ದೇಶದಲ್ಲಿ ಹೆಚ್ಚು ನೌಕರರನ್ನು ಹೊಂದಿರುವುದು ಕೆ.ಎಸ್.ಆರ್.ಟಿ.ಸಿ: ಟಿ.ಬಿ.ಜಯಚಂದ್ರ

Update: 2018-01-26 17:46 GMT

ತುಮಕೂರು,ಜ.26: ಒಂದು ಲಕ್ಷ 18 ಸಾವಿರ ನೌಕರರನ್ನು ಹೊಂದುವ ಮೂಲಕ ಸಾರಿಗೆ ಇಲಾಖೆ ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ರಾಷ್ಟ್ರದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಕಾನೂನು ಸಂಸದೀಯ ಮತ್ತು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ನಗರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತುಮಕೂರು ವಿಭಾಗದ ಆವರಣದಲ್ಲಿ ಹಮ್ಮಿಕೊಂಡಿದ್ದ ಬೆಳ್ಳಿ ಪದಕ ಮತ್ತು ವಾರ್ಷಿಕ ಸೇವಾ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಚಾಲಕನನ್ನು ನಂಬಿ ಪ್ರಯಾಣಕ್ಕಾಗಿ ಬಸ್ ಹತ್ತುವ ಕಾರಣ ಸುಮಾರು 45ಕ್ಕಿಂತ ಹೆಚ್ಚು ಪ್ರಯಾಣಿಕರ ಜೀವವನ್ನು ಸುರಕ್ಷಿತವಾಗಿ ಕೊಂಡೊಯ್ಯುವ ಜವಾಬ್ದಾರಿ ಪ್ರತಿಯೊಬ್ಬ ಚಾಲಕನ ಮೇಲಿರುತ್ತದೆ. ಆದ್ದರಿಂದ ಪ್ರಯಾಣಿಕರು ನಿಮ್ಮ ಮೇಲೆ ಇಟ್ಟುಕೊಂಡಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಚಾಲಕರು ಜಾಗರೂಕತೆಯಿಂದ ಚಾಲನೆ ಮಾಡಬೇಕು ಎಂದು ಸಾರಿಗೆ ನೌಕರರಿಗೆ ಕಿವಿ ಮಾತು ಹೇಳಿದರು.

ತುಮಕೂರು-ಬೆಂಗಳೂರಿಗೆ ನಾನ್‍ಸ್ಟಾಪ್ ಬಸ್‍ಗಳ ವ್ಯವಸ್ಥೆಯನ್ನು ಮಾಡಿ ಸಾರಿಗೆ ಇಲಾಖೆಗೆ ಕೊಡುಗೆಯಾಗಿ ನೀಡಿದ್ದರಿಂದ ಇಂದು ಬೆಂಗಳೂರಿಗೆ ಒಂದೊಂದು ನಿಮಿಷಕ್ಕೆ ಒಂದೊಂದು ಸಾರಿಗೆ ಬಸ್‍ಗಳಿವೆ. ಆದ್ದರಿಂದ ತುಮಕೂರು ಜಿಲ್ಲೆ ಸಾರಿಗೆ ವ್ಯವಸ್ಥೆಯಲ್ಲಿ ಬಹಳ ವೇಗವಾಗಿ ಬೆಳೆಯುತ್ತಿದೆ. ಇಂದಿಲ್ಲಿ ಅಪಘಾತ ಇಲ್ಲದೆ ಚಾಲನೆ ಮಾಡಿರುವ ಚಾಲಕರನ್ನು ಹಾಗೂ ನೌಕರರನ್ನು ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗುತ್ತಿರುವುದು ಬಹಳ ಉತ್ತಮವಾದ ಕಾರ್ಯವಾಗಿದೆ. ಇದರಿಂದ ಇನ್ನೂ ಹೆಚ್ಚಿನ ನೌಕರರು ಪಾರದರ್ಶಕವಾಗಿ ಕಾರ್ಯನಿರ್ವಹಿಸಲು ಹಾಗೂ ಅಪಘಾತ ತಡೆಗಟ್ಟಲು ಹೆಚ್ಚು ಶ್ರಮಿಸಲು ಫಲಕಾರಿ ಯಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಈ ವೇಳೆ ಅಪಘಾತಯಿಲ್ಲದೆ ಚಾಲನೆ ಮಾಡಿರುವ ಚಾಲಕರಿಗೆ, ಉತ್ತಮವಾಗಿ ಕಾರ್ಯನಿರ್ವಹಿಸಿರುವ ನೌಕರರಿಗೆ ಹಾಗೂ ಪ್ರಥಮ ದರ್ಜೆಯಲ್ಲಿ ಉತ್ತಿರ್ಣರಾಗಿರುವ ಸಾರಿಗೆ ನೌಕರರ ಮಕ್ಕಳಿಗೆ ಸೇರಿದಂತೆ ಪಾರದರ್ಶಕ ಆಡಳಿತ ನಡೆಸಿರುವ ನೌಕರರಿಗೆ ಸಚಿವ ಟಿ.ಬಿ.ಜಯಚಂದ್ರ ಹಾಗೂ ಶಾಸಕ ಡಾ ರಫೀಕ್ ಅಹಮದ್ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಕಾರ್ಯಕ್ರಮದಲ್ಲಿ ಸಾರಿಗೆ ಮಂಡಳಿ ನಿದೇಶಕ ಟಿ.ಎಸ್.ಮಂಜುನಾಥ್, ಮಹೇಶ್ ಇನ್ನಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News