ಇನ್ನು ಮುಂದೆ ಇಲ್ಲಿ ಅತ್ತೆ –ಸೊಸೆ ಹೊಡೆದಾಡಿಕೊಳ್ಳಲ್ಲ !

Update: 2018-02-11 17:44 GMT

ಅಹ್ಮದಾಬಾದ್, ಫೆ.11: ಪಾಟಿದಾರ್ ಮೀಸಲಾತಿ ಚಳವಳಿಯಿಂದ ದೇಶದ ಗಮನ ಸೆಳೆದಿದ್ದ ಗುಜರಾತ್‌ನಲ್ಲಿ ಈಗ ಮತ್ತೊಂದು ವಿಶಿಷ್ಟ ಅಭಿಯಾನ ಆರಂಭವಾಗಿದೆ. ‘ಪರಸ್ಪರರನ್ನು ಇಷ್ಟಪಡೋಣ’ ಎಂಬ ಧ್ಯೇಯವಾಕ್ಯದೊಡನೆ ಪಾಟಿದಾರ್ ಸಮುದಾಯದ ಅತ್ತೆ ಸೊಸೆಯರು ತಮ್ಮೆಳಗಿನ ಅಭಿಪ್ರಾಯಬೇಧಗಳನ್ನು ಬದಿಗಿಟ್ಟು ಪರಸ್ಪರರನ್ನು ಗೌರವಿಸಿ ಆದರಿಸುವ ಅಭಿಯಾನವನ್ನು ಆರಂಭಿಸಿದ್ದಾರೆ.

   ಈ ಹಿನ್ನೆಲೆಯಲ್ಲಿ ಜನವರಿ 29ರಂದು ರಾಜ್‌ಕೋಟ್‌ನಲ್ಲಿ ನಡೆದ ಬೃಹತ್ ಮಹಿಳಾ ರ್ಯಾಲಿಯಲ್ಲಿ 30,000ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡು ಅತ್ತೆ ಸೊಸೆಯರ ಒಗ್ಗಟ್ಟಿನ ಮಂತ್ರಕ್ಕೆ ಸಾಕ್ಷಿಯಾದರು.

     ಪರಿವಾರದೊಳಗೆ ನಡೆಯುವ ಕಲಹದಲ್ಲಿ ಶೇ.25ರಷ್ಟು ಅತ್ತೆ-ಸೊಸೆಯರ ನಡುವಿನ ಕಲಹವಾಗಿದೆ ಎಂದು ರಾಜ್ಯಸರಕಾರ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿರುವ ಹಿನ್ನೆಲೆಯಲ್ಲಿ ಇದೀಗ ರಾಜ್ಯದ ಅತ್ತೆ- ಸೊಸೆಯಂದಿರು ಒಗ್ಗೂಡಲು ನಿರ್ಧರಿಸಿದ್ದಾರೆ. ಅಲ್ಲದೆ ಗುಜರಾತ್ ರಾಜ್ಯದ ಸ್ತ್ರೀ-ಪುರುಷ ಅನುಪಾತದಲ್ಲೂ ತೀವ್ರ ಕುಸಿತ ಕಂಡಿದ್ದು 1000 ಪುರುಷರಿಗೆ 919 ಮಹಿಳೆಯರಿದ್ದಾರೆ. ಈ ಕಾರಣದಿಂದಲೇ ಕಳೆದೊಂದು ದಶಕದಿಂದ ಪಾಟಿದಾರ್ ಸಮುದಾಯದಲ್ಲಿ ‘ಬೇಟಿ ಬಚಾವೊ’ ಅಭಿಯಾನ ಆರಂಭವಾಗಿದೆ.

 ಅತ್ತೆ ಸೊಸೆಯರ ಮಧ್ಯೆ ಪರಸ್ಪರ ಗೌರವ, ಆದರದ ಭಾವನೆಯಿದ್ದರೆ ವರದಕ್ಷಿಣೆ, ಹೆಣ್ಣು ಭ್ರೂಣಹತ್ಯೆಯಂತಹ ಸಾಮಾಜಿಕ ಅನಿಷ್ಟಗಳನ್ನು ದೂರಗೊಳಿಸಲು ಸಾಧ್ಯ ಎಂಬ ವಿಶ್ವಾಸದಲ್ಲಿ ಪಾಟಿದಾರ್ ಸಮುದಾಯದ ಮಹಿಳೆಯರು ಈ ಅಭಿಯಾನಕ್ಕೆ ಜೊತೆಯಾಗಿದ್ದಾರೆ. ಪ್ರಸಿದ್ಧ ಸಾಹಿತಿ ಜಯ್ ವಾಸವ್ದ , ಸರಕಾರದ ಅಧಿಕಾರಿಗಳು, ಸರಕಾರದ ಅಧೀನದ ಮಹಿಳಾ ಹೆಲ್ಪ್‌ಲೈನ್ -ಅಭಯಂ ಮುಂತಾದ ಸಂಘಟನೆಗಳು ಇವರಿಗಾಗಿ ಸಮಾಲೋಚನಾ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.

 ಅತ್ತೆ ಸೊಸೆಯರು ಮನಸ್ತಾಪ ಮರೆತರೆ ಉಭಯರಿಗೂ ಲಾಭವಿದೆ. ಇದರಿಂದ ಸೊಸೆಗೆ ಮನೆಯಲ್ಲಿ ದೊರಕಬೇಕಾದ ಗೌರವ ದೊರೆಯುತ್ತದೆ ಹಾಗೂ ಆಕೆಯ ಹಕ್ಕನ್ನು ಮೊಟಕುಗೊಳಿಸಲು ಪುರುಷರು ನಡೆಸುವ ಕೃತ್ಯಕ್ಕೆ ಅತ್ತೆಯ ಸಹಕಾರ ದೊರಕುವುದಿಲ್ಲ. ಅಲ್ಲದೆ ಅತ್ತೆಯರು ಸೊಸೆಯಂದಿರ ಪ್ರೀತಿ ವಿಶ್ವಾಸ ಗಳಿಸುವ ಕಾರಣ ಅವರು ವೃದ್ಧಾಪ್ಯದಲ್ಲಿ ವೃದ್ಧಾಶ್ರಮ ಸೇರಿಕೊಳ್ಳುವ ಸಾಧ್ಯತೆ ದೂರವಾಗುತ್ತದೆ ಎಂದು ಪಟೇಲ್ ಸೇವಾ ಸಮಾಜದ ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯಾಬೆನ್ ಪಟೇಲ್ ಹೇಳಿದ್ದಾರೆ.

ಅತ್ತೆ ತನ್ನೊಂದಿಗೆ ಇದ್ದಾರೆ ಎಂಬ ಧೈರ್ಯದಿಂದ ಸೊಸೆಯಂದಿರ ಆತ್ಮವಿಶ್ವಾಸ ಹೆಚ್ಚಿ ಅವರು ಮನೆಯಲ್ಲಿ ಹಾಗೂ ಸಮಾಜದಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ಬಾಳಲು ಸಾಧ್ಯವಾಗುತ್ತದೆ. ಅಲ್ಲದೆ ಬದುಕಿನಲ್ಲಿ ಎದುರಾಗುವ ಯಾವುದೇ ಸವಾಲನ್ನೂ ಎದುರಿಸುವ ಶಕ್ತಿಯನ್ನು ಪಡೆಯುತ್ತಾಳೆ ಎಂದು ವಿಜಯಾಬೆನ್ ಪಟೇಲರ ಸೊಸೆ ಕಿಂಜಲ್ ಹೇಳಿದ್ದಾರೆ.

   ಜ.29ರ ಮಹಿಳಾ ಅಭಿಯಾನದ ಯಶಸ್ಸಿನಿಂದ ಪ್ರೇರಿತಗೊಂಡು ಇದೀಗ ಮಹಿಳಾ ವಿಭಾಗದವರು ‘ಸಮಸ್ಯೆ ನಿವಾರಣೆ ವೇದಿಕೆ’ ಯನ್ನು ಆರಂಭಿಸಿದ್ದಾರೆ. ಇದು ತಿಂಗಳಿಗೆ ಎರಡು ಬಾರಿ ಸಭೆ ಸೇರಲಿದ್ದು ಇಲ್ಲಿ ಕುಟುಂಬದ ಸದಸ್ಯರು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ವಿಜಯಾಬೆನ್ ತಿಳಿಸಿದ್ದಾರೆ. ಒಂದು ರ್ಯಾಲಿ ನಡೆದರಷ್ಟೇ ಸಾಲದು. ಆಗಬೇಕಾದ ಕಾರ್ಯ ಇನ್ನೂ ಬಹಳವಿದೆ. ಆದರೆ ‘ಉತ್ತಮ ಆರಂಭ ಪಡೆಯುವ ಕಾರ್ಯ ಅರ್ಧ ಯಶಸ್ವಿಯಾದಂತೆ’ ಎಂಬ ನಾಣ್ಣುಡಿಯಂತೆ ನಮ್ಮ ಅಭಿಯಾನಕ್ಕೆ ಬೆಂಬಲ ದೊರೆತಿದೆ. ರಾಜ್‌ಕೋಟ್‌ನ ಹಲವು ಗಣ್ಯ ಕುಟುಂಬದವರೂ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ ಎಂದು ಈ ಅಭಿಯಾನದ ಸ್ಥಾಪಕರಲ್ಲಿ ಓರ್ವರಾದ ಮನೀಷ್ ಚಂಗೇಲಾ ಹರ್ಷ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಈ ಅಭಿಯಾನವನ್ನು ಮುಂದೆ ಸಾಗಿಸಿಕೊಂಡು ಹೋಗುತ್ತೇವೆ ಎಂದವರು ಹೇಳಿದ್ದಾರೆ.

ಇದೊಂದು ಸಂಪೂರ್ಣ ಸಾಮಾಜಿಕ ಅಭಿಯಾನವಾಗಿದ್ದು ರಾಜಕೀಯಕ್ಕೆ ಅವಕಾಶವಿಲ್ಲ.ರಾಜ್‌ಕೋಟ್ ಕಾರ್ಯಕ್ರಮದಲ್ಲಿ ಭಾಷಣ ಮಾಡಿದವರನ್ನು ಹೊರತುಪಡಿಸಿದರೆ ಯಾವುದೇ ರಾಜಕೀಯ, ಧಾರ್ಮಿಕ ಅಥವಾ ಸಮುದಾಯದ ನಾಯಕರು ಪಾಲ್ಗೊಂಡಿರಲಿಲ್ಲ ಎಂದು ಚಂಗೇಲಾ ಹೇಳಿದ್ದಾರೆ.

ಕುಟುಂಬದಲ್ಲಿ ಮಹಿಳಾ ಸದಸ್ಯರೊಳಗೆ ಒಗ್ಗಟ್ಟು ಮೂಡಿಸುವ ವಿಷಯದ ಬಗ್ಗೆ ಪ್ರಮುಖ ಸಾಹಿತಿಗಳು ಬರೆದಿರುವ ಲೇಖನಗಳನ್ನು ಒಳಗೊಂಡಿರುವ ಪುಸ್ತಕಗಳನ್ನು ಮನೆಮನೆಗೆ ತಲುಪಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅಭಿಯಾನಕ್ಕೆ ಬೆಂಬಲ ನೀಡಿರುವ ‘ಅಭಯಂ’ನ ಪ್ರಾದೇಶಿಕ ಮುಖ್ಯಸ್ಥ ತುಷಾರ್ ಬವರವ ಹೇಳಿದ್ದಾರೆ.

ಈ ಹಿಂದಿನ ತಲೆಮಾರಿನಲ್ಲಿ ಅತ್ತೆ ಸೊಸೆಯರ ಜಗಳ ಚರ್ಚೆಯ ವಿಷಯವಾಗಿರಲಿಲ್ಲ. ಆಗ ಮನೆಯ ಹಿರಿಯರ ಮಾತಿಗೆ ಗೌರವವಿತ್ತು. ಆದರೆ ಈಗಿನ ತಲೆಮಾರಿಗೆ ಎಲ್ಲವೂ ಬದಲಾಗಿದೆ. ಈಗ ವೈಯಕ್ತಿಕ ಹಕ್ಕಿನ ಕುರಿತು ಎಲ್ಲರೂ ಆಲೋಚಿಸುತ್ತಿದ್ದಾರೆ. ಈಗ ಅತ್ತೆಯಂದಿರೂ ಸೊಸೆಯ ಅಭಿಪ್ರಾಯ ಕೇಳಲು ಬಯಸುವುದಿಲ್ಲ. ಈ ಮನಃಸ್ಥಿತಿ ಬದಲಾಗಬೇಕಿದ್ದು ಸೌಹಾರ್ದಮಯ ವಾತಾವರಣ ನೆಲೆಸುವ ಅಗತ್ಯವಿದೆ ಎಂದು ವಿಜಯಾಬೆನ್ ಪಟೇಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News