ಮೊದಲ ಟೆಸ್ಟ್ ನಲ್ಲಿ ಹಕ್ ಶತಕ: ಬಾಂಗ್ಲಾ 374/4

Update: 2018-01-31 18:56 GMT

ಚಿತ್ತಗಾಂಗ್, ಜ.31: ಇಲ್ಲಿ ಆರಂಭಗೊಂಡ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ತಂಡದ ಮೊಮಿನುಲ್ ಹಕ್ ಅವರು ಸೊಗಸಾದ ಶತಕ ದಾಖಲಿಸಿದ್ದಾರೆ.

ಟೆಸ್ಟ್‌ನ ಮೊದಲ ದಿನವಾಗಿರುವ ಬುಧವಾರ ಬಾಂಗ್ಲಾದೇಶ ತಂಡ ಹಕ್ ಶತಕದ ನೆರವಿನಲ್ಲಿ ದಿನದಾಟದಂತ್ಯಕ್ಕೆ 90 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 374 ರನ್ ಗಳಿಸಿದೆ.

175 ರನ್ ಗಳಿಸಿರುವ ಹಕ್ ಮತ್ತು 9 ರನ್ ಗಳಿಸಿರುವ ಮಹ್ಮುದುಲ್ಲಾ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.

ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ತಂಡ ಮೊದಲ ವಿಕೆಟ್‌ಗೆ 72 ರನ್ ಗಳಿಸಿತ್ತು. ಆರಂಭಿಕ ದಾಂಡಿಗರಾದ ತಮೀಮ್ ಇಕ್ಬಾಲ್ ಮತ್ತು ಇಮ್ರುಲ್ ಕೈಸ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು.

ತಮೀಮ್ ಇಕ್ಬಾಲ್ ಅವರು ಅರ್ಧಶತಕ(52) ದಾಖಲಿಸಿ ದಿಲ್ರುವಾನ್ ಪೆರೇರಾ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಎರಡನೇ ವಿಕೆಟ್‌ಗೆ ಇಮ್ರುಲ್ ಕೈಸ್‌ಗೆ ಹಕ್ ಜೊತೆಯಾದರು. ಇವರ ಜೊತೆಯಾಟದಲ್ಲಿ ಸ್ಕೋರ್ 27.4 ಓವರ್‌ಗಳಲ್ಲಿ 120ಕ್ಕೆ ತಲುಪಿತು. ಅಷ್ಟರಲ್ಲಿ 40 ರನ್ ಗಳಿಸಿದ್ದ ಕೈಸ್ ಅವರನ್ನು ಸಂಡಕನ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.

 ಮೂರನೇ ವಿಕೆಟ್‌ಗೆ ಹಕ್ ಮತ್ತು ಮುಶ್ಫಿಕುರ್ರಹೀಮ್ ಜೊತೆಯಾಗಿ ಲಂಕಾದ ಬೌಲರ್‌ಗಳ ಬೆವರಿಳಿಸಿದರು. ಹಕ್ 26ನೇ ಟೆಸ್ಟ್ ನಲ್ಲಿ 5ನೇ ಶತಕ ದಾಖಲಿಸಿದರು. 96 ಎಸೆತಗಳಲ್ಲಿ 13 ಬೌಂಡರಿಗಳ ಸಹಾಯದಿಂದ ಅವರು ಶತಕ ಪೂರೈಸಿದರು.

 ವಿಕೆಟ್ ಕೀಪರ್ ಮುಶ್ಫಿಕುರ್ರಹೀಮ್ ಶತಕ ದಾಖಲಿಸುವ ಯತ್ನದಲ್ಲಿ ಎಡವಿದರು. ಅವರು 92 ರನ್ (192ಎ, 10ಬೌ) ಗಳಿಸಿ ಲಕ್ಮಲ್ ಎಸೆತದಲ್ಲಿ ಡಿಕ್ವೆಲ್ಲಾಗೆ ಕ್ಯಾಚ್ ನೀಡಿ ವಾಪಸಾದರು. 59ನೇ ಟೆಸ್ಟ್ ಆಡುತ್ತಿರುವ ರಹೀಮ್ 6ನೇ ಶತಕ ವಂಚಿತಗೊಂಡರು. ಹಕ್ ಮತ್ತು ರಹೀಮ್ ಜೊತೆಯಾಟದಲ್ಲಿ ತಂಡದ ಖಾತೆಗೆ 236 ರನ್ ಸೇರಿಸಿದರು.

ರಹೀಮ್ ನಿರ್ಗಮನದ ಬಳಿಕ ಲಿಟ್ಟನ್ ದಾಸ್ ಕ್ರೀಸ್‌ಗೆ ಆಗಮಿಸಿದ್ದರೂ, ಅವರು ಖಾತೆ ತೆರೆಯದೆ ಲಕ್ಮಲ್ ಎಸೆತದಲ್ಲಿ ಬೌಲ್ಡ್ ಆಗಿ ವಾಪಸಾದರು.

ಹಕ್ ದ್ವಿಶತಕದ ಕಡೆಗೆ ಹೆಜ್ಜೆ ಇರಿಸಿದ್ದಾರೆ. ಅವರು 203 ಎಸೆತಗಳನ್ನು ಎದುರಿಸಿ 16 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 175 ರನ್ ಗಳಿಸಿದ್ದಾರೆ. ಶ್ರೀಲಂಕಾದ ಲಕ್ಮಲ್ 43ಕ್ಕೆ 2 ವಿಕೆಟ್, ಪೆರೇರಾ ಮತ್ತು ಸಂಡಕನ್ ತಲಾ 1 ವಿಕೆಟ್ ಹಂಚಿಕೊಂಡರು.

ಸಂಕ್ಷಿಪ್ತ ಸ್ಕೋರ್ ವಿವರ

ಬಾಂಗ್ಲಾದೇಶ ತಂಡ 90 ಓವರ್‌ಗಳಲ್ಲಿ 374/4(ಮೊಮಿನಲ್ ಹಕ್ ಔಟಾಗದೆ 175, ಮುಶ್ಫಿಕುರ್ರಹೀಮ್ 92, ಇಕ್ಬಾಲ್ 52, ಕೈಸ್ 40; ಲಕ್ಮಲ್ 43ಕ್ಕೆ 2).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News