ಬಿಜೆಪಿ ಪರಿವರ್ತನಾ ರ‍್ಯಾಲಿಯಲ್ಲಿ ಬಣ ರಾಜಕೀಯ: ವೇದಿಕೆಯಿಂದ ಇಳಿದು ಹೋಗುತ್ತೇನೆ ಎಂದ ಯಡಿಯೂರಪ್ಪ

Update: 2018-02-02 15:52 GMT

ದಾವಣಗೆರೆ,ಫೆ.02 : ಹರಪನಹಳ್ಳಿಯಲ್ಲಿ ನಡೆದ ಬಿಜೆಪಿ ಪರಿವರ್ತನಾ ರ್ಯಾಲಿಯು ಬಣ ರಾಜಕೀಯಕ್ಕೆ ಸಾಕ್ಷಿಯಾಗಿದ್ದು, ಇದರಿಂದ ಬೇಸತ್ತ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವೇದಿಕೆಯಿಂದ ಇಳಿದು ಹೋಗುತ್ತೇನೆಂದು ಹೇಳಿದ ಹಾಕಿದ ಘಟನೆ ನಡೆಯಿತು. 

ಕಳೆದ ತಿಂಗಳಲ್ಲಿಯೇ ಬಿಜೆಪಿಯ ಪರಿವರ್ತನಾ ರ್ಯಾಲಿಯು ನಡೆಯಬೇಕಿತ್ತು. ಅದರೆ ಅಕಾಂಕ್ಷಿಗಳು ಪ್ರತಿಷ್ಠೆಗಾಗಿ ಎರಡು ಬಣಗಳ ಪ್ರತ್ಯೇಕ ವೇದಿಕೆ ಸಿದ್ದಪಡಿಸಿದ್ದರಿಂದ ಪರಿವರ್ತನಾ ರ್ಯಾಲಿಯನ್ನು ವರಿಷ್ಠರು ಮುಂದೂಡಿದ್ದರು. ಎರಡು ಬಣಗಳನ್ನು ಸಮಾಧಾನಗೊಳಿಸಿ ಇಂದು ಪರಿವರ್ತನಾ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಅದರೆ ಇಲ್ಲಿಯೂ ಎರಡು ಬಣಗಳ ನಡುವಿನ ಭಿನ್ನಮತ ಮತ್ತೆ ಸ್ಪೋಟಗೊಂಡ ಘಟನೆ ನಡೆದಿದೆ.   

ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭಾಷಣ ಮಾಡುತ್ತಿದ್ದ ವೇಳೆ, ಎರಡೂ ಬಣದ ಕಾರ್ಯಕರ್ತರು ಪೈಪೋಟಿಯಲ್ಲಿ ಪ್ರತ್ಯೇಕವಾಗಿ ವೇದಿಕೆಯಲ್ಲಿರುವವರಿಗೆ ಸನ್ಮಾನ ಮಾಡುತ್ತಿದ್ದರು. ಇದರಿಂದ ಆಕ್ರೋಶಗೊಂಡ ಯಡಿಯೂರಪ್ಪ "ಸಭೆ ಬೇಡ ಎಂದರೆ ಹೇಳಿ. ವೇದಿಕೆಯಿಂದ ಕೆಳಗಿಳಿದು ಹೋಗುತ್ತೇನೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.  

ಇಲ್ಲಿ ಯಾರೇ ಆಗಲಿ, ಪರಸ್ಪರ ಪೈಪೋಟಿ ಮಾಡಬಾರದು. ನಮ್ಮ ಪಕ್ಷದಲ್ಲಿ ಒಂದೇ ತಾಯಿ ಮಕ್ಕಳಂತೆ ಇರಬೇಕು. ವರಿಷ್ಠರು ಯಾರಿಗೇ ಟಿಕೆಟ್ ನೀಡಲಿ. ಅವರನ್ನು ಗೆಲ್ಲಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಕರಣಾಕರರೆಡ್ಡಿ ಶಾಸಕರಾಗಿದ್ದ ವೇಳೆ ತಾಲೂಕು ಅಭಿವೃದ್ದಿಗೆ ಸಾಕಷ್ಟು ಶ್ರಮಿಸಿದ್ದಾರೆ. ಅದರೆ, ಕಾಂಗ್ರೆಸ್ ಆಡಳಿತ ಬಂದ ಮೇಲೆ ಅಭಿವೃದ್ದಿ ಕಾರ್ಯಗಳೇ ನಡೆದಿಲ್ಲ ಎಂದು ಹೇಳಿದರು.

ಪಕ್ಷಕ್ಕಿಂತ ಯಾರು ಕೂಡಾ ದೊಡ್ಡವರಲ್ಲ. ವ್ಯಕ್ತಿಯನ್ನು ನೋಡಿ ಮತ ಹಾಕಬೇಡಿ. ಬಿಜೆಪಿ ಪಕ್ಷ ನೋಡಿ ಮತ ಹಾಕಿ. ಕರುಣಾಕರ ರೆಡ್ಡಿ ಅಭ್ಯರ್ಥಿ ಆಗಬೇಕೋ, ಎನ್.ಕೊಟ್ರೇಶ್ ಅಭ್ಯರ್ಥಿ ಆಗಬೇಕೋ ಎನ್ನುವುದನ್ನು ನೀವೇ ನಿರ್ಧಾರ ಮಾಡಿ ಎಂದು ಕಾರ್ಯಕರ್ತರಿಗೆ ಸೂಚಿಸಿದರು.   

ಸಂಸದ ಶ್ರೀರಾಮುಲು ಮಾತನಾಡಿ, ರಾಜ್ಯ ಸರ್ಕಾರ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದೆ. ಹಿಂದುಗಳನ್ನು ಹತ್ಯೆ ಮಾಡುವವರಿಗೆ ಶಿಕ್ಷೆ ನೀಡುತ್ತಿಲ್ಲ. ಇದುವರೆಗೂ ಸುಮಾರು 30 ಕ್ಕೂ ಹೆಚ್ಚು ಯುವಕರ ಕೊಲೆಯಾಗಿದೆ. ಆದರೆ ಯಾವುದೇ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ನಿರಂತರ ಶೂಟೌಟ್, ಕೊಲೆ, ದರೋಡೆಗಳಾಗುತ್ತಿವೆ. ಆದರೆ ಮುಖ್ಯಮಂತ್ರಿಗಳು ಮಾತ್ರ ಕಾನೂನು ಸುವ್ಯವಸ್ಥೆ ಸರಿಪಡಿಸಲು ಮುಂದಾಗದಿರುವುದು ದುಃಖದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.  

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳಾಗಿದ್ದವು. ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅನೇಕ ಕೊಡುಗೆಗಳನ್ನು ಜನರಿಗೆ ನೀಡಿದ್ದರು. ವಸತಿ ರಹಿತರಿಗೆ ಸೂರು ಕಲ್ಪಿಸುವ ವ್ಯವಸ್ಥೆ ಮಾಡಿದ್ದರು. ಬಿಎಸ್ ವೈ ನೀಡಿದ್ದ ಕೊಡುಗೆಯನ್ನು ಹಿಂದೆ ಯಾವುದೇ ಮುಖ್ಯಮಂತ್ರಿಗಳು ಕೊಟ್ಟಿರಲಿಲ್ಲ. ಅದೇ ರೀತಿ ಮುಂದೆಯೂ ಯಾರು ಕೂಡಾ ನೀಡಲು ಸಾಧ್ಯವಿಲ್ಲ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News