ಡೋಕಾ ಲಾದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವುದು ಭಾರತ-ಚೀನಾಗಳಿಗೆ ಅಗತ್ಯ: ಗೌತಮ ಬಂಬಾವಲೆ

Update: 2018-01-26 15:25 GMT

ಹೊಸದಿಲ್ಲಿ,ಜ.26: ಡೋಕಾ ಲಾದಲ್ಲಿನ ಮಿಲಿಟರಿ ಬಿಕ್ಕಟ್ಟು ಭಾರತ-ಚೀನಾ ಸಂಬಂಧಗಳಲ್ಲಿ ಒಂದು ‘ಕ್ಷಣಿಕ ಅಡ್ಡಿ’ಯಾಗಿತ್ತು, ಆದರೆ ಗಡಿಯಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವುದು ಉಭಯ ರಾಷ್ಟ್ರಗಳಿಗೆ ಅಗತ್ಯವಾಗಿದೆ ಎಂದು ಚೀನಾಕ್ಕೆ ಭಾರತದ ನೂತನ ರಾಯಭಾರಿಯಾಗಿರುವ ಗೌತಮ ಬಂಬಾವಲೆ ಅವರು ಸ್ಪಷ್ಟಪಡಿಸಿದ್ದಾರೆ.

  ಚೀನಾದ ಸರಕಾರಿ ಸ್ವಾಮ್ಯದ ಆಂಗ್ಲ ದೈನಿಕ ‘ಗ್ಲೋಬಲ್ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ದ್ವಿಪಕ್ಷೀಯ ಸಂಬಂಧಗಳ ವಿವಿಧ ಆಯಾಮಗಳ ಕುರಿತು ಮಾತನಾಡಿದ ಅವರು, ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್(ಸಿಪಿಇಸಿ)ನಂತಹ ವಿಷಯಗಳ ಕುರಿತು ಭಾರತದ ಕಳವಳಗಳಿಗೆ ಚೀನಾ ಸಂವೇದನಾಶೀಲವಾಗುವ ಅಗತ್ಯವಿದೆ ಎಂದು ಹೇಳಿದರು.

ಡೋಕಾ ಲಾ ಬಿಕ್ಕಟ್ಟಿನ ಬಳಿಕ ಭಾರತ ಮತ್ತು ಚೀನಾ ಹೆಚ್ಚು ಮಾತುಕತೆಯಲ್ಲಿ ತೊಡಗಿಕೊಳ್ಳುವ ಮತ್ತು ಪರಸ್ಪರರೊಂದಿಗೆ ನೇರವಾಗಿರುವ ಅಗತ್ಯವಿದೆ ಎಂದ ಅವರು, ಉಭಯ ರಾಷ್ಟ್ರಗಳು ಪರಸ್ಪರ ಶತ್ರುಗಳಲ್ಲ ಎಂದು ಒತ್ತಿ ಹೇಳಿದರು.

ಡೋಕಾ ಲಾ ಬಿಕ್ಕಟ್ಟನ್ನು ದೀರ್ಘಕಾಲದ ದೃಷ್ಟಿಕೋನದಿಂದ ನೋಡಬೇಕಾಗಿದೆ. ಹಾಗೆ ಮಾಡಿದಾಗ ಅದು ಸುದೀರ್ಘ ಇತಿಹಾಸದಲ್ಲಿ ಕೇವಲ ಒಂದು ಘಟನೆಯಾಗುತ್ತದೆ ಎಂದ ಅವರು, ಈ ಘಟನೆಗೆ ನೀವು ಅನಗತ್ಯ ಮಹತ್ವ ನೀಡಿದ್ದೀರಿ ಎಂದು ನಾನು ಭಾವಿಸಿದ್ದೇನೆ. ಭಾರತ ಮತ್ತು ಚೀನಾಗಳ ಜನರು ಹಾಗು ನಮ್ಮ ನಾಯಕರು ನಮ್ಮ ಸಂಬಂಧಗಳಲ್ಲಿ ಇಂತಹ ಕ್ಷಣಿಕ ಅಡ್ಡಿಗಳನ್ನು ಮೀರಿ ಮುನ್ನಡೆಯಲು ಸಾಕಷ್ಟು ಅನುಭವಿಗಳೂ, ಬುದ್ಧಿವಂತರೂ ಆಗಿದ್ದಾರೆ ಎಂದರು.

ಗಡಿಯ ಸಿಕ್ಕಿಂ ವಿಭಾಗದ ಬಳಿಯ ಡೋಕಾ ಲಾದಲ್ಲಿ ಕಳೆದ ವರ್ಷ ಉಭಯ ರಾಷ್ಟ್ರಗಳ ನಡುವೆ ಸೃಷ್ಟಿಯಾಗಿದ್ದ ಮಿಲಿಟರಿ ಬಿಕ್ಕಟ್ಟು ಸುಮಾರು ಎರಡು ತಿಂಗಳ ಬಳಿಕ ಬಗೆಹರಿದಿತ್ತು. ಆದರೆ, ಈಶಾನ್ಯ ಭಾರತವನ್ನು ದೇಶದ ಇತರ ಭಾಗದೊಂದಿಗೆ ಸಂಪರ್ಕಿಸುವ ಭಾರತದ ರಸ್ತೆಗೆ ಸಮೀಪವೇ ಡೋಕಾ ಲಾ ಬಳಿಯ ಪ್ರದೇಶದಲ್ಲಿ ಚೀನಾ ಭಾರೀ ಮೂಲಸೌಕರ್ಯ ನಿರ್ಮಾಣಗಳನ್ನು ಕೈಗೊಂಡಿದೆ ಎಂದು ಕೆಲವು ಮಾಧ್ಯಮ ವರದಿಗಳು ಹೇಳಿವೆ.

ಡೋಕಾ ಲಾ ಬಿಕ್ಕಟ್ಟಿನ ಬಳಿಕ ಉಭಯ ರಾಷ್ಟ್ರಗಳು ಹಿಂದೆಂದಿಗಿಂತಲೂ ಹೆಚ್ಚಾಗಿ ಮಾತುಕತೆಗಳಲ್ಲಿ ತೊಡಗಿಕೊಳ್ಳುವ ಅಗತ್ಯವಿದೆ ಎಂದು ಹೇಳಿದ ಬಂಬಾವಲೆ, ನಾವು ಪರಸ್ಪರರ ಕಳವಳಗಳಿಗೆ ಸೂಕ್ಷ್ಮಗ್ರಾಹಿಯಾಗಬೇಕು. ನಮ್ಮ ಸಂವಾದವು ಸಮಾನತೆ ಮತ್ತು ಪರಸ್ಪರ ಲಾಭವನ್ನು ಆಧರಿಸಿರಬೇಕು. ಅಲ್ಲದೆ ಭಾರತ-ಚೀನಾ ಗಡಿಪ್ರದೇಶಗಳಲ್ಲಿ, ವಿಶೇಷವಾಗಿ ಕೆಲವು ಸೂಕ್ಷ್ಮ ಸ್ಥಳಗಳಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಈ ಬಗ್ಗೆ ನಾವು ಸ್ಪಷ್ಟವಾಗಿ ತಿಳಿದಿರುವ ಅಗತ್ಯವಿದೆ ಎಂದರು.

ವಿವಾದಿತ ಕಾಶ್ಮೀರದ ಮೂಲಕ ಹಾದುಹೋಗುವ ಸಿಪಿಇಸಿ ಕುರಿತು ಭಾರತದ ಹೆಚ್ಚುತ್ತಿರುವ ಕಳವಳಗಳನ್ನು ಬೆಟ್ಟು ಮಾಡಿದ ಅವರು, ಇದು ನಮ್ಮ ಪ್ರಾದೇಶಿಕ ಅಖಂಡತೆಯನ್ನು ಉಲ್ಲಂಘಿಸುತ್ತದೆ ಮತ್ತು ನಮ್ಮ ಪಾಲಿಗೆ ಪ್ರಮುಖ ಸಮಸ್ಯೆಯಾಗಿದೆ. ನಾವು ಈ ಕುರಿತು ಮಾತುಕತೆ ನಡೆಸುವ ಅಗತ್ಯವಿದೆ, ನಮ್ಮ ಕಳವಳಗಳನ್ನು ಮುಚ್ಚಿಡಬೇಕಿಲ್ಲ. ನಾವು ಪರಸ್ಪರ ಹೆಚ್ಚು ಮಾತುಕತೆ ನಡೆಸಿದಷ್ಟೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹೆಚ್ಚು ಸುಲಭವಾಗುತ್ತದೆ ಎಂದು ಹೇಳಿದರು.

ಉಭಯ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ವ್ಯಾಪಾರ ಕೊರತೆಯ ಬಗ್ಗೆಯೂ ಅವರು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News