ಪ್ರಾಣಾಯಾಮ ಪ್ರಕಾಶಿಕಾ-ಯೋಗದೆಡೆಗೆ ಬೆಳಕು

Update: 2018-02-10 18:42 GMT

ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಚರ್ಚೆಯಲ್ಲಿರುವುದು ಯೋಗ. ಇಂದು ಯೋಗ ಎನ್ನುವುದು ಒಂದು ಉದ್ಯಮ ರೂಪವನ್ನು ಪಡೆಯುತ್ತಿದೆ. ಎಲ್ಲರೂ ಯೋಗವನ್ನು ಕಲಿಸಲು ಆತುರರಾಗಿದ್ದಾರೆ. ಯೋಗದ ಬಗ್ಗೆ ಪ್ರಾಥಮಿಕ ಮಾಹಿತಿಗಳಷ್ಟೇ ಉಳ್ಳವರು ಯೋಗ ಶಿಕ್ಷಕರಾಗುತ್ತಿದ್ದಾರೆ. ವ್ಯಾಯಾಮಗಳನ್ನೇ ಯೋಗ ಎಂದು ತಿಳಿದುಕೊಂಡವರೂ ಇದ್ದಾರೆ. ಒಟ್ಟಿಲ್ಲಿ ಆಧುನಿಕ ಒತ್ತಡಗಳು ಮನುಷ್ಯರನ್ನು ರೋಗಿಗಳನ್ನಾಗಿಸುವ ಹೊತ್ತಿನಲ್ಲೇ ಯೋಗದ ಹೆಸರಿನಲ್ಲಿ ಮೋಸ ಮಾಡುವವರೂ ಹೆಚ್ಚುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಯೋಗದ ಕುರಿತಂತೆ ನಿಜವಾದ ತಿಳುವಳಿಕೆಯನ್ನು ಹೊಂದಿದ ಯೋಗಿಗಳಿದ್ದಾರೆ. ಯೋಗಗಳನ್ನು ಅತಿ ವೈಭವೀಕರಿಸದೆ ಅದರ ಇತಿ ಮಿತಿಗಳಲ್ಲಿ ಪ್ರಯೋಜನಗಳನ್ನು ಹೇಳಿಕೊಡುವ ಅಗತ್ಯ ಇಂದು ಹೆಚ್ಚಿದೆ. ಈ ನಿಟ್ಟಿನಲ್ಲಿ ಯೋಗದಲ್ಲಿ ಅತೀ ಮುಖ್ಯವಾಗಿರುವ ‘ಪ್ರಾಣಾಯಾಮ’ದ ಬಗ್ಗೆ ಯೋಗರತ್ನ ಡಾ. ಎಸ್. ಎನ್. ಓಂಕಾರ್ ಅವರು ‘ಪ್ರಾಣಾಯಾಮ ಪ್ರಕಾಶಿಕಾ’ ಕೃತಿಯಲ್ಲಿ ಬರೆದಿದ್ದಾರೆ. ಇದನ್ನು ನವಕರ್ನಾಟಕ ಪ್ರಕಾಶನ ಹೊರತಂದಿದೆ. ಕೃತಿಯಲ್ಲಿ ಮೂರು ವಿಭಾಗಗಳಿವೆ. ಮೊದಲ ಭಾಗದಲ್ಲಿ ಪ್ರಾಣ ಮತ್ತು ಪ್ರಾಣಾಯಾಮದ ಜೊತೆಗಿರುವ ಸಂಬಂಧಗಳು ಮತ್ತು ಆಸನಗಳ ಬಗ್ಗೆ ವಿವರಗಳಿವೆ. ಉಸಿರಾಡುವುದು ಎಂದರೆ ಏನು ಎನ್ನುವ ಬಗ್ಗೆಯೂ ಕುತೂಹಲಕರ ಮಾಹಿತಿಗಳಿವೆ. ಗಾಳಿಯನ್ನು ಎಳೆದು ಹೊರ ಬಿಡುವುದಷ್ಟೇ ಉಸಿರಾಟವಲ್ಲ. ಅದರಾಚೆಗೂ ಅದು ದೇಹದೊಂದಿಗೆ ಸಂಬಂಧವನ್ನು ಹೊಂದಿದೆ ಎನ್ನುವುದನ್ನು ಈ ಭಾಗದಲ್ಲಿ ಅರಿತು ಕೊಳ್ಳಬಹುದು. ಎರಡನೆ ಭಾಗದಲ್ಲಿ ಬಂಧಗಳ ಸಹಿತ ಉಸಿರಾಟದ ಕ್ರಮಗಳನ್ನು ವಿವರಿಸಲಾಗಿದೆ. ಅಂಗುಲಿ ನಿಯಂತ್ರಿತ ನಾಡಿಶೋಧನಾ ಪ್ರಾಣಾಯಾಮ ಕ್ರಮಗಳು, ಕುಂಭಕ ಹಾಗೂ ಬಂಧ ಸಹಿತ ನಾಡಿ ಶೋಧನ ಪ್ರಾಣಾಯಾಮದ ಕ್ರಮಗಳು ಇತ್ಯಾದಿಗಳ ವಿವರಗಳಿವೆ. ಮೂರನೇ ಭಾಗದಲ್ಲಿ ಉಸಿರಾಟ ಮತ್ತು ಧ್ಯಾನದ ಕುರಿತ ವಿವರಗಳಿವೆ.
  ಯೋಗ ಶಾಸ್ತ್ರದಲ್ಲಿ ದೈಹಿಕ, ಮಾನಸಿಕ, ಭಾವನಾತ್ಮಕ ಆರೋಗ್ಯದ ದೃಷ್ಟಿಯಿಂದಷ್ಟೇ ಅಲ್ಲದೆ, ಆಧ್ಯಾತ್ಮಿಕ ಉನ್ನತಿಯ ದೃಷ್ಟಿಯಿಂದಲೂ ಸಹ ಪ್ರಾಣಾಯಾಮಕ್ಕೆ ವಿಶಿಷ್ಟ ಸ್ಥಾನವಿದೆ. ಈ ನಿಟ್ಟಿನಲ್ಲಿ ಈ ಪುಸ್ತಕವು ಪ್ರಾಣಾಯಾಮದ ಪ್ರಾಥಮಿಕ ವಿಧಾನಗಳಷ್ಟೇ ಅಲ್ಲದೆ ಅದರ ಮುಂದುವರಿದ ವಿಧಾನಗಳಿಗೂ ಕೈ ಪಿಡಿಯಾಗಿದೆ. ಇಲ್ಲಿ ಪ್ರಾಣಾಯಾಮದ ಹಿನ್ನೆಲೆಯನ್ನು, ಪ್ರಯೋಜನವನ್ನು ವಿವರಿಸಿರುವುದೇ ಅಲ್ಲದೆ ಅದನ್ನು ಕಲಿಯುವ ಬಗೆ ಹೇಗೆಂಬ ವಿವರಗಳನ್ನೂ ಅವರು ಚಿತ್ರ ಸಹಿತ 24 ಅಧ್ಯಾಯಗಳಲ್ಲಿ ಚರ್ಚಿಸಿದ್ದಾರೆ. ಅಧ್ಯಯನ ಮತ್ತು ಸ್ವಂತ ಅನುಭವದ ನೆಲೆಯಲ್ಲಿ ರೂಪುಗೊಂಡಿರುವ ಕೃತಿ ಇದಾಗಿರುವುದರಿಂದ, ಇಲ್ಲಿರುವ ಮಾಹಿತಿಗಳನ್ನು ಗಂಭೀರವಾಗಿ ತೆಗೆದುಕೊಳ್ಳಬಹುದು. ಪ್ರಾಣಾಯಾಮದ ಕುರಿತಾಗಿ ಇರುವ ಪುಸ್ತಕಗಳಲ್ಲಿ ‘ಪ್ರಾಣಾಯಾಮ ಪ್ರಕಾಶಿಕಾ’ ಅತ್ಯುತ್ತಮ ಸೇರ್ಪಡೆ ಎನ್ನುವುದರಲ್ಲಿ ಎರಡು ಮಾತಿಲ್ಲ. 292 ಪುಟಗಳ ಈ ಕೃತಿಯ ಮುಖಬೆಲೆ 250 ರೂಪಾಯಿ.



Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News