ಸ್ಪರ್ಧೆಗೆ ಅಭ್ಯರ್ಥಿ ಮುಖ್ಯವಲ್ಲ, ಎದುರಾಳಿ ವಿರುದ್ಧ ಗೆಲುವು ಮುಖ್ಯ : ಸಂಸದ ಡಿ.ಕೆ. ಸುರೇಶ್

Update: 2018-02-10 11:05 GMT

ಹಾಸನ,ಫ.10: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಅಭ್ಯರ್ಥಿ ಮುಖ್ಯವಲ್ಲ, ಎದುರಾಳಿ ವಿರುದ್ಧ ಗೆಲುವು ಮುಖ್ಯ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸಂಸದರು ಡಿ.ಕೆ. ಸುರೇಶ್ ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮುಂಬರಲಿರುವ ರಾಜ್ಯ ವಿಧಾನಸಭಾ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಂಭಾವ್ಯ ಅಭ್ಯರ್ಥಿಗಳನ್ನು ಗುರುತಿಸಿ ಆಕಾಂಕ್ಷಿಗಳ ಪಟ್ಟಿಯನ್ನು ಸಿದ್ಧಪಡಿಸುವ ಸಲುವಾಗಿ ಆಗಮಿಸಿದ್ದ ಅವರು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ನಂತರ ಕಛೇರಿ ಹೊರಗೆ ಬಹಿರಂಗ ಭಾಷಣದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಕಳೆದ 2-3 ದಶಕಗಳಿಂದ ಪಕ್ಷದ ಕಾರ್ಯಕರ್ತರು ನೋವಿನಲ್ಲಿದ್ದಾರೆ.  ಇದಕ್ಕೆ ಕಾರಣ ವಿರೋಧ ಪಕ್ಷದವರಲ್ಲ. ನಮ್ಮವರೇ ಕಾರಣ ಎಂದರು. ಇಲ್ಲಿ ಯಾರು ಅಭ್ಯರ್ಥಿ ಎನ್ನುವುದು ಮುಖ್ಯವಲ್ಲ. ಎದುರಾಳಿ ವಿರುದ್ಧ ಗೆಲುವು ಪಡೆಯುವವರು ಮುಖ್ಯವಾಗಿ ಕಾಣಿಸುತ್ತದೆ ಎಂದು ಕಿವಿಮಾತು ಹೇಳಿದರು.

ಕಾಂಗ್ರೆಸ್ ಪಕ್ಷ ಯದ್ಧಕ್ಕೆ ಸಿದ್ದವಾಗಿದ್ದು, ಯುದ್ಧದಲ್ಲಿ ಎದುರಾಳಿ ವೈರಿಗಳು ಯಾರೆಂದು ನೋಡಬಾರದು ವೈರಿಗಳನ್ನು ಶಕ್ತಿ ಹಾಗೂ ಯುಕ್ತಿಯಿಂದ ಮಣಿಸಲು ಕಾರ್ಯಕ್ರಮ ರೂಪಿಸುವ ಜವಾಬ್ದಾರಿ ಮುಖಂಡರ ಮೇಲಿದೆ. ಜಿಲ್ಲೆಯ ಇಲ್ಲಿನ ಜನರ ಪ್ರೀತಿ ನೋಡಿದರೇ ಹಾಸನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಭವಿಷ್ಯವಿದೆ. ಪಕ್ಷದಲ್ಲಿ ಎಲ್ಲಾರೂ ಒಗ್ಗಟ್ಟು ಪ್ರದರ್ಶಿಸಿದರೇ 7 ವಿಧಾನಸಭಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸುವುದು ಸುಲಭವಾಗುತ್ತದೆ ಎಂದು ಸಲಹೆ ನೀಡಿದರು.

ಚುನಾವಣಾ ಆಕಾಂಕ್ಷಿಗಳ ಪಟ್ಟಿಯನ್ನು ತಯಾರಿಸುವ ಸಲುವಾಗಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ನನ್ನನ್ನು ಹಾಸನ ಜಿಲ್ಲಾ ಉಸ್ತುವಾರಿಯಾಗಿ ನೇಮಿಸಿದ್ದು, ಜಿಲ್ಲೆಯಲ್ಲಿ 2-3 ದಿನ ವಾಸ್ತವ್ಯ ಹೂಡಿ, ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಭಾವನೆಗಳನ್ನು ಅರ್ಥಮಾಡಿಕೊಂಡು ಹಾಗೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿ ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ, ರಾಜ್ಯದಲ್ಲಿ ಸಿದ್ದರಾಮಯ್ಯ ಅವರನ್ನು ಮತ್ತೆ ಸಿಎಂ ಮಾಡಲು ಕೈಜೋಡಿಸಬೇಕೆಂದು ಕರೆ ನೀಡಿದರು.

ಚುನಾವಣಾ ಆಕಾಂಕ್ಷಿಗಳ ಪಟ್ಟಿಯನ್ನು ತಯಾರಿಸುವ ಸಲುವಾಗಿ ಜಿಲ್ಲಾ ಕಾಂಗ್ರೆಸ್ ಭವನದ ಆವರಣದಲ್ಲಿ ಬಹಿರಂಗ ಭಾಷಣದ ನಂತರ ಕಛೇರಿಗೆ ತೆರಳಿದರು. ಈ ವೇಳೆ ಆಗಮಿಸಿದ್ದ ಜಿಲ್ಲೆಯ ವಿವಿಧ ತಾಲೂಕಿನ ಅಭ್ಯರ್ಥಿಗಳು ಬೆಂಬಲಿಗರೊಂದಿಗೆ ಆಗಮಿಸಿ ಮನವಿ ಸಲ್ಲಿಸಿದರು.

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಜಾವಗಲ್ ಮಂಜುನಾಥ್, ಕೆಪಿಸಿಸಿ ಉಪಾಧ್ಯಕ್ಷ ಬಿ. ಶಿವರಾಂ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗಾಯಿತ್ರಿ ಶಾಂತೇಗೌಡ, ಮಾಜಿ ಶಾಸಕರುಗಳಾದ ಹೆಚ್.ಎಂ ವಿಶ್ವನಾಥ್, ಸಿ.ಎಸ್ ಪುಟ್ಟೇಗೌಡ, ಎಸ್.ಎಂ ಆನಂದ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾದೇವರಾಜ್ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News