ನಾಲ್ಕು ಕೋಟಿ ಹಸುಗಳಿಗೆ ಆಧಾರ್ ಮಾದರಿಯ ಸಂಖ್ಯೆ!

Update: 2018-02-04 06:33 GMT

ಹೊಸದಿಲ್ಲಿ, ಫೆ.4: ಪ್ರತಿಯೊಬ್ಬ ಭಾರತೀಯ ಪ್ರಜೆಗೆ 12 ಅಂಕಿಯ ಆಧಾರ್ ಸಂಖ್ಯೆ ನೀಡಿರುವ ಮಾದರಿಯಲ್ಲಿ ದೇಶದ ಎಲ್ಲ ಹಾಲು ನೀಡುವ ಹಸುಗಳಿಗೆ ಅಗ್ಗದ ವಿಶಿಷ್ಟ ಗುರುತಿನ ಕಾರ್ಡ್ ಅಥವಾ ಯುಐಡಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

2015ರಲ್ಲಿ ಈ ಯೋಜನೆ ಜಾರಿಗೆ ನಿರ್ಧರಿಸಲಾಗಿದ್ದು, ಈ ವರ್ಷದ ಬಜೆಟ್‌ನಲ್ಲಿ ಮೊದಲ ಹಂತದ ಯೋಜನೆ ಜಾರಿಗಾಗಿ 50 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಇದರಲ್ಲಿ ನಾಲ್ಕು ಕೋಟಿ ಹಸುಗಳಿಗೆ ಯುಐಡಿ ನೀಡಲು ಉದ್ದೇಶಿಸಲಾಗಿದೆ.

ಅಗ್ಗದ, ತಿದ್ದಲಾಗದ ಪಾಲಿಯುರೇಥಿನ್ ಟ್ಯಾಗ್‌ಗಳನ್ನು ಈಗಾಗಲೇ ಕೃಷಿ ಇಲಾಖೆ ಖರೀದಿಸಿದ್ದು, ಇದರಲ್ಲಿ ಹಸುಗಳ ಜೈವಿಕ ವಿವರಗಳಾದ ತಳಿ, ವಯಸ್ಸು, ಲಿಂಗ, ಎತ್ತರ ಮತ್ತು ದೇಹದ ಮೇಲಿರುವ ವಿಶೇಷ ಗುರುತುಗಳನ್ನು ದಾಖಲಿಸಲಾಗುತ್ತದೆ. ಪ್ರತೀ ಕಾರ್ಡ್‌ಗೆ 8ರಿಂದ 10 ರೂಪಾಯಿ ವೆಚ್ಚ ತಗುಲುತ್ತದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಶು ಸಂಜೀವಿನಿ ಹೆಸರಿನ ಈ ಯೋಜನೆ ಹೈನುಗಾರಿಕೆ ಹಾಗೂ ಮೀನುಗಾರಿಕಾ ವಲಯದ ವಿಸ್ತೃತ ಯೋಜನೆಯ ಭಾಗವಾಗಿದೆ. 2022ರ ಒಳಗಾಗಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಮಹತ್ವಾಕಾಂಕ್ಷಿ ಯೋಜನೆಯ ಅಂಗವಾಗಿ ಇದನ್ನು ಜಾರಿಗೊಳಿಸಲಾಗುತ್ತಿದೆ. ಕೇವಲ ಕೃಷಿಯಿಂದ ರೈತರ ಆದಾಯ ಹೆಚ್ಚಿಸಲು ಸಾಧ್ಯವಿಲ್ಲ ಎನ್ನುವುದು ಆರ್ಥಿಕ ತಜ್ಞರ ಅಭಿಮತ. ಈ ಹಿನ್ನೆಲೆಯಲ್ಲಿ ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಒತ್ತು ನೀಡಲು ಸರ್ಕಾರ ನಿರ್ಧರಿಸಿದೆ.

40 ದಶಲಕ್ಷ ಹಸುಗಳ ನೋಂದಣಿಯಿಂದ ಹಾಲು ಉತ್ಪಾದನೆ ಶೇ.20ರಷ್ಟು ಹೆಚ್ಚಲು ಕಾರಣವಾಗುತ್ತದೆ ಎಂದು ಕೃಷಿ ಇಲಾಖೆ ಮೂಲಗಳು ಹೇಳಿವೆ. 15 ಲಕ್ಷ ಕೃತಕ ಗರ್ಭಧಾರಣೆಯ ಗುರಿ ಹಾಕಿಕೊಂಡು 15 ಸಾವಿರ ಕೊಟಿ ರೂಪಾಯಿ ಮೌಲ್ಯದ ಹಾಲು ಉತ್ಪಾದನೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News