ಗಾಂಧೀಯುಗ ಸೃಷ್ಟಿಸಿದ ಅನನ್ಯ ವ್ಯಕ್ತಿತ್ವ

Update: 2018-01-29 18:33 GMT

ಡಾ. ನಟರಾಜ್ ಹುಳಿಯಾರ್ ಅವರ ಸಂಪಾದಕತ್ವದಲ್ಲಿ ‘ನಮ್ಮ ಸುತ್ತಣ ಗಾಂಧಿಗಳು’ ಮಾಲಿಕೆಯನ್ನು ಪ್ರೇರಣಾ ಪ್ರಕಾಶನ ಹೊರ ತರುತ್ತಿದೆ. ಇದರ ಸರಣಿಯಲ್ಲಿ ಬಿ. ಚಂದ್ರೇಗೌಡ ಅವರು ‘ಗಾಂಧೀವಾದಿ ಸುಬ್ರಹ್ಮಣ್ಯ ಶೆಟ್ಟರು’ ಕೃತಿಯನ್ನು ಬರೆದಿದ್ದಾರೆ. ಎಲ್ಲ ರಾಜಕಾರಣಿಗಳೂ ತಮ್ಮನ್ನು ತಾವು ಗಾಂಧೀವಾದಿಗಳು ಎಂದೇ ಕರೆದುಕೊಳ್ಳುತ್ತಾರೆ. ಇವರ ಗದ್ದಲದಲ್ಲಿ ನಮ್ಮ ನಾಡಿನ ಯಾವುದೇ ಮೂಲೆಯಲ್ಲಿ ಗಾಂಧೀಜಿಯ ನಿಜವಾದ ಆದರ್ಶಗಳನ್ನಿಟ್ಟು ಬದುಕುತ್ತಾ ಬಂದಿರುವ, ಗಾಂಧಿಯ ವೌಲ್ಯಗಳನ್ನು ಸಮಾಜದಲ್ಲಿ ಹರಡುತ್ತಾ ಬಂದಿರುವ ಸರಳ ಜೀವಿಗಳು ಬದಿಗೆ ಸರಿದಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಅನಾಮಧೇಯರಾಗಿ ಬಾಳಿ ಬದುಕಿದ ನಿಜವಾದ ಅರ್ಥದ ಗಾಂಧಿವಾದಿಗಳನ್ನು ಗುರುತಿಸಿ ಅವರ ಬದುಕನ್ನು ಜನರಿಗೆ ಪರಿಚಯಿಸುವ ಉದ್ದೇಶವನ್ನು ಈ ಮಾಲಿಕೆ ಹೊಂದಿದೆ. ಅದರ ಭಾಗವಾಗಿ ಇಲ್ಲಿ ಅನನ್ಯ ಗಾಂಧೀವಾದಿ ಸುಬ್ರಹ್ಮಣ್ಯ ಶೆಟ್ಟರ ಬದುಕಿನ ಹಾದಿಯನ್ನು ತೆರೆದಿಡಲಾಗಿದೆ. 1910-1973ರವರೆಗೆ ಬಾಳಿ ಬದುಕಿದ ಸುಬ್ರಹ್ಮಣ್ಯ ಶೆಟ್ಟರ ಸರಳ ಆದರ್ಶ ಬದುಕು ಚಕಿತಗೊಳಿಸುವಂತಹದು. ಗಾಂಧೀಜಿಯವರು ಅಜ್ಜಂಪುರದ ಸುತ್ತಮುತ್ತಲ ಪ್ರದೇಶಗಳಿಗೆ ಭೇಟಿ ಕೊಡುವ ಮೊದಲೇ ಗಾಂಧೀಜಿಯವರ ಕಟ್ಟಾ ಅನುಯಾಯಿಯಾಗಿದ್ದರು ಶೆಟ್ಟರು. ಗಾಂಧೀಜಿಯ ಬಗೆಗಿನ ಗೌರವದಿಂದ ಅವರ ಮೊದಲ ಹೆಸರನ್ನೇ ತಮ್ಮ ಮಗನಿಗೂ ಇಟ್ಟಿದ್ದರು. ಮಗ ಮೋಹನದಾಸ ತೀರಿಕೊಳ್ಳುವಾಗ ಶೆಟ್ಟರು ಜೈಲಿನಲ್ಲಿದ್ದರು. ‘ಇನ್ನು ಮುಂದೆ ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸುವುದಿಲ್ಲವೆಂದು ಮುಚ್ಚಳಿಕೆ ಬರೆದು ಕೊಟ್ಟು ಮನೆಗೆ ಹೋಗಿ’ ಎಂದು ಬ್ರಿಟಿಷರು ಔದಾರ್ಯ ತೋರಿದಾಗ ಅದನ್ನು ನಿರಾಕರಿಸಿದವರು ಶೆಟ್ಟರು. ಇಂತಹ ಹೊತ್ತಿನಲ್ಲಿ, ಬ್ರಿಟಿಷರ ಜೊತೆಗೆ ರಾಜಿ ಮಾಡಿ ಕ್ಷಮೆಯಾಚನೆ ಮಾಡಿದ ಸಾವರ್ಕರ್‌ರಂತಹ ನಾಯಕರು ನೆನಪಾಗುತ್ತಾರೆ. ಶೆಟ್ಟರಂತಹ ಸ್ವಾತಂತ್ರ ಹೋರಾಟಗಾರರ ಮುಂದೆ ಸಾವರ್ಕರ್‌ರಂತಹವರು ಸಣ್ಣವರಾಗುತ್ತಾರೆ.

ವೈಯಕ್ತಿಕವಾಗಿಯೇ ತುಂಬಾ ಉದಾರಿಯಾಗಿರುವ ಶೆಟ್ಟರ ಮೇಲೆ ಗಾಂಧೀಜಿಯ ಪ್ರಭಾವ ತೀವ್ರವಾದ ಮೇಲೆ ಅವರು ಸಾಮಾಜಿಕ ಸುಧಾರಣೆಯಲ್ಲೂ ಭಾಗವಹಿಸಿದರು. ಶೆಟ್ಟರ ಕಾಲಘಟ್ಟದ ಹಲವು ಕುತೂಹಲಕರವಾದ ವಿಷಯಗಳನ್ನು ಅತ್ಯಂತ ಸರಳವಾಗಿ ಬಿ. ಚಂದ್ರೇಗೌಡ ಅವರು ನಿರೂಪಿಸುತ್ತಾ ಹೋಗುತ್ತಾರೆ. ಹಾಗೆಯೇ ನಾಡಿನ ಬೇರೆ ಬೇರೆ ಲೇಖಕರು, ನಾಯಕರು ಶೆಟ್ಟರ ಕುರಿತಂತೆ ಹೊಂದಿದ್ದ ಅಭಿಪ್ರಾಯಗಳನ್ನೂ ದಾಖಲಿಸಿದ್ದಾರೆ. ‘ಸುಬ್ರಹ್ಮಣ್ಯ ಶೆಟ್ಟರಂಥವರು ಒಂದು ತಾಲೂಕಿಗೆ ಒಬ್ಬರು ಸಿಕ್ಕರೂ ಸಾಕು, ನಮ್ಮ ರಾಜಕಾರಣ ಸಲೀಸಾಗಿ ನಡೆಯುತ್ತದೆ’ ಎಂಬ ಪಿ. ಲಂಕೇಶರ ಮಾತು ಅಕ್ಷರಶಃ ಸತ್ಯ.
ಕೃತಿಯ ಒಟ್ಟು ಪುಟಗಳು 60. ಮುಖಬೆಲೆ 50 ರೂ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News