ಫೆಡ್ ಕಪ್: ಚೀನಾಕ್ಕೆ ಶರಣಾದ ಭಾರತ

Update: 2018-02-08 06:00 GMT

ಹೊಸದಿಲ್ಲಿ, ಫೆ.7: ಒತ್ತಡದ ನಡುವೆಯೂ ಅಂಕಿತಾ ರಾಣಾ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಏಷ್ಯಾ/ಓಶಿಯಾನಿಯಾ ಗ್ರೂಪ್-1 ಫೆಡ್ ಕಪ್‌ನ ಮೊದಲ ದಿನವಾದ ಬುಧವಾರ ಭಾರತ ತಂಡ ಚೀನಾ ವಿರುದ್ಧ 1-2 ರಿಂದ ಶರಣಾಗಿದೆ. ಆರ್.ಕೆ. ಖನ್ನಾ ಟೆನಿಸ್ ಸ್ಟೇಡಿಯಂನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನಲ್ಲಿ 253ನೇ ರ್ಯಾಂಕಿನ ಆಟಗಾರ್ತಿ ಅಂಕಿತಾ ವಿಶ್ವದ 120ನೇ ಆಟಗಾರ್ತಿ ಲಿನ್ ಝು ಅವರನ್ನು 6-3, 6-2 ನೇರ ಸೆಟ್‌ಗಳಿಂದ ಮಣಿಸಿ ಆಘಾತ ನೀಡಿದರು. ಅಂಕಿತಾ ಅವರು ಲಿನ್ ವಿರುದ್ಧ ಆಡಿರುವ ನಾಲ್ಕನೇ ಪಂದ್ಯದಲ್ಲಿ ಮೊದಲ ಜಯ ಸಾಧಿಸಿದರು. ಅಂಕಿತಾ ಟೆನಿಸ್ ಟೂರ್ ಪಂದ್ಯದಲ್ಲಿ 2 ಬಾರಿ ಹಾಗೂ ಫೆಡ್ ಕಪ್‌ನಲ್ಲಿ ಒಂದು ಬಾರಿ ಸೋತಿದ್ದಾರೆ. ಮತ್ತೊಂದು ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ 19ರ ಹರೆಯದ ಕರ್ಮಾನ್ ಕೌರ್ ವಿಶ್ವದ ನಂ.125ನೇ ಆಟಗಾರ್ತಿ ಯಫಾನ್ ವಾಂಗ್ ವಿರುದ್ಧ 2-6, 2-6 ಸೆಟ್‌ಗಳಿಂದ ಸೋತಿದ್ದಾರೆ. ಕರ್ಮಾನ್-ವಾಂಗ್ ಎರಡನೇ ಬಾರಿ ಮುಖಾಮುಖಿಯಾದರು. ಇದೀಗ ವಾಂಗ್ ಜಯ ಸಾಧಿಸುವ ಮೂಲಕ ಹೆಡ್-ಟು-ಹೆಡ್‌ನಲ್ಲಿ 2-0 ಮುನ್ನಡೆ ಸಾಧಿಸಿದ್ದಾರೆ. ಕಳೆದ ವರ್ಷ ನಡೆದ ಟಿಯಾನ್‌ಜಿನ್ ಐಟಿಎಫ್ ಇವೆಂಟ್‌ನಲ್ಲಿ ಕರ್ಮಾನ್ ಸೋತಿದ್ದರು.

ಪ್ರಾರ್ಥನಾ ಥೋಂಬರೆ ಅವರೊಂದಿಗೆ ಡಬಲ್ಸ್ ಪಂದ್ಯ ಆಡಲು ಮತ್ತೆ ಟೆನಿಸ್ ಅಂಗಣಕ್ಕೆ ವಾಪಸಾದ ಅಂಕಿತಾ ವಿಶ್ವದ ನಂ.31ನೇ ಆಟಗಾರ್ತಿಯರಾದ ವಾಂಗ್ ಹಾಗೂ ಝಾವೊಕ್ಸೂಯಾನ್ ಯಾಂಗ್ ವಿರುದ್ಧ 2-6,6-7(1) ಸೆಟ್‌ಗಳಿಂದ ಸೋತಿದ್ದಾರೆ.

 ಭಾರತ ಗುರುವಾರ ನಡೆಯಲಿರುವ ಮಾಡು-ಮಡಿ ಪಂದ್ಯದಲ್ಲಿ ಬಲಿಷ್ಠ ಕಝಕಿಸ್ತಾನದ ಸವಾಲು ಎದುರಿಸಲಿದೆ. ಕಝಕಿಸ್ತಾನ ಬುಧವಾರ ನಡೆದ ಪಂದ್ಯದಲ್ಲಿ ಹಾಂಕಾಂಗ್ ತಂಡವನ್ನು 3-0 ಅಂತರದಿಂದ ಮಣಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News