ಅಫ್ಘಾನಿಸ್ತಾನವನ್ನು ಮಣಿಸಿದ ಝಿಂಬಾಬೈ: ಸರಣಿ ಸಮಬಲ

Update: 2018-02-12 18:47 GMT

ಶಾರ್ಜಾ, ಫೆ.12: ಎರಡನೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಝಿಂಬಾಬ್ವೆ ತಂಡ ಅಫ್ಘಾನಿಸ್ತಾನವನ್ನು 154 ರನ್‌ಗಳಿಂದ ಮಣಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಸಮಬಲ ಸಾಧಿಸಿದೆ.

ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಬ್ರೆಂಡನ್ ಟೇಲರ್ ಬಾರಿಸಿದ 9ನೇ ಶತಕದ(125 ರನ್) ನೆರವಿನಿಂದ ಝಿಂಬಾಬ್ವೆ 50 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 333 ರನ್ ಗಳಿಸಿದೆ.

  ಗೆಲ್ಲಲು ಕಠಿಣ ಸವಾಲು ಪಡೆದ ಅಫ್ಘಾನಿಸ್ತಾನ ತಂಡ ಗ್ರೇಮ್ ಕ್ರೀಮರ್(4-41)ದಾಳಿಗೆ ಸಿಲುಕಿ ಒಂದು ಹಂತದಲ್ಲಿ 89 ರನ್‌ಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿತು. ಅಂತಿಮವಾಗಿ ಕೇವಲ 179 ರನ್‌ಗೆ ಆಲೌಟಾಯಿತು. ಉಭಯ ತಂಡಗಳು ಮುಂದಿನ ತಿಂಗಳು ನಡೆಯಲಿರುವ 2019ರ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಭಾಗವಹಿಸಲಿದ್ದು, ಉತ್ತಮ ತಯಾರಿ ಆರಂಭಿಸಿವೆ. ಇದಕ್ಕೆ ಮೊದಲು ಟೇಲರ್-ಸಿಕಂದರ್ ರಝಾ ನಾಲ್ಕನೇ ವಿಕೆಟ್‌ಗೆ 135 ರನ್ ಜೊತೆಯಾಟ ನಡೆಸಿ ತಂಡ ಉತ್ತಮ ಮೊತ್ತ ದಾಖಲಿಸಲು ನೆರವಾದರು. 19ರ ಹರೆಯದ ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ 10 ಓವರ್‌ಗಳಲ್ಲಿ 36 ರನ್‌ಗೆ 2 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಆಲ್‌ರೌಂಡರ್ ರಝಾ 74 ಎಸೆತಗಳಲ್ಲಿ 13 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಹಿತ 92 ರನ್ ಗಳಿಸಿದರು.

ಗೆಲ್ಲಲು ಕಠಿಣ ಸವಾಲು ಪಡೆದ ಅಫ್ಘಾನಿಸ್ತಾನ ತಂಡ ಅಪಾಯಕಾರಿ ಬ್ಯಾಟ್ಸ್ ಮನ್ ಮುಹಮ್ಮದ್ ಶಹಝಾದ್(15) ವಿಕೆಟ್‌ನ್ನು ಬೇಗನೆ ಕಳೆದುಕೊಂಡಿತು. ಫಾರ್ಮ್‌ನಲ್ಲಿರುವ ಮುಹಮ್ಮದ್ ನಬಿ(31) ಅವರು ಮೊದಲ ಪಂದ್ಯದಲ್ಲಿ ಶತಕ ಗಳಿಸಿರುವ ರಹಮತ್ ಶಾಹ(43)ಅವರೊಂದಿಗೆ 53 ರನ್ ಜೊತೆಯಾಟ ನಡೆಸಿದರು. ಆದರೆ, ತಾನೆಸೆದ ಮೊದಲ ಓವರ್‌ನ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಉರುಳಿಸಿದ ಝಿಂಬಾಬ್ವೆ ನಾಯಕ ಕ್ರೀಮರ್ ತಂಡಕ್ಕೆ ಮೇಲುಗೈ ಒದಗಿಸಿಕೊಟ್ಟರು. ದೌಲತ್ ಝದ್ರಾನ್(47) 16ರ ಹರೆಯದ ಮುಜೀಬ್‌ರೊಂದಿಗೆ ಅಂತಿಮ ವಿಕೆಟ್‌ಗೆ 64 ರನ್ ಜೊತೆಯಾಟ ನಡೆಸಿದರು. ಆದರೂ ತಂಡವನ್ನು ಹೀನಾಯ ಸೋಲಿನಿಂದ ಪಾರಾಗಿಸಲು ಸಾಧ್ಯವಾಗಲಿಲ್ಲ.

ಸಂಕ್ಷಿಪ್ತ ಸ್ಕೋರ್

►ಝಿಂಬಾಬ್ವೆ: 50 ಓವರ್‌ಗಳಲ್ಲಿ 333/5

►(ಬ್ರೆಂಡನ್ ಟೇಲರ್ 125, ಸಿಕಂದರ್ ರಝಾ 92) ಅಫ್ಘಾನಿಸ್ತಾನ: 30.1 ಓವರ್‌ಗಳಲ್ಲಿ 179 ರನ್‌ಗೆ ಆಲೌಟ್

(ದೌಲತ್ ಝದ್ರಾನ್ 47, ರಹಮತ್ ಶಾ 43, ನಬಿ 31, ಗ್ರೇಮ್ ಕ್ರೀಮರ್ 4-41, ಟೆಂಡೈ ಚಟಾರಾ 3-24)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News