ಹನೂರು: ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಬಸ್ ಸೌಕರ್ಯ ಕಲ್ಪಿಸಲು ಕರಾರಸಾಸಂ ವಿಫಲ; ಆರೋಪ

Update: 2018-02-12 11:07 GMT

ಹನೂರು,ಫೆ.12: ಸಾರ್ವಜನಿಕರು, ರೈತರು, ಬಡವರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಬಸ್ ಸೌಕರ್ಯ ಕಲ್ಪಿಸಲು ಕರಾರಸಾಸಂ ವಿಫಲವಾಗಿದೆ ಎಂದು ಕರವೇ ಸ್ವಾಭಿಮಾನಿ ಬಣದ ಅಧ್ಯಕ್ಷ ವಿನೋದ್ ಕುಮಾರ್ ಆರೋಪಿಸಿದರು.

ಪಟ್ಟಣದ ಲೋಕೋಪಯೋಗಿ ಇಲಾಖಾ ವಸತಿ ಗೃಹದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿನೋದ್ ಕುಮಾರ್, ಕ್ಷೇತ್ರ ವ್ಯಾಪ್ತಿಯ ಪಿ.ಜಿ.ಪಾಳ್ಯ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಕುಡುವಾಳೆ, ಉಯ್ಯಲುನತ್ತ, ಮಾದಪ್ಪನದೊಡ್ಡಿ, ಜೋರೆದೊಡ್ಡಿ ಗ್ರಾಮಗಳಿಗೆ ಇನ್ನೂ ಬಸ್ ವ್ಯವಸ್ಥೆ ಕಲ್ಪಿಸಿಲ್ಲ. ಈ ಸಂಬಂಧ ಡಿ.21 2017ರಂದು ಕರಾರಸಾಸಂ ಅಧಿಕಾರಿಗಳಿಗೆ ಮನವಿ ಮಾಡಿ ಒತ್ತಾಯಿಸಲಾಗಿತ್ತು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಕರಾರಸಾಸಂ ನಿಗಮದ ಇಲಾಖೆಯ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಇದೇ ತಿಂಗಳ 15ರಂದು ಹನೂರು ಪಟ್ಟಣದ ಕರಾರಸಾಸಂ ಬಸ್ ನಿಲ್ದಾಣದ ಮುಂಭಾಗ ವಿವಿಧ ಪ್ರಗತಿಪರ ಸಂಘಟನೆಗಳು, ರೈತ ಸಂಘಟನೆಗಳು ಮತ್ತು ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗವುದು ಎಂದು ಕಿಡಿಕಾರಿದರು. 

ಮುಖ್ಯ ಮಂತ್ರಿಗಳಿಗೆ ದೂರು ನೀಡಿದರೂ ಪ್ರಯೋಜನವಿಲ್ಲ: ಸ್ವಾತಂತ್ರ್ಯ ಬಂದು 70 ವರ್ಷಗಳೇ ಕಳೆದಿದ್ದರೂ ಕ್ಷೇತ್ರ ವ್ಯಾಪ್ತಿಯ ಬಹುಗ್ರಾಮಗಳಿಗೆ ಸಮರ್ಪಕ ಬಸ್ ಸೇವೆ ಲಭ್ಯವಾಗುತ್ತಿಲ್ಲ. ಈ ಬಗ್ಗೆ ಜ.10ರಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹನೂರು ಪಟ್ಟಣದಲ್ಲಿ ಸಾಧನಾ ಸಮಾವೇಶಕ್ಕೆ ಆಗಮಿಸಿದಾಗ ಈ ಬಗ್ಗೆ  ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು. 

ಬಸ್‍ ನಿಲ್ದಾಣಕ್ಕೆ ಮೂಲ ಸೌಕರ್ಯವಿಲ್ಲ: ಹನೂರು ಪಟ್ಟಣವು ನೂತನ ತಾಲೂಕಾಗಿ ಘೋಷಣೆಯಾಗಿದ್ದು, ಮುಖ್ಯಮಂತ್ರಿಗಳ ಆಗಮನದಂದೇ ಉದ್ಘಾಟನೆಯಾಗಿತ್ತು. ಆದರೆ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳಾದ ಆಸನದ ವ್ಯವಸ್ಥೆ, ಕುಡಿಯುವ  ನೀರಿನ ವ್ಯವಸ್ಥೆ, ನೆಲಹಾಸಿನ ಕಾಂಕ್ರಿಟೀಕರಣ ಕಾಮಗಾರಿಗಳು ನಡೆದಿಲ್ಲ. ಆದುದರಿಂದ ಕೂಡಲೇ ಅಗತ್ಯ ಸೌಕರ್ಯ ಕಲ್ಪಿಸಬೇಕು ಮತ್ತು ನೂತನ ತಾಲೂಕಿನ ಎಲ್ಲಾ ಗ್ರಾಮಗಳಿಗೆ ಬಸ್ ಸೌಕರ್ಯ ಕಲ್ಪಿಸಬೇಕು ಎಂದ ಒತ್ತಾಯಿಸಿದರು.

ಫೆ.15ರಂದು ಪ್ರತಿಭಟನೆ: ಸಾರ್ವಜನಿಕರು, ರೈತರು, ಬಡವರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚಿನ ಬಸ್ ಸೌಕರ್ಯ ಕಲ್ಪಿಸಿ ಗ್ರಾಮೀಣ ಪ್ರದೇಶಗಳಿಗೆ ಸೌಕರ್ಯ ಕಲ್ಪಿಸಲು ವಿಫಲವಾಗಿರುವ ಕರಾರಸಾಸಂ ನಿಗಮದ ಇಲಾಖೆಯ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಇದೇ ತಿಂಗಳ ಫೆ.15ರಂದು ಹನೂರು ಪಟ್ಟಣದ ಕರಾರಸಾಸಂ ಬಸ್ ನಿಲ್ದಾಣದ ಮುಂಭಾಗ ವಿವಿಧ ಪ್ರಗತಿಪರ ಸಂಘಟನೆಗಳು, ರೈತ ಸಂಘಟನೆಗಳು ಮತ್ತು ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆ ವೇಳೆ ಕರಾರಸಾಸಂನ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಶಾಸಕರು ಸ್ಥಳಕ್ಕಾಗಮಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕರವೇ ಸ್ವಾಭಿಮಾನಿ ಬಣದ ಗಿರೀಶ್, ಬಸವಣ್ಣ, ನಾಗರಾಜು, ಗೋಪಾಲ್ ನಾಯ್ಕ, ಮೂರ್ತಿ, ರಮೇಶ್,  ಪ್ರಭುಸ್ವಾಮಿ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News