ಶಿವಸೇನೆ-ಬಿಜೆಪಿ ಮುಸುಕಿನ ಗುದ್ದಾಟ

Update: 2018-01-27 04:10 GMT

‘ಶತ್ರುವಿನ ಜೊತೆಗೆ ಶಯನ’ ಅಥವಾ ‘ಸ್ಲೀಪಿಂಗ್ ವಿತ್ ಎನಿಮಿ’ ಪದ ಶಿವಸೇನೆ ಮತ್ತು ಬಿಜೆಪಿ ದಾಂಪತ್ಯಕ್ಕೆ ಹೊಂದುತ್ತದೆ. ಬಿಜೆಪಿಯ ಜೊತೆಗೆ ಅಧಿಕಾರದ ಮಂಚವನ್ನು ಹಂಚಿಕೊಳ್ಳುತ್ತಲೇ ಶಿವಸೇನೆ ತನ್ನ ಶತ್ರುತ್ವವನ್ನು ಅಥವಾ ತನ್ನ ಸ್ವಂತಿಕೆಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿದ ದಿನದಿಂದಲೂ ಅದು ಮಿತ್ರನಾಗಿ ಸರಕಾರಕ್ಕೆ ಬೆಂಬಲಕೊಟ್ಟಿರುವುದಕ್ಕಿಂತ, ವಿರೋಧ ಪಕ್ಷವಾಗಿ ಸರಕಾರವನ್ನು ಟೀಕಿಸಿದ್ದೇ ಅಧಿಕ. ಬಹುಶಃ ಯಾವುದೇ ವಿರೋಧ ಪಕ್ಷಕ್ಕಿಂತಲೂ ಹೆಚ್ಚು ಕಿರುಕುಳವನ್ನ್ನು ಬಿಜೆಪಿಗೆ ರಾಜ್ಯದಲ್ಲೂ, ಕೇಂದ್ರದಲ್ಲೂ ಶಿವಸೇನೆ ನೀಡುತ್ತಿದೆ. ಇದೊಂದು ರೀತಿ, ಮಹಾಭಾರತ ಯುದ್ಧದ ಸಂದರ್ಭದಲ್ಲಿ ಕರ್ಣನಿಗೆ ಆತನ ಸಾರಥಿಯಾದ ಶಲ್ಯನೇ ಕಾಟ ನೀಡಿದಂತೆ. ಶಲ್ಯನ ವಿರುದ್ಧ ಕೋಪಿಸುವಂತಿಲ್ಲ. ಕೋಪಿಸಿದರೆ ಸಾರಥ್ಯದಿಂದ ಕೆಳಗಿಳಿದು ಬಿಡುತ್ತಾನೆ. ಕರ್ಣ ರಣರಂಗದ ಮಧ್ಯೆ ಅಸಹಾಯಕನಾಗಬೇಕಾಗುತ್ತದೆ. ಹಾಗೆಂದು, ಒಬ್ಬ ಸೇನಾಧಿಪತಿ ತನ್ನ ಸಾರಥಿಯ ಕೈಯಿಂದ ಹಿಗ್ಗಾಮುಗ್ಗ ಬೈಗಳನ್ನು ಕೇಳಿ ಸುಮ್ಮನಿರುವುದು ಹೇಗೆ? ಕನಿಷ್ಠ ಯುದ್ಧದೆಡೆಗೆ ಗಮನ ನೀಡುವುದು ಹೇಗೆ?

ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸರಕಾರಕ್ಕೆ ಶಿವಸೇನೆ ಶಲ್ಯನಂತೆ ಕಚ್ಚಿಕೊಂಡಿದೆ. ದೂರ ಸರಿಸಿದರೆ ಸರಕಾರವೇ ಉರುಳುತ್ತದೆ. ಅದರ ಲಾಭವನ್ನು ವಿರೋಧಿಗಳು ತಮ್ಮದಾಗಿಸಿಕೊಳ್ಳಬಹುದು. ಇದೀಗ ಇನ್ನೊಂದು ಬಾಂಬ್‌ನ್ನು ಶಿವಸೇನೆ ಸ್ಫೋಟಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲಾಗಲಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಾಗಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧಿಸಲಿದ್ದೇವೆ ಎಂದು ಶಿವಸೇನೆಯ ನಾಯಕರು ಘೋಷಿಸಿದ್ದಾರೆ. ನಿಜಕ್ಕೂ ಬಿಜೆಪಿಯೊಂದಿಗೆ ಶಿವಸೇನೆ ಭ್ರಮನಿರಸನಗೊಂಡಿದೆಯಾದರೆ ಈ ಕ್ಷಣವೇ ಯಾಕೆ ಅದರೊಂದಿಗೆ ಮೈತ್ರಿಯನ್ನು ಕಡಿದುಕೊಳ್ಳುತ್ತಿಲ್ಲ. 2019ನ್ನು ಶಿವಸೇನೆ ಯಾಕೆ ಕಾಯುತ್ತಿದೆ?

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಬೇರೆಯೇ ರಾಜಕೀಯ ಕಾರ್ಯತಂತ್ರವನ್ನು ಹಮ್ಮಿಕೊಂಡಿತ್ತು. ಶರದ್ ಪವಾರ್ ನೇತೃತ್ವದ ಎನ್‌ಸಿಪಿಯ ಜೊತೆಗೆ ಮೈತ್ರಿ ಮಾಡಿಕೊಂಡು ರಾಷ್ಟ್ರೀಯ ಪಕ್ಷವಾದ ಬಿಜೆಪಿಯನ್ನು ಸಂಪೂರ್ಣ ಹೊರಗಿಡುವ ಉದ್ದೇಶವನ್ನು ಅದು ಹೊಂದಿತ್ತು. ಬಿಜೆಪಿ ಮತ್ತು ಶಿವಸೇನೆ ಎರಡೂ ‘ಹಿಂದುತ್ವ’ದ ಮತಗಳನ್ನೇ ಅವಲಂಬಿಸಿರುವುದರಿಂದ ಮತ್ತು ಬಾಳಾಠಾಕ್ರೆ ಇಲ್ಲದ ದಿನಗಳಲ್ಲಿ ಬಿಜೆಪಿಯು ಇಡೀ ಶಿವಸೇನೆಯನ್ನೇ ಅಪೋಷನ ತೆಗೆದುಕೊಳ್ಳುವ ಸಾಧ್ಯತೆಗಳಿದ್ದುದರಿಂದ ಮಹಾರಾಷ್ಟ್ರದಿಂದ ಬಿಜೆಪಿಯನ್ನು ದೂರ ಇಡುವುದು ನಾಯಕ ಉದ್ಧವ್ ಠಾಕ್ರೆಗೆ ಅಗತ್ಯವಾಗಿತ್ತು. ಆದರೆ ಫಲಿತಾಂಶ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿತ್ತು. ಬಿಜೆಪಿ ಬಹುಮತ ಪಡೆದ ಪಕ್ಷವಾಗಿ ಹೊರಹೊಮ್ಮಿತು. ಎನ್‌ಸಿಪಿ ಮತ್ತು ಶಿವಸೇನೆ ಜೊತೆಗೂಡಿದರೂ ಸರಕಾರ ರಚಿಸುವಷ್ಟು ಸ್ಥಾನಗಳು ಗಿಟ್ಟಲಿಲ್ಲ. ಆಗ ಬಿಜೆಪಿ, ಸರಕಾರ ರಚಿಸುವುದಕ್ಕೆ ಎನ್‌ಸಿಪಿಯ ಜೊತೆಗೆ ಕೈ ಜೋಡಿಸುವುದಕ್ಕೂ ಹಿಂಜರಿಯುವುದಿಲ್ಲ ಎಂದು ಬಿಜೆಪಿ ಘೋಷಿಸಿತು.

ಅಧಿಕಾರ ಯಾರಿಗೆ ಬೇಡ? ಎಲ್ಲ ಸಿದ್ಧಾಂತಗಳನ್ನು ಪಕ್ಕಕ್ಕಿಟ್ಟು ಬಿಜೆಪಿಯ ಜೊತೆಗೆ ಕೈ ಜೋಡಿಸಲು ಎನ್‌ಸಿಪಿಯೂ ಮುಂದಾಗಿತ್ತು. ಶಿವಸೇನೆಗೆ ಧರ್ಮಸಂಕಟ. ಒಂದು ವೇಳೆ ಬಿಜೆಪಿ ಮತ್ತು ಎನ್‌ಸಿಪಿ ಜೊತೆಯಾಗಿ ಸರಕಾರ ರಚನೆ ಮಾಡಿದರೆ, ಶಿವಸೇನೆಯಿಂದ ಕೆಲವು ಶಾಸಕರು ಬಿಜೆಪಿಗೆ ವಲಸೆಹೋಗುವ ಅಪಾಯವೂ ಇತ್ತು. ಒಂದು ರೀತಿಯಲ್ಲಿ ಬಿಜೆಪಿಯು ಎನ್‌ಸಿಪಿಯನ್ನು ಮುಂದಿಟ್ಟುಕೊಂಡು ಶಿವಸೇನೆಯನ್ನು ಆಡಿಸಹತ್ತಿತ್ತು. ತಾನು ಕೈ ಜೋಡಿಸದಿದ್ದರೆ ಅದರ ಲಾಭವನ್ನು ಶರದ್‌ಪವಾರ್ ಪಡೆಯುತ್ತಾರೆ ಎನ್ನುವ ಒಂದೇ ಕಾರಣಕ್ಕಾಗಿ ಶಿವಸೇನೆಯು ಬಿಜೆಪಿಯ ಜೊತೆಗೆ ಒಲ್ಲದ ಮನಸ್ಸಿನಿಂದ ಸೇರಿಕೊಂಡಿತ್ತು. ಇದೇ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಪದವಿಯನ್ನು ತನ್ನದಾಗಿಸಿಕೊಳ್ಳಲು ಕೊನೆಯ ಕ್ಷಣದವರೆಗೂ ಶಿವಸೇನೆ ಪ್ರಯತ್ನಿಸಿತ್ತು. ಆದರೆ ಅದಕ್ಕೂ ಬಿಜೆಪಿ ಬಗ್ಗಲಿಲ್ಲ. ಪ್ರಮಾಣವಚನ ಸ್ವೀಕಾರದ ಕೊನೆಯ ಕ್ಷಣದವರೆಗೂ ಬಿಜೆಪಿ ಮತ್ತು ಶಿವಸೇನೆ ನಡುವೆ ಈ ಬಗ್ಗೆ ಚೌಕಾಶಿ ನಡೆದಿತ್ತಾದರೂ ಬಿಜೆಪಿ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಮಹಾರಾಷ್ಟ್ರದಲ್ಲಿ ತಾನೇ ನಿರ್ಣಾಯಕ ಎಂದು ಮೀಸೆ ತಿರುವುತ್ತಿದ್ದ ಶಿವಸೇನೆಗೆ ಇದು ಭಾರೀ ಮುಖಭಂಗವಾಗಿತ್ತು.

ಅಂದಿನಿಂದ ಅಧಿಕಾರದ ಮಂಚದಲ್ಲಿ ಜೊತೆಯಾಗಿ ನಿದ್ರಿಸುತ್ತಿದ್ದಾರಾದರೂ, ಸಂಸಾರ ಮಾತ್ರ ಬೇರೆ ಬೇರೆಯಾಗಿ ಸಾಗಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶಿವಸೇನೆ ಮತ್ತು ಬಿಜೆಪಿಯ ನಡುವೆ ಹಿಂದುತ್ವದ ಮತಗಳಿಗಾಗಿ ಪೈಪೋಟಿ ನಡೆಯುತ್ತಿದೆ. ಬಿಜೆಪಿ ರಾಷ್ಟ್ರೀಯ ಪಕ್ಷ. ಜೊತೆಗೆ ಅದಕ್ಕೆ ಮೋದಿಯ ವರ್ಚಸ್ಸಿನ ಬಲವಿದೆ. ಬಾಳಾಠಾಕ್ರೆಯ ಬಳಿಕ ಶಿವಸೇನೆ ಮಹಾರಾಷ್ಟ್ರದಲ್ಲಿ ಕಳಾಹೀನವಾಗಿದೆ. ತನ್ನ ಮತ್ತು ಬಿಜೆಪಿಯ ನಡುವಿನ ಸಿದ್ಧಾಂತದ ಪರದೆ ತೀರಾ ತೆಳು ಆಗಿರುವುದರಿಂದ ಶಿವಸೇನೆಗೆ ಅಸ್ತಿತ್ವದ ಭಯ ಶುರುವಾಗಿದೆ. ಆದುದರಿಂದಲೇ ಮಹಾರಾಷ್ಟ್ರದಲ್ಲಿ ಅಧಿಕಾರ ಹಿಡಿದ ದಿನದಿಂದ ಪ್ರಧಾನಿ ಮೋದಿಯವರನ್ನು ಟೀಕಿಸುವ ಮೂಲಕ ತನ್ನ ಸ್ವತಂತ್ರ ಅಸ್ತಿತ್ವವನ್ನು ಪದೇ ಪದೇ ಘೋಷಿಸಿಕೊಳ್ಳುತ್ತಿದೆ. ಪ್ರಧಾನಿ ಮೋದಿಯ ನೀತಿಯನ್ನು ಶಿವಸೇನೆ ಟೀಕಿಸಿದಷ್ಟು ತೀವ್ರವಾಗಿ ಕಾಂಗ್ರೆಸ್ ಪಕ್ಷವೂ ಟೀಕಿಸಿಲ್ಲ. ಅದರೂ ಬಿಜೆಪಿ ಅದನ್ನು ಸಹಿಸುವ ಮೂಲಕ ಮುತ್ಸದ್ಧಿತನವನ್ನು ಮೆರೆದಿದೆ. ಇತ್ತೀಚಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ತನ್ನ ಬೇರನ್ನು ಬಲವಾಗಿ ಇಳಿಸಲು ಬಿಜೆಪಿ ಬಗೆಬಗೆಯಾಗಿ ಯತ್ನಿಸುತ್ತಿದೆ ಮತ್ತು ಶಿವಸೇನೆ ಅದನ್ನು ತಡೆಯಲು ಹೆಣಗಾಡುತ್ತಿದೆ. ಬಿಜೆಪಿ ಮತ್ತು ಶಿವಸೇನೆ ಉಗ್ರ ಹಿಂದುತ್ವದ ಫಲಾನುಭವಿಗಳಾಗಿರಬಹುದು. ಆದರೆ ಬಿಜೆಪಿ ಹಿಂದುತ್ವವನ್ನು ಬಳಸಿಕೊಂಡ ರೀತಿಗೂ, ಶಿವಸೇನೆ ಬಳಸಿಕೊಂಡ ರೀತಿಗೂ ವ್ಯತ್ಯಾಸವಿದೆ. ಶಿವಸೇನೆ ಮುಂಬೈಯ ಕಾರ್ಮಿಕ ಸಂಘಟನೆಗಳ ತಿಕ್ಕಾಟಗಳ ನಡುವೆ ಹುಟ್ಟಿ, ಹಂತ ಹಂತವಾಗಿ ಬೆಳೆಯಿತು.

ವಿವಿಧ ಕಾರ್ಖಾನೆಗಳ ಕಾರ್ಮಿಕರ ಮೇಲೆ ಹತೋಟಿ ಸಾಧಿಸಲು ಶಿವಸೇನೆ ಹಿಂದುತ್ವವನ್ನು ಬಳಸಿಕೊಂಡಿತು. ಬಿಜೆಪಿ ರಾಮಜನ್ಮಭೂಮಿಯಂತಹ ಭಾವನಾತ್ಮಕ ವಿಷಯಗಳ ಮೂಲಕ ಬೆಳೆಯಿತು. ಇನ್ನೊಂದು ಬಹುಮುಖ್ಯ ವ್ಯತ್ಯಾಸವೆಂದರೆ ಬಿಜೆಪಿಯ ಹಿಡಿತ ಬ್ರಾಹ್ಮಣ್ಯದ ಕೈಯಲ್ಲಿದೆ. ಶಿವಸೇನೆಯಲ್ಲಿ ಶೂದ್ರರ ಪ್ರಾಬಲ್ಯವಿದೆ. ಶಿವಸೇನೆಗೆ ತಳಮಟ್ಟದ ಜನರ ಬೆಂಬಲವಿದೆ. ಈ ಕುರಿತಂತೆ ಬಿಜೆಪಿಗೂ ಶಿವಸೇನೆಯ ಕುರಿತಂತೆ ಒಂದು ಅಳುಕು ಇದೆ. ಆದುದರಿಂದಲೇ ಅದು ಶಿವಸೇನೆಯ ಮೈತ್ರಿಯನ್ನು ಸಂಪೂರ್ಣ ಕಡಿದುಕೊಳ್ಳಲು ಹಿಂದೆೇಟು ಹಾಕುತ್ತಿದೆ.

ಇದೀಗ ಮುಂದಿನ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದ್ದೇನೆ ಎಂದು ಶಿವಸೇನೆ ಘೋಷಿಸಿದೆಯೇನೋ ನಿಜ. ಆದರೆ ಇದೇ ಅಂತಿಮ ತೀರ್ಮಾನವಾಗಬೇಕು ಎಂದೇನಿಲ್ಲ. ಈ ಘೋಷಣೆಯ ಮೂಲಕ ಬಿಜೆಪಿಯನ್ನು ಬೆದರಿಸಿ, ಬ್ಲಾಕ್‌ಮೇಲ್ ಮಾಡಲು ಹೊರಟಿದೆ. ಒಂದು ರೀತಿಯಲ್ಲಿ ಶಿವಸೇನೆಯ ಚುನಾವಣಾ ತಯಾರಿ ಅಥವಾ ಅಭ್ಯರ್ಥಿಗಳ ಚೌಕಾಶಿಯನ್ನು ಈ ಮೂಲಕ ಆರಂಭಿಸಿದೆ. ಶಿವಸೇನೆಯೇನಾದರೂ ಸ್ವತಂತ್ರವಾಗಿ ಸ್ಪರ್ಧಿಸಿದರೆ ಹಿಂದುತ್ವದ ಮತಗಳು ಹಂಚಿ ಹೋಗುತ್ತವೆ. ಇದರಿಂದ ಬಿಜೆಪಿಗೂ, ಶಿವಸೇನೆಗೂ ಸಮಾನವಾಗಿ ನಷ್ಟವಿದೆ. ಕೇಂದ್ರದ ಮೇಲೂ ದುಷ್ಪರಿಣಾಮ ಬೀರುವುದರಿಂದ ಬಿಜೆಪಿಗೆ ಹೆಚ್ಚು ನಷ್ಟವಿದೆ. ಆದುದರಿಂದ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಶಿವಸೇನೆಯೊಂದಿಗಿನ ಭಿನ್ನಾಬಿಪ್ರಾಯಗಳನ್ನು ಬಿಜೆಪಿ ಇತ್ಯರ್ಥಗೊಳಿಸಲು ಮನಮಾಡಬಹುದು. ಶಿವಸೇನೆಯ ಚೌಕಾಶಿಗೆ ಬಗ್ಗಲೂ ಬಹುದು. ಒಟ್ಟಿನಲ್ಲಿ ‘‘ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ’’ ಎನ್ನುವ ಸ್ಥಿತಿಯಲ್ಲಿದೆ ಶಿವಸೇನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News