ವಸತಿ ಶಾಲೆಗಳು ಮೃತ್ಯು ಶಾಲೆಗಳಾಗದಿರಲಿ

Update: 2018-01-29 05:04 GMT

ಕೆ.ಆರ್.ಪೇಟೆಯ ಅಲ್ಪಸಂಖ್ಯಾತ ವಸತಿಶಾಲೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಝೈಬುನ್ನಿಸಾ ಎನ್ನುವ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಬಡ ಕುಟುಂಬದ ಎಳೆಯ ಬಾಲಕಿ ತನ್ನ ಉಪನ್ಯಾಸಕನ ಚಿತ್ರಹಿಂಸೆ ತಾಳದೆ ಆತ್ಮಹತ್ಯೆ ಮಾಡಿಕೊಂಡಳು. ಇದು ಕೊಲೆ ಆಗಿರುವ ಸಾಧ್ಯತೆಯೂ ಇದೆ ಎಂದು ಈಗಾಗಲೇ ಆಕೆಯ ಕುಟುಂಬ ಆರೋಪಿಸಿದೆ. ಈ ಸಾವನ್ನು ತಡೆಯುವ ಎಲ್ಲ ಅವಕಾಶಗಳೂ ಇದ್ದವುು. ಯಾಕೆಂದರೆ ಬಾಲಕಿ ಈ ಹಿಂದೆಯೇ ಹಲವು ಬಾರಿ ಉಪನ್ಯಾಸಕನ ಚಿತ್ರಹಿಂಸೆಯ ಕುರಿತಂತೆ ಕುಟುಂಬಸ್ಥರಲ್ಲಿ ತನ್ನ ದುಃಖವನ್ನು ತೋಡಿಕೊಂಡಿದ್ದಾಳೆ. ದೂರವಾಣಿಯಲ್ಲಿ ಆಕೆಯ ಮಾತುಗಳು ದಾಖಲಾಗಿದೆ.

ವಿಷಾದನೀಯ ಸಂಗತಿಯೆಂದರೆ, ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಲು ಬಾಲಕಿಗೇ ಸೂಚನೆ ನೀಡಿದ್ದಾರೆ. ಎಂಟನೆ ತರಗತಿಯ ವಿದ್ಯಾರ್ಥಿನಿಯೊಬ್ಬಳು ಪೊಲೀಸ್ ಠಾಣೆಗೆ ತೆರಳಿ ತನ್ನ ಅಧ್ಯಾಪಕನ ವಿರುದ್ಧ ದೂರು ನೀಡುವುದು ಅಸಾಧ್ಯದ ಮಾತು. ವಸತಿ ಶಾಲೆಯ ಮುಖ್ಯಸ್ಥರಿಗೆ ದೂರು ನೀಡುವ ಬಗ್ಗೆಯೂ ಆಕೆ ಅಂಜಿಕೆ ವ್ಯಕ್ತಪಡಿಸಿದ್ದಾಳೆ. ಕನಿಷ್ಠ ಱಮನೆಗೆ ವಾಪಾಸ್ ಕರೆದುಕೊಂಡು ಬರುತ್ತೇವೆ, ಸಹನೆಯಿಂದಿರುೞಎಂದು ಭರವಸೆ ನೀಡಿದ್ದರೂ ಝೈಬುನ್ನಿಸಾ ಬದುಕಿರುತ್ತಿದ್ದಳೋ ಏನೋ. ಆದರೆ ಅಷ್ಟೆಲ್ಲ ಯೋಚಿಸುವಷ್ಟು ವಿದ್ಯಾವಂತ ಕುಟುಂಬ ಅದಾಗದೇ ಇರುವುದು ಮತ್ತು ಅವರಿಗೆ ತೀರಾ ಬಡತನದ ಹಿನ್ನೆಲೆಯಿರುವುದರಿಂದ ಹೊಂದಾಣಿಕೆ ಮಾಡಿಕೊಂಡು ಹೋಗಲು ಸೂಚನೆ ನೀಡಿರಬಹುದು.

ಇದೇ ಸಂದರ್ಭದಲ್ಲಿ ಈ ಘಟನೆಗೆ ಇನ್ನೊಂದು ಮುಖವೂ ಇದೆ. ವಿದ್ಯೆ ಕಲಿಸುವ ಗುರುವೊಬ್ಬ ಜಾತಿವಾದಿ, ಕೋಮುವಾದಿಯಾದಾಗ ಅದು ವಿದ್ಯಾರ್ಥಿಗಳ ಮೇಲೆ ಬೀರುವ ಪರಿಣಾಮವನ್ನೂ ಪ್ರಕರಣ ಹೇಳುತ್ತಿದೆ. ಶಾಲೆಗಳ ಮೆಟ್ಟಿಲನ್ನೂ ತಿಳಿದು ಕಳಂಕಗೊಳಿಸುತ್ತಿರುವ ಕೋಮುಮನಸ್ಥಿತಿ ವಿದ್ಯಾರ್ಥಿಗಳ ಭವಿಷ್ಯವನ್ನು ಚಿವುಟಿ ಹಾಕುತ್ತಿದೆ. ಝೈಬುನ್ನಿಸಾ ಬದುಕಿನ ದುರಂತದಲ್ಲೂ ಈ ಕೋಮುವಾದಿ ಮನಸ್ಸು ಕೆಲಸ ಮಾಡಿತು. ಬಾಲಕಿಯನ್ನು ಈತ ಧಾರ್ಮಿಕವಾಗಿ ನಿಂದನೆ ಮಾಡುತ್ತಿದ್ದ ಮಾತ್ರವಲ್ಲ, ಸಾರ್ವಜನಿಕವಾಗಿ ಆಕೆಯನ್ನು ಹೀನಾಯವಾಗಿ ಅವಮಾನಿಸುತ್ತಿದ್ದ. ಒಬ್ಬ ಬಾಲಕಿಯ ಮೇಲೆ ಅದು ಸಹಜವಾಗಿಯೇ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ. ವಿದ್ಯಾರ್ಥಿಗಳ ತಪ್ಪುಗಳನ್ನು ತೋರಿಸಿ ಅದನ್ನು ತಿದ್ದಿ ಅವರ ವ್ಯಕ್ತಿತ್ವವನ್ನು ಅರಳಿಸಬೇಕಾದ ಶಿಕ್ಷಕನೇ ಎಳೆ ಮಕ್ಕಳಲ್ಲಿ ವಿಷ ಬಿತ್ತಿದ್ದಾನೆ ಎನ್ನುವುದು ಆತ ತನ್ನ ವೃತ್ತಿಗೆ ಎಸಗಿದ ಮಹಾದ್ರೋಹವೇ ಆಗಿದೆ. ಜೊತೆಗೆ ಬಾಲಕಿಯ ಸಾವನ್ನು ನಾವು ಆತ್ಮಹತ್ಯೆ ಎಂದೂ ಕರೆಯುವಂತಿಲ್ಲ. ಯಾಕೆಂದರೆ, ಬಾಲಕಿಯನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಿದ ಅಧ್ಯಾಪಕನೇ ಆತ್ಮಹತ್ಯೆಗೈದ ಬಾಲಕಿಯನ್ನು ಆಸ್ಪತ್ರೆಗೆ ಒಯ್ದಿದ್ದಾನೆ. ಬಾಲಕಿಯ ಮೇಲೆ ಹಲ್ಲೆ ನಡೆಸಿದಾಗ ಸಾವು ಸಂಭವಿಸಿರುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಆತ್ಮಹತ್ಯೆಯಾಗಿದ್ದರೂ, ಪರೋಕ್ಷವಾಗಿ ಅದು ಬರ್ಬರ ಕೊಲೆಗೆ ಸಮಯವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕ ಗಲ್ಲು ಶಿಕ್ಷೆಗೆ ಅರ್ಹನಾಗಿದ್ದಾನೆ.

ಇದೇ ಸಂದರ್ಭದಲ್ಲಿ ಒಂದು ಅಂಶವನ್ನು ನಾವು ಗಮನಿಸಬೇಕಾಗಿದೆ. ಇಂದು ಮಕ್ಕಳು ಅದರಲ್ಲಿ ಹೆಣ್ಣು ಮಕ್ಕಳು ಕುಟುಂಬದೊಳಗೇ ಸುರಕ್ಷಿತರಲ್ಲ. ತಮ್ಮ ಮನೆಯೊಳಗೆ ಸಂಬಂಧಿಕರಿಂದಲೇ ಅನೇಕಬಾರಿ ಲೈಂಗಿಕ ದೌರ್ಜನ್ಯಗಳಿಗೆ ಒಳಗಾಗುತ್ತಾರೆ ಎನ್ನುವುದನ್ನು ಈಗಾಗಲೇ ಹಲವು ಸಮೀಕ್ಷೆಗಳು ಬಯಲು ಮಾಡಿವೆ. ಮನೆಯೊಳಗೆ ಮತ್ತು ಹೊರಗೆ ಮಕ್ಕಳು ಎದುರಿಸಬಹುದಾದ ಲೈಂಗಿಕ ಶೋಷಣೆಯನ್ನು, ದೌರ್ಜನ್ಯವನ್ನು ತಡೆಯಲು ಈಗಾಗಲೇ ಬೇರೆ ಬೇರೆ ಸಂಸ್ಥೆಗಳು ಜಾಗೃತಿ ಕಾರ್ಯಕ್ರಮಗಳನ್ನು ಹಾಕಿಕೊಂಡಿವೆ.ಹೀಗಿರುವಾಗ, ಯಾವುದೇ ಒಂದು ವಸತಿ ನಿಲಯದಲ್ಲಿ ಅಪ್ರಾಪ್ತ ಬಾಲಕಿಯರು ಎಷ್ಟರಮಟ್ಟಿಗೆ ಸುರಕ್ಷಿತರಾಗಿ ಇರಬಲ್ಲರು? ಇಂದು ರಾಜ್ಯದಲ್ಲಿ ಅಲ್ಪಸಂಖ್ಯಾತರಿಗಾಗಿ ಮೂರು ವಸತಿ ಶಾಲೆಗಳಿವೆ. ಕೆ. ಆರ್. ಪೇಟೆಯ ವಸತಿ ಶಾಲೆ ಇತ್ತೀಚೆಗಷ್ಟೇ ಆರಂಭವಾಗಿರುವುದು.

ಈ ವಸತಿ ಶಾಲೆಗಳು ನಿರ್ಮಾಣವಾಗಿರುವುದೇ ಆರ್ಥಿಕವಾಗಿ ದುರ್ಬಲರಾದವರು ಶಿಕ್ಷಣ ಪಡೆಯಬೇಕು ಎನ್ನುವಂತಹ ಮಹದುದ್ದೇಶದಿಂದ. ಮುಸ್ಲಿಮರಲ್ಲಂತೂ ಶಿಕ್ಷಣ ಪಡೆಯುವವರ ಸಂಖ್ಯೆ ತೀರಾ ಕಳಪೆಯಾಗಿದೆ. ಇಂತಹ ಸಂದರ್ಭದಲ್ಲಿ ವಸತಿ ಶಾಲೆಗಳು ಅವರ ಪಾಲಿಗೆ ಹೊಸ ಬದುಕನ್ನೇ ತೆರೆಯಬಹುದು. ಇದು ಕೇವಲ ಅಲ್ಪಸಂಖ್ಯಾತ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಮೂಲಕ ಸಹಸ್ರಾರು ದಲಿತ ಬಾಲಕ, ಬಾಲಕಿಯರು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆದರೆ ಈ ವಸತಿ ಶಾಲೆಗಳಲ್ಲಿ ಇವರೆಲ್ಲರು ಎಷ್ಟರ ಮಟ್ಟಿಗೆ ಸುರಕ್ಷಿತರು? ಎನ್ನುವ ಮಹತ್ವದ ಪ್ರಶ್ನೆಯನ್ನು ಝೈಬುನ್ನಿಸಾ ಪ್ರಕರಣ ಎತ್ತಿದೆ. ಸಾಧಾರಣವಾಗಿ ವಸತಿ ಶಾಲೆಗಳಿಗೆ ಆಗಾಗ ಉನ್ನತ ಅಧಿಕಾರಿಗಳು ಅಥವಾ ರಾಜಕಾರಣಿಗಳು ಆಕಸ್ಮಿಕವಾಗಿ ಭೇಟಿ ನೀಡಿ ಅಲ್ಲಿನ ಆಹಾರ ಪದಾರ್ಥಗಳನ್ನು ಪರಿಶೀಲಿಸುವುದಿದೆ. ವಸತಿ ಶಾಲೆಗಳ ಆಹಾರ ಮತ್ತು ಸ್ವಚ್ಛತೆಗಳ ಕುರಿತಂತೆ ಆಗಾಗ ಮಾಧ್ಯಮಗಳಲ್ಲಿ ವಿಶೇಷ ವರದಿಗಳು ಪ್ರಕಟವಾಗುತ್ತಲೇ ಇರುತ್ತವೆ.

ಹಾಗೆಂದು ಸರಕಾರ ವಸತಿಶಾಲೆಗಳಿಗೆ ಕಳಪೆ ಆಹಾರ ವಿತರಿಸುತ್ತದೆ ಎಂದು ಭಾವಿಸಬೇಕಾಗಿಲ್ಲ. ಈ ವಸತಿಶಾಲೆಗಳ ಆಹಾರಗಳಿಗಾಗಿ ವ್ಯಯಿಸುವ ಹಣ, ಹಲವು ಮಧ್ಯವರ್ತಿಗಳ ನಡುವೆ ಹಂಚಿಹೋಗುತ್ತದೆ. ಇದರೊಳಗೆ ವಸತಿ ಶಾಲೆಗಳ ಮುಖ್ಯಸ್ಥರಿಂದ ಹಿಡಿದು ವಾರ್ಡನ್, ಅಡುಗೆಭಟ್ಟರೂ ಶಾಮೀಲಾಗಿರುತ್ತಾರೆ. ಈ ಕುರಿತಂತೆ ವಿದ್ಯಾರ್ಥಿಗಳು ಯಾರ ಬಳಿ ದೂರು ನೀಡಬೇಕು? ಯಾರ ದೂರು ನೀಡಬೇಕೋ ಅವರೇ ಈ ಅವ್ಯವಹಾರಗಳಲ್ಲಿ ಶಾಮೀಲಾದರೆ? ಕಳಪೆ ಆಹಾರ, ಅಶುಚಿತ್ವ ಇತ್ಯಾದಿಗಳ ಕುರಿತಂತೆ ದೂರುಗಳನ್ನು ನೀಡಿದರೆ ವಿದ್ಯಾರ್ಥಿಯ ವಿರುದ್ಧವೇ ಕ್ರಮ ತೆಗೆದುಕೊಳ್ಳಬಹುದು. ಕೆಲವೊಮ್ಮೆ ಅಂತಹ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸಿ ಅವರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ದೌರ್ಜನ್ಯ ನೀಡಬಹುದು. ಮಕ್ಕಳು ಬಡ ಕುಟುಂಬದಿಂದ ಬಂದವರು. ಮರಳಿ ಮನೆಗೆ ಹೋಗುವಂತಿಲ್ಲ. ಪಾಲಕರೂ ಮಕ್ಕಳನ್ನೇ ಅಪರಾಧಿಗಳನ್ನಾಗಿ ಮಾಡಿ ಬಾಯಿ ಮುಚ್ಚಿಸುವ ಸಾಧ್ಯತೆಗಿಳಿರುತ್ತವೆ. ಆದರೆ ಎಲ್ಲಕ್ಕಿಂತ ಅಪಾಯಕಾರಿಯಾದುದು ವಿದ್ಯಾರ್ಥಿಗಳ ಮೇಲೆ ನಡೆಯಬಹುದಾದ ಲೈಂಗಿಕ ಮತ್ತು ದೈಹಿಕ ದೌರ್ಜನ್ಯಗಳು. ಇಂತಹ ದೌರ್ಜನ್ಯಗಳನ್ನು ಅರ್ಥಮಾಡಿಕೊಳ್ಳಲು ಬಾಲಕ, ಬಾಲಕಿಯರು ಅಪ್ರಬುದ್ಧರಾಗಿತ್ತಾರೆ.

ಜೊತೆಗೆ ಈ ದೌರ್ಜನ್ಯವನ್ನು ಉಳಿದವರ ಬಳಿ ಹಂಚಿಕೊಳ್ಳುವುದಕ್ಕೂ ಅವರು ಹಿಂದೇಟು ಹಾಕಬಹುದು. ಸಾಧಾರಣವಾಗಿ ಪಾಲಕರ ಬಳಿಯೇ ಮಕ್ಕಳು ಲೈಂಗಿಕ ಶೋಷಣೆಗಳನ್ನು ಹೇಳಲು ಅಂಜುವಾಗ, ಶಾಲಾ ಮುಖ್ಯಸ್ಥರ ಬಳಿ ಹೇಗೆ ಅದನ್ನು ತೋಡಿಕೊಳ್ಳಬಹುದು. ಈ ಕಾರಣದಿಂದಲೇ ಹೆಚ್ಚಿನ ವಸತಿಶಾಲೆಗಳಲ್ಲಿ ಮಕ್ಕಳ ಮೇಲೆ ನಡೆಯುವ ಇಂತಹ ದೌರ್ಜನ್ಯಗಳು ಸುಲಭದಲ್ಲಿ ಮುಚ್ಚಿ ಹೋಗುತ್ತವೆ. ಮಕ್ಕಳು ಅದನ್ನು ಯಾರಲ್ಲೂ ಹೇಳಿಕೊಳ್ಳಲಾಗದೆ ಒಳಗೊಳಗೆ ಬಾಡುತ್ತಾ ಹೋಗುತ್ತಾರೆ. ಈ ನಿಟ್ಟಿನಲ್ಲಿ ಈ ರಾಜ್ಯದಲ್ಲಿರುವ ಎಲ್ಲ ವಸತಿಶಾಲೆಗಳಿಗೂ ಕನಿಷ್ಠ ತಿಂಗಳಿಗೊಮ್ಮೆಯಾದರೂ ಉನ್ನತ ತಜ್ಞರು ಭೇಟಿ ನೀಡಿ ಪ್ರತಿ ಮಕ್ಕಳನ್ನು ಪ್ರತ್ಯೇಕವಾಗಿ ಕೌನ್ಸಿಲಿಂಗ್ ನಡೆಸುವ ಪದ್ಧತಿ ಶುರುವಾಗಬೇಕು. ಹಾಗೆಯೇ ಎಲ್ಲ ವಸತಿ ಶಾಲೆಗಳು ಕಡ್ಡಾಯವಾಗಿ ದೂರು ಪೆಟ್ಟಿಗೆಗಳನ್ನು ಹೊಂದಬೇಕು. ಮತ್ತು ಆ ಪೆಟ್ಟಿಗೆಯ ಹೊಣೆಗಾರಿಕೆಯನ್ನು ಉನ್ನತ ಅಧಿಕಾರಿಗಳೇ ನಿಭಾಯಿಸಬೇಕು. ಕಡ್ಡಾಯವಾಗಿ ಸಿಸಿ ಕ್ಯಾಮರಾಗಳನ್ನು ಹೊಂದುವುದು ಕೂಡ ಅತ್ಯಗತ್ಯವಾಗಿದೆ. ಹೀಗಾದಲ್ಲಿ ವಸತಿ ಶಾಲೆಯಲ್ಲಿ ಎಳೆ ಮಕ್ಕಳ ಬದುಕು ಒಂದಿಷ್ಟಾದರೂ ಸುರಕ್ಷಿತವಾಗಿರಬಹುದು. ಇಲ್ಲವಾದರೆ ವಸತಿ ಶಾಲೆಗಳೇ ಈ ಮಕ್ಕಳ ಭವಿಷ್ಯವನ್ನು ನುಂಗಿ ಹಾಕುವ ಕಸಾಯಿಖಾನೆಗಳಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News