​ಈ ದೇವಸ್ಥಾನದಲ್ಲಿ ಹೆಲ್ಮೆಟ್ ಇದ್ದರಷ್ಟೇ ವಾಹನಕ್ಕೆಪೂಜೆ!

Update: 2018-02-12 05:28 GMT

ಪರದೀಪ್, ಫೆ.12: ಸಾವಿರ ವರ್ಷಗಳ ಇತಿಹಾಸವಿರುವ ಒಡಿಶಾದ ಜಗತ್‌ಸಿಂಗ್‌ಪುರ ಜಿಲ್ಲೆಯ ಈ ದೇವಸ್ಥಾನದ ವೈಶಿಷ್ಟ್ಯ ಏನು ಗೊತ್ತೇ? ಇಲ್ಲಿ ದ್ವಿಚಕ್ರ ವಾಹನಗಳಿಗೆ ಪೂಜೆ ಮಾಡಿಸಬೇಕಿದ್ದರೆ ಸವಾರ ಹೆಲ್ಮೆಟ್ ಧರಿಸಿರುವುದು ಕಡ್ಡಾಯ!.

ಪೊಲೀಸರ ಸೂಚನೆಯಂತೆ ಮಾ ಸರಳಾ ದೇವಸ್ಥಾನದ ಆಡಳಿತ ಮಂಡಳಿ, "ಹೆಲ್ಮೆಟ್ ಧರಿಸದಿದ್ದರೆ ಪೂಜೆ ಇಲ್ಲ" ಎಂಬ ನಿಯಮಾವಳಿ ಜಾರಿಗೆ ತಂದಿದೆ. ಈ ಸುರಕ್ಷಾ ಸಾಧನ ಹೊಂದಿರದಿದ್ದರೆ ಅಂಥ ವಾಹನಗಳಿಗೆ ಪೂಜೆ ಮಾಡುವುದಿಲ್ಲ ಎಂದು ಅರ್ಚಕರು ಸ್ಪಷ್ಟಪಡಿಸಿದ್ದಾರೆ.

ರಸ್ತೆ ಅಪಘಾತಗಳಲ್ಲಿ ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಸವಾರರು ಸಾವಿಗೀಡಾಗುವುದನ್ನು ತಪ್ಪಿಸಲು ಪೊಲೀಸ್ ಇಲಾಖೆ ರಾಜ್ಯಾದ್ಯಂತ ಎಲ್ಲ ದೇವಸ್ಥಾನಗಳ ಆಡಳಿತ ಮಂಡಳಿಗಳನ್ನು ಸಂಪರ್ಕಿಸಿ ಈ ಮನವಿ ಮಾಡುತ್ತಿದೆ. ಇದಕ್ಕೆ ಬಹುತೇಕ ದೇವಾಲಯಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಜೈನಾರಾಯಣ್ ಪಂಕಜ್ ವಿವರಿಸಿದರು.

ಪರದೀಪ್ ಸಮೀಪದ ಝಾಂಕಡ್‌ನಲ್ಲಿರುವ ಮಾ ಸರಳಾ ದೇವಸ್ಥಾನ ದ್ವಿಚಕ್ರ ವಾಹನ ಪೂಜೆಗೆ ಹೆಸರುವಾಸಿ. ಈ ಭಾಗದ ಯಾರೇ ದ್ವಿಚಕ್ರ ವಾಹನ ಖರೀದಿಸಿದರೂ ಇಲ್ಲೇ ಪೂಜೆ ಮಾಡಿಸುತ್ತಾರೆ. ಖರೀದಿ ದಿನದಿಂದಲೇ ಹೆಲ್ಮೆಟ್ ಕಡ್ಡಾಯವಾಗಿ ಬಳಸುವಂತೆ ಮಾಡಲು ಈ ಕ್ರಮ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News