ಕೊಳ್ಳೇಗಾಲ: ಕಾನೂನು ಅರಿವು ಕಾರ್ಯಕ್ರಮ

Update: 2018-02-09 11:31 GMT

ಕೊಳ್ಳೇಗಾಲ ಫೆ.09: ವಿದ್ಯಾರ್ಥಿ ಜೀವನ ಮನುಷ್ಯನ ಬದುಕಿನಲ್ಲಿ ಬಹು ಮಹತ್ವಪೂರ್ಣವಾದ ಘಟ್ಟವಾಗಿದ್ದು, ಅದರ ಬಗೆಗೆ ವಿದ್ಯಾರ್ಥಿಗಳು ಸರಿಯಾದ ಕಾಳಜಿ ವಹಿಸಿದರೆ ಅವರ ಬದುಕು ಬಂಗಾರವಾಗುವುದರಲ್ಲಿ ಸಂಶಯವಿಲ್ಲ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ. ವಿನಯ್ ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅಭಿಯೋಜನೆ ಇಲಾಖೆ ಹಾಗೂ ಜೆಎಸ್‍ಎಸ್ ಮಹಿಳಾ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ವಿದ್ಯಾರ್ಥಿನಿಯರ ನ್ಯಾಯಾಲಯ ಕಲಾಪ ವೀಕ್ಷಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿನಿಯರು ಬರೀ ವಿದ್ಯಾರ್ಜನೆ ಮಾತ್ರವಲ್ಲದೆ ಜೀವನದ ಇತರೆ ಉಪಯುಕ್ತ ವಿಷಯಗಳ ಬಗೆಗೆ ಸರಿಯಾಗಿ ಗಮನಹರಿಸಿ ಜಾಗರೂಕರಾಗದರೆ ಮುಂದೆ ಪಶ್ಚಾತಾಪ ಪಡುವುದು ತಪ್ಪುತ್ತದೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ಮಾತಿನಂತೆ ದೇಶದ ಸ್ಥಿತಿ ಉತ್ತಮವಾಗಿರಬೇಕಾದರೆ, ಉತ್ತಮ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಸರಿ ಹಾದಿಯಲ್ಲಿ ಸಾಗಬೇಕಾದುದು ಅತ್ಯಗತ್ಯ ಎಂದು ಹೇಳಿದರು.

ವಿಶೇಷ ಸರ್ಕಾರಿ ಅಭಿಯೋಜಕ ಎಸ್. ನಾಗರಾಜು ವಿದ್ಯಾರ್ಥಿಗಳ ಕಾನೂನು ಕುರಿತು ಉಪನ್ಯಾಸ ನೀಡಿ, ವಿದ್ಯಾರ್ಥಿಗಳು ಕಾನೂನು ಅರಿವು ಪಡೆದುಕೊಂಡು ಅಪರಾಧ ಪ್ರವೃತ್ತಿಯಿಂದ ದೂರ ಉಳಿಯಬೇಕು ಎಂದು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷರಾದ ಡಿ.ಎಸ್. ಬಸವರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನ್ಯಾಯಾಲಯಗಳ ಕಲಾಪಗಳ ಕುರಿತು ಮಾಹಿತಿ ನೀಡಿದರು.
ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರೂ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರೂ ಆದ ಎಸ್.ಜೆ. ಕೃಷ್ಣ ಹಾಗೂ ಜೆ.ಎಸ್.ಎಸ್. ಮಹಿಳಾ ಕಾಲೇಜು ಪ್ರಾಂಶುಪಾಲ ಪ್ರೊ. ಉಮೇಶ್ ಮಾತನಾಡಿದರು.

ನ್ಯಾಯಾಲಯ ಕಲಾಪ ವೀಕ್ಷಣೆ: ಜೆಎಸ್‍ಎಸ್ ಮಹಿಳಾ ಕಾಲೇಜಿನ ಪದವಿ ವಿದ್ಯಾರ್ಥಿನಿಯರಿಗೆ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ ಹಾಗೂ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಗಳ ಕಲಾಪಗಳ ವೀಕ್ಷಣೆಗೆ ಅವಕಾಶ ನೀಡಿ ನ್ಯಾಯಾಲಯದ ಕಲಾಪಗಳ ಪರಿಚಯ ಮಾಡಿಕೊಡಲಾಯಿತು.

ಸಹಾಯಕ ಸರ್ಕಾರಿ ಅಭಿಯೋಜಕ ಎಂ. ನಾಗೇಶ್, ರೂಪಲಕ್ಷ್ಮೀ, ಹಿರಿಯ ವಕೀಲರಾದ ಶಶಿಬಿಂಬ, ಡಿ. ವೆಂಕಟಾಚಲ, ವಕೀಲರ ಸಂಘದ ಕಾರ್ಯದರ್ಶಿ ಬಸವರಾಜು, ವಕೀಲರುಗಳಾದ ಕೆಂಪರಾಜು ನಿರ್ಮಲಾ ಮಧುಸೂದನ್, ರಾಜೇಂದ್ರ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News