಾರವನ್ನು ಅಂಗನವಾಡಿ ಕೇಂದ್ರಗಳಲ್ಲಿ ನೀಡುತ್ತಿದ್ದೇವೆ ಎಂದು ವಿವರ ನೀಡಿದರು.

ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಿಸಿದ್ದೇವೆ. ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಇಡೀ ದೇಶದಲ್ಲೇ ಹೆಚ್ಚಿನ ಬಂಡವಾಳವನ್ನು ತಂದ ರಾಜ್ಯಗಳ ಪೈಕಿ ನಮ್ಮ ರಾಜ್ಯ ಮೊದಲ ಸ್ಥಾನದಲ್ಲಿದೆ. ಕ್ಷೀರಭಾಗ್ಯ/ಕ್ಷೀರಧಾರೆ ಯೋಜನೆಯಡಿ ಪ್ರತಿ ಲೀಟರ್‌ಗೆ ರೂ. 5 ರಂತೆ ಸಬ್ಸಿಡಿ ನೀಡಲಾಗುತ್ತಿದೆ. ಇದರಿಂದ 50 ಲಕ್ಷ ಲೀಟರ್ ಇದ್ದ ಹಾಲು ಉತ್ಪಾದನೆ 70 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ. ಇದರಿಂದ 1.2 ಕೋಟಿ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ವಾರದಲ್ಲಿ 5 ದಿನ ಕುಡಿಯಲು ಹಾಲು ನೀಡಲಾಗುತ್ತಿದೆ ಎಂದರು.

ಶಾಸಕ ಸಿ.ಟಿ ರವಿ ಅಧ್ಯಕ್ಷತೆ ವಹಿಸಿದ್ದರು. ಆರಂಭದಲ್ಲಿ ಆಕರ್ಷಕ ಕವಾಯತು. ಪಥ ಸಂಚಲನ ನಡೆಯಿತು. ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.

ಜಿಪಂ ಅಧ್ಯಕ್ಷೆ ಚೈತ್ರಾ ಮಾಲತೇಶ್, ಅರಣ್ಯ ವಸತಿ ವಿಹಾರಧಾಮದ ಅಧ್ಯಕ್ಷ ಎ.ಎನ್.ಮಹೇಶ್, ಜಿಪಂ ಉಪಧ್ಯಕ್ಷ ರಾಮಸ್ವಾಮಿ ಶೆಟ್ಟಿಗದ್ದೆ, ಸಿಡಿಎ ಅಧ್ಯಕ್ಷ ಸೈಯ್ಯದ್ ಹನೀಫ್, ಜಿಲ್ಲಾಧಿಕಾರಿ ಶ್ರೀರಂಗಯ್ಯ, ಜಿಪಂ ಸಿಇಓ ಸಿ.ಸತ್ಯಭಾಮ, ಎಸ್ಪಿ ಕೆ.ಅಣ್ಣಾಮಲೈ ಮತ್ತಿತರರಿದ್ದರು.

ನಮ್ಮ ಸರ್ಕಾರದ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್‌ಗಳನ್ನು ತಾಲೂಕು ಮತ್ತು ಜಿಲ್ಲಾ ಕೇಂದ್ರಗಳ ನಗರ ಸ್ಥಳೀಯ ಸಂಸ್ಥೆಗಳಲ್ಲೂ ನಿರ್ಮಿಸಲು ಉದ್ದೇಶಿಸಿದೆ. ಅದರಂತೆ ಚಿಕ್ಕಮಗಳೂರಿನಲ್ಲಿ ಕಡೂರು, ತರೀಕೆರೆ, ಕೊಪ್ಪ, ಮೂಡಿಗೆರೆ, ಎನ್.ಆರ್. ಪುರ, ಶೃಂಗೇರಿಗಳಲ್ಲಿ ತಲಾ ಒಂದರಂತೆ ಒಟ್ಟು 8 ಇಂದಿರಾ ಕ್ಯಾಂಟೀನ್‌ಗಳಿಗೆ ಅನುಮೋದನೆ ನೀಡಲಾಗಿದೆ. ಇದರಿಂದ ಈ ಪ್ರದೇಶದ ಬಡ ಜನರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ತಿಂಡಿ ಹಾಗೂ ಊಟವನ್ನು ಸರಬರಾಜು ಮಾಡಿ ಬಡ ವರ್ಗದ ಜನರ ಹಸಿವು ತುಂಬಿಸಲು ನಮ್ಮ ಸರ್ಕಾರ ನಿರ್ಧರಿಸಿದೆ.

-ಆರ್.ರೋಷನ್ ಬೇಗ್, ಜಿಲ್ಲಾ ಉಸ್ತುವಾರಿ ಸಚಿವರು, ಚಿಕ್ಕಮಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News