ಅವರು ರಾಜಕೀಯ ಸೇಡಿನ ಬಲಿಪಶುಗಳಾಗಿದ್ದರು ಎಂದ ಆದಿತ್ಯನಾಥ್ ಸರಕಾರ!

Update: 2018-02-07 15:51 GMT

ಲಕ್ನೋ,ಫೆ.7: ಮುಝಫ್ಫರ್ ನಗರ ದಂಗೆಗಳಲ್ಲಿ ಆರೋಪಿಗಳಾಗಿರುವ ಬಿಜೆಪಿ ನಾಯಕರ ವಿರುದ್ಧದ ಪ್ರಕರಣಗಳನ್ನು ಹಿಂದೆಗೆದುಕೊಳ್ಳುವ ತನ್ನ ನಿರ್ಧಾರದ ಬಗ್ಗೆ ಮೌನವನ್ನು ಮುರಿದಿರುವ ಉತ್ತರ ಪ್ರದೇಶ ಸರಕಾರವು, ಆರೋಪಿಗಳನ್ನು ‘ರಾಜಕೀಯ ಸೇಡಿನ ಬಲಿಪಶುಗಳು’ ಎಂದು ಬಣ್ಣಿಸಿದೆ.

 ಸರಕಾರದ ಈ ನಿರ್ಧಾರದ ಕುರಿತು ಆಂಗ್ಲ ಸುದ್ದಿವಾಹಿನಿಯೊಂದರ ಪ್ರಶ್ನೆಗೆ ಉತ್ತರಿಸಿದ ರಾಜ್ಯದ ಕಾನೂನು ಸಚಿವ ಬೃಜೇಶ ಪಾಠಕ್ ಅವರು, ರಾಜಕಾರಣಿಗಳ ವಿರುದ್ಧದ ಪ್ರಕರಣಗಳನ್ನು ಮತ್ತು ರಾಜಕೀಯ ಕಾರಣಕ್ಕಾಗಿ ದಾಖಲಾಗಿರುವ ಪ್ರಕರಣಗಳನ್ನು ಹಿಂದೆಗೆದು ಕೊಳ್ಳುವುದರ ನಡುವೆ ವ್ಯತ್ಯಾಸವಿದೆ. ಇಂತಹ ಎಲ್ಲ ಪ್ರಕರಣಗಳನ್ನೂ ನಾವು ಪರಿಶೀಲಿಸುತ್ತಿದ್ದೇವೆ ಎಂದು ಉತ್ತರಿಸಿದರು.

ಮುಝಫ್ಫರ್ ನಗರ ದಂಗೆಗಳಲ್ಲಿ ಭಾಗಿಯಾಗಿರುವ ಆರೋಪವನ್ನು ಹೊತ್ತಿರುವ ಬಿಜೆಪಿ ನಾಯಕರೊಂದಿಗೆ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಮಾತುಕತೆ ನಡೆಸಿದ ದಿನಗಳ ಬಳಿಕ ಸಚಿವರ ಈ ಹೇಳಿಕೆ ಹೊರಬಿದ್ದಿದೆ.

ದಂಗೆ ಪ್ರಕರಣಗಳನ್ನು ಹಿಂದೆಗೆದುಕೊಳ್ಳುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಈ ನಾಯಕರು ಭೇಟಿ ಸಂದರ್ಭ ಮುಖ್ಯಮಂತ್ರಿಗಳನ್ನು ಕೋರಿದ್ದರೆನ್ನಲಾಗಿದೆ. ಈ ಭೇಟಿಗೆ ಮುನ್ನವೇ ಜನವರಿಯಲ್ಲಿ ಕಾನೂನು ಇಲಾಖೆಯು 2013ರಲ್ಲಿ ಹಿರಿಯ ಬಿಜೆಪಿ ನಾಯಕರ ವಿರುದ್ಧ ದಾಖಲಾಗಿದ್ದ ಸುಮಾರು 10 ದಂಗೆ ಸಂಬಂಧಿತ ಪ್ರಕರಣಗಳ ಕುರಿತು ಮುಝಫ್ಫರ್ ನಗರ ಜಿಲ್ಲಾಧಿಕಾರಿಗಳ ಅಭಿಪ್ರಾಯವನ್ನು ಕೋರಿ ಪತ್ರವೊಂದನ್ನು ಬರೆದಿತ್ತು.

ಮುಝಫ್ಫರ್ ನಗರ ಕೋಮು ಘರ್ಷಣೆಗಳಲ್ಲಿ 63 ಜನರು ಮೃತಪಟ್ಟು, ಸುಮಾರು 50,000 ಜನರು ತಮ್ಮ ಮನೆಮಾರುಗಳನ್ನು ಕಳೆದುಕೊಂಡಿದ್ದರು. ಆರೋಪಿಗಳ ಪೈಕಿ ಸಂಗೀತ್ ಸೋಮ್ ಮತ್ತು ಸುರೇಶ್ ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣಗಳೂ ದಾಖಲಾಗಿದ್ದವು. ಸೋಮ್ ಈಗಲೂ ಶಾಸಕರಾಗಿದ್ದರೆ, ಸುರೇಶ್ ಆದಿತ್ಯನಾಥ್ ಸರಕಾರದಲ್ಲಿ ಸಚಿವರಾಗಿದ್ದಾರೆ. ಬಿಜೆಪಿ ಸಂಸದರಾದ ಸಂಜೀವ ಬಲಿಯಾನ್ ಮತ್ತು ಭರತೇಂದು ಸಿಂಗ್, ಶಾಸಕರಾದ ಉಮೇಶ ಮಲಿಕ್ ಮತ್ತು ಸಾಧ್ವಿ ಪ್ರಾಚಿ ಅವರೂ ಎಫ್‌ಐಆರ್ ದಾಖಲಾಗಿರುವ ನಾಯಕರಲ್ಲಿ ಸೇರಿದ್ದಾರೆ.

ಈ ಪ್ರಕರಣಗಳ ಸ್ಥಿತಿಗತಿ ಕುರಿತ ವರದಿಯನ್ನು ಜಿಲ್ಲಾಡಳಿತವು ಈಗಾಗಲೇ ಕಳುಹಿಸಿದೆ ಎಂದು ಸರಕಾರಿ ಮೂಲಗಳು ದೃಢಪಡಿಸಿವೆ. ಹೆಚ್ಚಿನ ನಾಯಕರ ವಿರುದ್ಧ 128,153ಎ ಮತ್ತು 353 ಸೇರಿದಂತೆ ಐಪಿಸಿಯ ಗಂಭೀರ ಕಲಮ್‌ಗಳಡಿ ಆರೋಪಗಳನ್ನು ಹೊರಿಸಲಾಗಿದೆ. ಈ ಪ್ರಕರಣಗಳು ಈಗಾಗಲೇ ವಿಚಾರಣಾ ಹಂತದಲ್ಲಿದ್ದು, ಸಂಬಂಧಿಸಿದ ನ್ಯಾಯಾಲಯಗಳಲ್ಲಿ ಬಾಕಿಯಾಗಿವೆ.

ಅಂತಿಮವಾಗಿ, ಪ್ರಕರಣಗಳನ್ನು ಕೈಬಿಡುವಂತೆ ಸರಕಾರದ ಕೋರಿಕೆಯನ್ನು ಒಪ್ಪಿಕೊಳ್ಳಬೇಕೇ ಅಥವಾ ಅವುಗಳನ್ನು ಮುಂದುವರಿಸಬೇಕೇ ಎನ್ನುವುದನ್ನು ನ್ಯಾಯಾಲಯ ನಿರ್ಧರಿಸಬೇಕಿದ್ದರೂ, ರಾಜ್ಯ ಸರಕಾರವು ಪ್ರಕರಣಗಳನ್ನು ಕೈಬಿಡುವಂತೆ ಕೋರಿ ಶೀಘ್ರವೇ ಅರ್ಜಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.

ಸರಕಾರದ ಈ ಕ್ರಮವನ್ನು ಪ್ರತಿಪಕ್ಷಗಳು ಕಟುವಾಗಿ ಟೀಕಿಸಿವೆ. ಇದೊಂದು ಅಪಾಯಕಾರಿ ಪ್ರವೃತ್ತಿ. ಪ್ರಕರಣಗಳನ್ನು ಹಿಂದೆಗೆದುಕೊಳ್ಳಲು ಪ್ರಯತ್ನಿಸುವ ಮೂಲಕ ಸರಕಾರವು ದ್ವೇಷ ಹರಡುವವರನ್ನು ಉತ್ತೇಜಿಸುತ್ತಿದೆ ಮತ್ತು ಇನ್ನಷ್ಟು ಹೆಚ್ಚಿನ ದಂಗೆಗಳು ನಡೆಯಲು ಅವಕಾಶ ಕಲ್ಪಿಸುತ್ತಿದೆ ಎಂದು ಕಾಂಗ್ರೆಸ್‌ ವಕ್ತಾರ ಅಮರನಾಥ ಅಗರವಾಲ್ ಹೇಳಿದರೆ, ಆರೋಪಿಗಳ ವಿರುದ್ಧದ ಪ್ರಕರಣಗಳು ಬಲವಾಗಿವೆ. ಆಗಿನ ನಮ್ಮ ಸರಕಾರವು ಯಾವುದೇ ಪ್ರತೀಕಾರದ ದೃಷ್ಟಿಯನ್ನಿಟ್ಟುಕೊಂಡು ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಎಸ್‌ಪಿ ರಾಷ್ಟ್ರೀಯ ವಕ್ತಾರ ಉದವೀರ ಸಿಂಗ್ ಹೇಳಿದರು.

ಕೋಮು ಹಿಂಸಾಚಾರದ ಪ್ರಚೋದನೆಗಳ ವೀಡಿಯೊ ಸಾಕ್ಷಾಧಾರಗಳನ್ನು ಸರಕಾರವು ಕಡೆಗಣಿಸಲು ಹೇಗೆ ಸಾಧ್ಯ? ಸರಕಾರದ ಕೋರಿಕೆಯ ಬಗ್ಗೆ ನಿರ್ಧರಿಸುವಾಗ ಸಂಬಂಧಿತ ನ್ಯಾಯಾಲಯಗಳು ಇದನ್ನು ಗಮನಕ್ಕೆ ತೆಗೆದುಕೊಳ್ಳುತ್ತವೆ ಎಂದು ನಾವು ಆಶಿಸಿದ್ದೇವೆ ಎಂದು ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯೆ ಸುಭಾಷಿಣಿ ಅಲಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News