ಪತ್ನಿ ಹತ್ಯೆ ಪ್ರಕರಣ: ಪತಿಗೆ ಜೀವಾವಧಿ ಶಿಕ್ಷೆ

Update: 2018-02-02 12:09 GMT

ಶಿವಮೊಗ್ಗ, ಫೆ. 2: ಪತ್ನಿಯ ಹತ್ಯೆ ನಡೆಸಿದ ಪತಿಗೆ ಜೀವಾವಧಿ ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ ಇಲ್ಲಿನ 5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆದೇಶ ಹೊರಡಿಸಿದೆ. 

ಹೊಸನಗರದ ಗುರುಭವನದ ಬಳಿಯ ನಿವಾಸಿ ಸುಬ್ರಹ್ಮಣ್ಯ (55) ಶಿಕ್ಷೆಗೊಳಗಾದ ಪತಿ ಎಂದು ಗುರುತಿಸಲಾಗಿದೆ. ನ್ಯಾಯಾಧೀಶರಾದ ಮಹೇಶ್ವರಿ ಎಸ್. ಹಿರೇಮಠರವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವಿ.ಜಿ.ಯಳಗೇರಿ ವಾದ ಮಂಡಿಸಿದ್ದರು. 

ಪ್ರಕರಣದ ಹಿನ್ನೆಲೆ: ಶಿಕ್ಷೆಗೊಳಗಾದ ಸುಬ್ರಹ್ಮಣ್ಯನು 2017 ರ ಎ.14 ರಂದು ಪತ್ನಿ ನಾಗರತ್ನ (48) ರವರೊಂದಿಗೆ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಗಲಾಟೆ ಮಾಡಿದ್ದ. ಗಲಾಟೆ ವಿಕೋಪಕ್ಕೆ ತಿರುಗಿ ಸುಬ್ರಹ್ಮಣ್ಯನು ಮಕ್ಕಳ ಎದುರಲ್ಲಿಯೇ ಪತ್ನಿಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದ. 

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ನಾಗರತ್ನರವರು ಸಾವನ್ನಪ್ಪಿದ್ದರು. ಈ ಕುರಿತಂತೆ ಮಕ್ಕಳೇ ಸ್ಥಳೀಯ ಪೊಲೀಸರಿಗೆ ತಂದೆಯ ವಿರುದ್ದ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. 

ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಕೂಡ ಸಲ್ಲಿಸಿದ್ದರು. ನ್ಯಾಯಾಲಯದ ವಿಚಾರಣೆಯ ವೇಳೆ ಸುಬ್ರಹ್ಮಣ್ಯ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ಜೊತೆಗೆ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News