ಕೂದಲೆಳೆ ಅಂತರದಿಂದ ತಪ್ಪಿದ ವಿಮಾನಗಳ ಢಿಕ್ಕಿ!

Update: 2018-02-11 05:04 GMT

ಹೊಸದಿಲ್ಲಿ,ಫೆ.11: ಎರಡು ವಿಮಾನಗಳು ವಾಯುಮಾರ್ಗದ ಮಧ್ಯದಲ್ಲಿ ಪರಸ್ಪರ ಢಿಕ್ಕಿಯಾಗಿ ಸಂಭವಿಸಬಹುದಾಗಿದ್ದ ಭೀಕರ ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮುಂಬೈ ವಾಯುಪ್ರದೇಶದಲ್ಲಿ ಬುಧವಾರ ರಾತ್ರಿ 8ರ ಸುಮಾರಿಗೆ ಈ ಘಟನೆ ನಡೆದಿದ್ದು, ಎರಡೂ ವಿಮಾನಗಳ ಯಾನಿಗಳು ಪಾರಾಗಿದ್ದಾರೆ. ವಿಸ್ತಾರ ಏರ್‍ಲೈನ್ಸ್ ನ ವಿಮಾನ ನಿಗದಿತ ಪ್ರಮಾಣಕ್ಕಿಂತ ಕೆಳಮಟ್ಟದಲ್ಲಿ ಹಾರಾಡಿದ್ದೇ ಈ ಅಚಾತುರ್ಯಕ್ಕೆ ಕಾರಣ ಎನ್ನಲಾಗಿದೆ. ಈ ಸಂಬಂಧ ವಿಸ್ತಾರ ಏರ್‍ಲೈನ್ಸ್ ನ ಇಬ್ಬರು ಪೈಲಟ್‍ಗಳನ್ನು ಅಮಾನತು ಮಾಡಿ ವಿಮಾನಯಾನ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಆದರೆ ಕಂಪನಿ ತನ್ನ ಪೈಲಟ್‍ಗಳನ್ನು ಸಮರ್ಥಿಸಿಕೊಂಡಿದ್ದು, ವಾಯು ಸಂಚಾರ ನಿಯಂತ್ರಣ (ಎಟಿಸಿ) ವಿಭಾಗದ ಸೂಚನೆಯ ಮೇರೆಗೆ ವಿಮಾನ 27 ಸಾವಿರ ಅಡಿ ಎತ್ತರದಲ್ಲಿ ಹಾರಾಡುತ್ತಿತ್ತೇ ವಿನಃ ಪೈಲಟ್‍ಗಳು ಬೇಕಾಬಿಟ್ಟಿಯಾಗಿ ಈ ಅಂತರದಲ್ಲಿ ವಿಮಾನ ಚಲಾಯಿಸಲಿಲ್ಲ ಎಂದು ಹೇಳಿಕೊಂಡಿದೆ.

ದೆಹಲಿಯಿಂದ ಪುಣೆಗೆ ಹೋಗುತ್ತಿದ್ದ ವಿಸ್ತಾರ ಎ-320 ನಿಯೊ ವಿಮಾನ 152 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಇದು ವಾಸ್ತವವಾಗಿ 29 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸಬೇಕಿತ್ತು. ಆದರೆ 27 ಸಾವಿರ ಅಡಿ ಎತ್ತರದಲ್ಲಿ ಹಾರಾಡಿದ್ದು ಸಮಸ್ಯೆಗೆ ಕಾರಣ ಎನ್ನಲಾಗಿದೆ. ಇದೇ ವೇಳೆ ವಿರುದ್ಧ ದಿಕ್ಕಿನಲ್ಲಿ ಮುಂಬೈನಿಂದ ಭೋಪಾಲ್‍ಗೆ ಹೊರಟಿದ್ದ ಏರ್‍ಇಂಡಿಯಾದ ಎ-319 ಏರ್‍ಬಸ್ ಇದೇ ಎತ್ತರದಲ್ಲಿ ಹೊರಟಿತ್ತು. ವಿಮಾನಗಳು ಪರಸ್ಪರ ಢಿಕ್ಕಿಯಾಗುವ ಹಂತದಲ್ಲಿ ಕೇವಲ 100 ಅಡಿ ಅಂತರದಲ್ಲಿ ಭಾರಿ ದೊಡ್ಡ ದುರಂತ ತಪ್ಪಿತು ಎನ್ನಲಾಗಿದೆ.

ಎರಡೂ ವಿಮಾನಗಳ ಕಾಕ್‍ಪೀಟ್‍ನಲ್ಲಿ ತಕ್ಷಣ ಸಂಚಾರ ಢಿಕ್ಕಿ ತಪ್ಪಿಸುವ ವ್ಯವಸ್ಥೆ (ಟಿಸಿಎಎಸ್) ಅಲರಾಂಗಳು ಮೊಳಗಿದವು. ವಿಮಾನಗಳ ಪೈಲಟ್‍ಗಳು ಢಿಕ್ಕಿ ತಪ್ಪಿಸುವಲ್ಲಿ ಯಶಸ್ವಿಯಾದರು. ಒಂದು ಹಂತದಲ್ಲಿ ಲಂಬಾಕಾರವಾಗಿ ಕೇವಲ 100 ಅಡಿ ಅಂತರದಲ್ಲಿ ಎರಡೂ ವಿಮಾನಗಳು ಇದ್ದವು. ಕೆಲವೇ ಸೆಕೆಂಡ್‍ಗಳಲ್ಲಿ ಈ ವಿಮಾನಗಳು ಪರಸ್ಪರ ಡಿಕ್ಕಿಯಾಗುತ್ತಿದ್ದವು ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News