ಬಿಲ್ ಗೇಟ್ಸ್ ಮನಗೆದ್ದ ಭಾರತೀಯ ವೈದ್ಯ ಮ್ಯಾಥ್ಯೂ ವರ್ಗೀಸ್

Update: 2018-01-27 05:07 GMT

ಹೊಸದಿಲ್ಲಿ, ಜ. 27: ಸ್ಟೆತೊಸ್ಕೋಪ್ ಹಿಡಿಯಬೇಕಾದ ಕೈಯಲ್ಲಿ ಸುತ್ತಿಗೆ ಮತ್ತು ಟೇಪ್ ಹಿಡಿದು ಬಂದರೆ ಇವರನ್ನು ವೈದ್ಯ ಎನ್ನಬೇಕೋ ಅಥವಾ ಬಡಗಿ ಎನ್ನಬೇಕೋ? ಸುತ್ತಿಗೆ ಇರುವುದು ಪೋಲಿಯೊ ಪೀಡಿತರ ಮೊಣಕಾಲಿನ ಪ್ರತಿವರ್ತನ ಪರೀಕ್ಷೆಗೆ. ಟೇಪ್ ಇರುವುದು ಕೈ- ಕಾಲಿನ ಉದ್ದ ಅಳೆಯಲು. ಕೋನಗಳನ್ನು ಅಳೆಯಲು ಗೋನಿಯೋಮೀಟರ್ ಹೊಂದಿರುವ ಈ ವೈದ್ಯ ಬಿಲ್ ಗೇಟ್ಸ್ ಗಮನ ಸೆಳೆದಿದ್ದಾರೆ.

ಇಡೀ ಜೀವನವನ್ನು ಪೋಲಿಯೊ ಪೀಡಿತರ ಸೇವೆಗೆ ಮುಡಿಪಾಗಿಟ್ಟ ದೆಹಲಿಯ ವೈದ್ಯ ಡಾ. ಮ್ಯಾಥ್ಯೂ ವರ್ಗೀಸ್ ಬಗ್ಗೆ ಮೈಕ್ರೋಸಾಫ್ಟ್ ಸಂಸ್ಥಾಪಕ ತಮ್ಮ ಬ್ಲಾಗ್ "ಗೇಟ್ಸ್‌ನೋಟ್ಸ್"ನಲ್ಲಿ ಬರೆದಿದ್ದಾರೆ. ಗೇಟ್ಸ್ ಪ್ರಕಾರ, ಅವರು ಇಡೀ ವಿಶ್ವದಲ್ಲಿ ರಿಯಲ್ ಲೈಫ್ ಹೀರೊ ಎಂದು ಪರಿಗಣಿಸುವ ಐವರ ಪೈಕಿ ವರ್ಗೀಸ್ ಕೂಡಾ ಒಬ್ಬರು.

ಈ ಬಗ್ಗೆ ಮ್ಯಾಥ್ಯೂಸ್ ಅವರ ಪ್ರತಿಕ್ರಿಯೆ ಕೇಳಿದಾಗ, "ಗೇಟ್ಸ್ ಗುರುತಿಸಿದ ಮಾತ್ರಕ್ಕೆ ನನ್ನ ಕೆಲಸವೇನೂ ಬದಲಾಗುವುದಿಲ್ಲ. ಆದರೆ ಇದು ಪೋಲಿಯೊ ಪೀಡಿತರ ಚಿಕಿತ್ಸೆಗೆ ಹಲವು ಮಂದಿ ಯುವ ವೈದ್ಯರನ್ನು ಆಕರ್ಷಿಸಲು ನೆರವಾಗಲಿದೆ ಎಂಬ ವಿಶ್ವಾಸ ನನ್ನದು" ಎಂದು ಹೇಳಿದರು.

ಹಳೆ ದೆಹಲಿಯ ಸೆಂಟ್ ಸ್ಟೀಫನ್ಸ್ ಆಸ್ಪತ್ರೆಯಲ್ಲಿ ದೇಶದ ಏಕೈಕ ಪೋಲಿಯೊ ವಾರ್ಡ್ ನಿರ್ವಹಿಸುತ್ತಿರುವ ಮ್ಯಾಥ್ಯೂಸ್ ತಮ್ಮ ಇಡೀ ಜೀವನವನ್ನು ಪೋಲಿಯೊ ಪೀಡಿತರ ಪುನಃ ಸ್ಥಾಪನೆಗೆ ಮುಡಿಪಾಗಿಟ್ಟಿದ್ದಾರೆ. 2011ರಲ್ಲಿ ಭಾರತದಿಂದ ಪೋಲಿಯೊ ನಿರ್ಮೂಲನೆ ಮಾಡಿದ್ದರೂ, ಸಾವಿರಾರು ಮಂದಿ ಪೋಲಿಯೊ ಸಂಬಂಧಿ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಇವರ ಸೇವೆಗಾಗಿಯೇ 1987ರಿಂದ ಈ ಆಸ್ಪತ್ರೆ ಸೇವೆಯಲ್ಲಿ ನಿರತವಾಗಿದೆ. ಈ ವಾರ್ಡ್ ರೋಗಿಗಳಿಲ್ಲದೇ ಖಾಲಿಯಾಬೇಕು ಎನ್ನುವುದು ಅವರ ಕನಸು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News