'ಕ್ಯಾನ್ಸರ್ ಕರ್ಮದ ಫಲ' ಎಂದಿದ್ದ ಬಾಬಾ ರಾಮ್ ದೇವ್ ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಮ್ಮೇಳನದ ಅತಿಥಿ!

Update: 2018-02-06 09:12 GMT

ಚೆನ್ನೈ,ಫೆ.6 : ಕ್ಯಾನ್ಸರ್ ನಮ್ಮ ಕರ್ಮದ ಫಲವಾಗಿದೆ ಎಂಬ ಹೇಳಿಕೆಯನ್ನು ಈ ಹಿಂದೊಮ್ಮೆ ನೀಡಿದ್ದ ಯೋಗ ಗುರು ಬಾಬಾ ರಾಮ್ ದೇವ್ ಅವರನ್ನು ಫೆಬವರಿ 8ರಂದು ಮದ್ರಾಸ್ ಐಐಟಿ ಆಯೋಜಿಸಿರುವ 7ನೇ ಅಂತಾರಾಷ್ಟ್ರೀಯ ಟ್ರಾನ್ಸ್‍ಲೇಶನಲ್ ಕ್ಯಾನ್ಸರ್ ಸಂಶೋಧನಾ ಸಮ್ಮೇಳನಕ್ಕೆ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿದೆ. ‘ಕ್ಯಾನ್ಸರ್ ನಿವಾರಣೆ-ಚಿಕಿತ್ಸೆ; ಪ್ರಾಚೀನ ಔಷಧಿಯಿಂದ ಆಧುನಿಕ ಔಷಧಿ’ ಎಂಬ  ವಿಷಯಾಧರಿತ ಈ ಸಮ್ಮೇಳನವು ಟೆಕ್ಸಾಸ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಸಮ್ಮೇಳನ ಸಮಿತಿಯಲ್ಲಿ ದೇಶದ ಖ್ಯಾತ ಕ್ಯಾನ್ಸರ್ ತಜ್ಞರಾಗಿರುವ ದಿಲ್ಲಿ ಸ್ಟೇಟ್ ಕ್ಯಾನ್ಸರ್ ಇನ್‍ಸ್ಟಿಟ್ಯೂಟ್ ಇದರ ಸಿಇಒ ಹಾಗೂ ನಿರ್ದೇಶಕ ರಾಜೇಶ್ ಕುಮಾರ್ ಗ್ರೋವರ್ ಹಾಗೂ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಕ್ಯಾನ್ಸರ್ ಪ್ರಿವೆನ್ಶನ್ ಎಂಡ್ ರಿಸರ್ಚ್ ಇದರ ನಿರ್ದೇಶಕರಾಗಿರುವ ರವಿ ಮೆಹ್ರೋತ್ರ ಅವರಿದ್ದಾರೆ.

ಹಿಂದಿನ ಜನ್ಮದ ಪಾಪದ ಫಲವಾಗಿ ಈ ಜನ್ಮದಲ್ಲಿ ಜನರು ಕ್ಯಾನ್ಸರ್ ಕಾಯಿಲೆಗೊಳಗಾಗುತ್ತಾರೆ ಎಂದು ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವ ಶರ್ಮಾ ಅವರ ಹೇಳಿಕೆಯನ್ನು ಈ ಹಿಂದೆ  ವ್ಯಾಪಕವಾಗಿ ಟೀಕಿಸಲಾಗಿತ್ತಾದರೂ ಬಾಬಾ ರಾಮ್ ದೇವ್ ಅದನ್ನು ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಬೆಂಬಲಿಸಿದ್ದರು.

“ಎಲ್ಲವೂ ಕರ್ಮಕ್ಕೆ ಸಂಬಂಧಿಸಿದ್ದು,  ಕಾಯಿಲೆಗಳಿಗೆ ಕರ್ಮ ಸೇರಿದಂತೆ ಹಲವಾರು ಕಾರಣಗಳಿವೆ'' ಎಂದೂ ರಾಮದೇವ್ ಹೇಳಿದ್ದರು. ಯೋಗ ಹಾಗೂ ಪತಂಜಲಿ ಸಂಸ್ಥೆ ಮಾರಾಟ ಮಾಡುವ ಔಷಧಿಗಳಿಂದ ತಾನು ಸಾವಿರಾರು ಕ್ಯಾನ್ಸರ್ ಹಾಗೂ ಎಚ್‍ಐವಿ ರೋಗಿಗಳನ್ನು ಗುಣಪಡಿಸಿದ್ದಾಗಿ ಅವರು ಒಮ್ಮೆ ಹೇಳಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News