ಮಡಿಕೇರಿ: ಅನಂತಕುಮಾರ್ ಹೆಗಡೆಯನ್ನು ಸಂಪುಟದಿಂದ ಕೈಬಿಡಲು ಆಗ್ರಹಿಸಿ ದಸಂಸ ಪ್ರತಿಭಟನೆ

Update: 2018-02-02 12:01 GMT

ಮಡಿಕೇರಿ, ಫೆ.2 :ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯನ್ನು ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.

ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಜನರಲ್ ತಿಮ್ಮಯ್ಯ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರಮುಖರು, ಸಚಿವ ಅನಂತಕುಮಾರ್ ಹೆಗಡೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸರ್ವ ಜನರ ಉನ್ನತಿಗಾಗಿ ರಚಿಸಿರುವ ಸಂವಿಧಾನವನ್ನು ಬದಲಾಯಿಸುವ ಮಾತನಾಡಿರುವುದಲ್ಲದೆ ದಲಿತ ಹೋರಾಟಗಾರರನ್ನು ಬೊಗಳುವ ನಾಯಿಗೆ ಹೋಲಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕೇಂದ್ರ ಸಚಿವರು ಸರಕಾರದ ಪ್ರತಿನಿಧಿಯಾಗಿ ಸರ್ವ ಜನರನ್ನು ಸಮಾನತೆಯಿಂದ ಕಾಣಬೇಕು. ಆದರೆ ಅನಂತಕುಮಾರ ಹೆಗಡೆ ಅವರು ಸಚಿವರಾದ ನಂತರ ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಸಮಾಜವನ್ನು ಒಡೆದು ಆಳುತ್ತಿದ್ದಾರೆ. ಅದರಲ್ಲೂ ದಲಿತ ಸಮುದಾಯವನ್ನು ಹೀನಾಯವಾಗಿ ಕಾಣುತ್ತಿದ್ದು, ನಮಗೆ ಅತೀವ ನೋವುಂಟಾಗಿದೆ ಎಂದು ಸಮಿತಿಯ ಜಿಲ್ಲಾ ಸಂಚಾಲಕರಾದ ಹೆಚ್.ಎಲ್.ದಿವಾಕರ್ ಆರೋಪಿಸಿದರು.

ಸಂವಿಧಾನವನ್ನು ಬದಲಾಯಿಸುವುದಕ್ಕಾಗಿಯೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಹೇಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ ಮಾಡಿದ್ದಾರೆ. ಇಷ್ಟು ಸಾಲದು ಎಂಬಂತೆ ದಲಿತ ಸಮುದಾಯವನ್ನೇ ಗುರಿಯಾಗಿಸಿಕೊಂಡು ತಮ್ಮ ಭಾಷಣಗಳಲ್ಲಿ ದಲಿತರನ್ನು ಹೀನಾಯವಾಗಿ ಕಾಣುವ ಪ್ರಸಂಗಗಳು ಕಾಣುತ್ತಿವೆ. ಇತ್ತೀಚೆಗೆ ಬಳ್ಳಾರಿಯಲ್ಲಿ ದಲಿತ ಹೋರಾಟಗಾರರನ್ನು ಬೀದಿಯಲ್ಲಿ ಬೊಗಳುವ ನಾಯಿಗಳು ಎಂದು ಅವಹೇಳನ ಮಾಡಿರುವ ಸಚಿವ ಅನಂತಕುಮಾರ್ ಹೆಗಡೆ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು, ಸಂಸದ ಸ್ಥಾನದಿಂದ ವಜಾಗೊಳಿಸಬೇಕು. ಸಂವಿಧಾನವನ್ನು ಅಪಮಾನ ಮಾಡಿದ ಕಾರಣಕ್ಕಾಗಿ ಮತ್ತು ದಲಿತರನ್ನು ಅವಮಾನಿಸಿರುವ ಹಿನ್ನೆಲೆಯಲ್ಲಿ ಸಚಿವರ ವಿರುದ್ಧ ಜಾತಿ ನಿಂದನೆ ಮೊಕ್ಕದ್ದಮೆ ದಾಖಲಿಸಬೇಕು ಎಂದು ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ ಒತ್ತಾಯಿಸಿದರು.

ಇದೇ ಸಂದರ್ಭ ಬಡ ದಲಿತ ಸಮುದಾಯಕ್ಕೆ ನಿವೇಶನ, ವಸತಿ ಮತ್ತು ಬಿಪಿಎಲ್ ಕಾರ್ಡ್ ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಕೊಡಗು ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ದಲಿತರು ನಿವೇಶನ ಮತ್ತು ವಸತಿ ರಹಿತರಾಗಿ ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಹಲವರು ಕೂಲಿ ಕಾರ್ಮಿಕರಾಗಿ ಲೈನ್ ಮನೆಗಳಲ್ಲಿ ಅತಂತ್ರ ಸ್ಥಿತಿಯಲ್ಲಿದ್ದಾರೆ. ಸರಕಾರ ತಕ್ಷಣ ಕೊಡಗು ಜಿಲ್ಲೆಯಲ್ಲಿರುವ ನಿವೇಶನ ಮತ್ತು ವಸತಿ ರಹಿತ ದಲಿತರ ಬಗ್ಗೆ ಸಮಗ್ರ ಮಾಹಿತಿ ಪಡೆದು ಸ್ವಂತ ವಸತಿಯ ಬೇಡಿಕೆಯನ್ನು ಈಡೇರಿಸಬೇಕು. ಅಕ್ರಮವಾಗಿ ಉಳ್ಳವರ ಪಾಲಾಗಿರುವ ಸರಕಾರಿ ಜಮೀನನ್ನು ಸರಕಾರ ವಶಪಡಿಸಿಕೊಂಡು ಬಡವರಿಗೆ ಹಂಚಬೇಕು. 

ಆದ್ದರಿಂದ ಜಿಲ್ಲಾಡಳಿತ ಪ್ರತಿಯೊಬ್ಬ ದಲಿತ ಅರ್ಹ ಫಲಾನುಭವಿಗೂ ಬಿಪಿಎಲ್ ಕಾರ್ಡ್ ನೀಡಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿರುವ ದಲಿತರಿಗೆ ಸೂಕ್ತ ರಕ್ಷಣೆ ಮತ್ತು ಸಾಮಾಜಿಕ ಭದ್ರತೆಯನ್ನು ನೀಡಬೇಕೆಂದು ಪ್ರತಿಭಟನಾಕಾರರು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಜಿಲ್ಲಾ ಸಂಘಟನಾ ಸಂಚಾಲಕರಾದ ಹೆಚ್.ಕೆ.ಗಣೇಶ್, ಮಡಿಕೇರಿ ತಾಲೂಕು ಸಂಚಾಲಕರಾದ ಹೆಚ್.ಎಲ್.ಕುಮಾರ್, ತಾಲೂಕು ಸಂಘಟನಾ ಸಂಚಾಲಕರಾದ ದೀಪಕ್ ಮತ್ತಿತರ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಇದಕ್ಕೂ ಮೊದಲು ಜನರಲ್ ತಿಮ್ಮಯ್ಯ ವೃತ್ತದಲ್ಲಿ ಸಚಿವ ಅನಂತಕುಮಾರ್ ಅವರ ಪ್ರತಿಕೃತಿಯನ್ನು ದಹಿಸಿದ ದಸಂಸ ಪದಾಧಿಕಾರಿಗಳು ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News