ಇಂಡಿಯಾ ಓಪನ್: ಸೈನಾ, ಸಿಂಧು ಶುಭಾರಂಭ

Update: 2018-01-31 19:01 GMT

ಹೊಸದಿಲ್ಲಿ, ಜ.31: ಇಂಡಿಯಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಸೈನಾ ನೆಹ್ವಾಲ್ ಮತ್ತು ಪಿ.ವಿ.ಸಿಂಧು ಅವರು ದ್ವಿತೀಯ ಸುತ್ತು ತಲುಪಿದ್ದಾರೆ.

ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್. ಪ್ರಣೋಯ್ ಅವರು ಸೋತು ನಿರ್ಗಮಿಸಿದ್ದಾರೆ.

 ಇಂಡೋನೇಷ್ಯಾ ಮಾಸ್ಟರ್ಸ್‌ ಫೈನಲ್ ತಲುಪಿದ್ದ ಸೈನಾ ನೆಹ್ವಾಲ್ ಅವರು ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್‌ನ ಸೋಫಿ ಹೊಲ್ಮ್‌ಬೊಯ್ ದಾಹ್ಲ್ ವಿರುದ್ಧ 21-15, 21-9 ಅಂತರದಲ್ಲಿ ಜಯ ಗಳಿಸಿ ಪ್ರಥಮ ಸುತ್ತು ತಲುಪಿದರು.

  ಹಾಲಿ ಚಾಂಪಿಯನ್ ಪಿ.ವಿ. ಸಿಂಧು ಅವರು ಡೆನ್ಮಾರ್ಕ್‌ನ ನಥಾಲಿಯಾ ರೊಯ್ಡೆ ವಿರುದ್ಧ 21-10, 21-13 ಅಂತರದಲ್ಲಿ ಗೆಲುವು ದಾಖಲಿಸಿ ಶುಭಾರಂಭ ಮಾಡಿದರು.

  ಎರಡನೇ ಸುತ್ತಿನಲ್ಲಿ ಸೈನಾ ಡೆನ್ಮಾರ್ಕ್‌ನ ಲಿನೇ ಹೊಜ್‌ಮಾರ್ಕ್ ಅವರನ್ನು ಎದುರಿಸಲಿದ್ದಾರೆ.

 ಸಿಂಧು ಅವರಿಗೆ ಭಾರತದ ವೈದೇಹಿ ಚೌಧರಿ ಅಥವಾ ಬಲ್ಗೇರಿಯದ ಲಿಂಡಾ ಝೆಟ್‌ಚಿರಿ ಸವಾಲು ಎದುರಾಗುವ ನಿರೀಕ್ಷೆ ಇದೆ.

   ಪುರುಷರ ಸಿಂಗಲ್ಸ್‌ನಲ್ಲಿ ಪ್ರಣೋಯ್ ಅವರು ಶ್ರೇಯಾಂಶ್ ಜೈಸ್ವಾಲ್ ವಿರುದ್ಧ 4-21, 6-21 ಅಂತರದಲ್ಲಿ ಸೋಲು ಅನುಭವಿಸಿದರು. ಬಿ. ಸಾಯ್ ಪ್ರಣೀತ್ ಅವರು ರಾಜೀವ್ ಓಸೆಫ್ ವಿರುದ್ಧ 21-11, 17-21, 21-17 ಅಂತರದಲ್ಲಿ ಜಯ ಗಳಿಸಿದರು. ಆಕರ್ಶಿ ಕಶ್ಯಪ್ ಮತ್ತು ರುತ್ವಿಕಾ ಶಿವಾನಿ ಅವರು ವನಿತೆಯರ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತು ತಲುಪಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News