ಕೊಚ್ಚಿ: ಹಡಗಿನಲ್ಲಿ ಸ್ಫೋಟ: 5 ಸಾವು, 10 ಮಂದಿಗೆ ಗಾಯ

Update: 2018-02-13 15:02 GMT

ಕೊಚ್ಚಿ, ಫೆ. 13: ಕೊಚ್ಚಿ ಶಿಪ್ ಯಾರ್ಡ್‌ನಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟದಿಂದ ಕನಿಷ್ಠ 5 ಮಂದಿ ಮೃತಪಟ್ಟಿದ್ದಾರೆ ಹಾಗೂ 10 ಮಂದಿ ಗಾಯಗೊಂಡಿದ್ದಾರೆ.

 ತೈಲ ಹಾಗೂ ನೈಸರ್ಗಿಕ ಅನಿಲ ಕಾರ್ಪೋರೇಶನ್ (ಒಎನ್‌ಜಿಸಿ)ನ ಡ್ರಿಲ್ಲಿಂಗ್ ಶಿಪ್ ಸಾಗರ್ ಭೂಷಣ್‌ನಲ್ಲಿ ಬೆಳಗ್ಗೆ 10.45ಕ್ಕೆ ಸ್ಫೋಟ ಸಂಭವಿಸಿದೆ. ಹಡಗನ್ನು ದುರಸ್ತಿಗಾಗಿ ದಡದಲ್ಲಿ ನಿಲ್ಲಿಸಲಾಗಿತ್ತು.

ಬೆಂಕಿ ನಿಯಂತ್ರಿಸಲಾಗಿದೆ ಎಂದು ಕೊಚ್ಚಿ ಪೊಲೀಸ್ ಕಮಿಷನರ್ ಎಂ.ವಿ. ದಿನೇಶ್ ತಿಳಿಸಿದ್ದಾರೆ.

ಶಿಪ್‌ಯಾರ್ಡ್‌ನ ಡ್ರೈಡಾಕ್‌ನಲ್ಲಿ ಈ ಆಕಸ್ಮಿಕ ಸಂಭವಿಸಿದೆ. ಐದು ಮಂದಿ ಮೃತಪಟ್ಟಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸ್ಫೋಟ ಹೇಗೆ ಸಂಭವಿಸಿತು ಎಂಬ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.

ಹಡಗಿನ ಒಳಗೆ ಕನಿಷ್ಠ ಮೂವರು ವ್ಯಕ್ತಿಗಳು ಸಿಲುಕಿಗೊಂಡಿರುವ ಸಾಧ್ಯತೆ ಇದೆ. ಅವರ ರಕ್ಷಣಾ ಕಾರ್ಯ ನಡೆಯುತ್ತಿದೆ. ದುರಸ್ಥಿ ಮಾಡುತ್ತಿರುವಾಗ ಹಡಗಿನ ತೈಲ ಟ್ಯಾಂಕ್ ಸ್ಫೋಟಗೊಂಡಿತು ಎಂದು ಅವರು ಹೇಳಿದ್ದಾರೆ.

 ಕೇಂದ್ರ ಹಡಗು ಖಾತೆಯ ಸಚಿವ ನಿತಿನ್ ಗಡ್ಕರಿ ತನಿಖೆಗೆ ಆದೇಶಿಸಿದ್ದಾರೆ. ‘‘ಐವರ ಸಾವಿಗೆ ಕಾರಣವಾದ ಕೊಚ್ಚಿ ಶಿಪ್ ಯಾರ್ಡ್‌ನಲ್ಲಿ ಸಂಭವಿಸಿದ ಸ್ಫೋಟ ಆಘಾತ ಉಂಟು ಮಾಡಿದೆ. ಮೃತಪಟ್ಟವರ ಕುಟುಂಬಕ್ಕೆ ಸಂತಾಪ ಸಲ್ಲಿಸುತ್ತಿದ್ದೇನೆ’’ ಎಂದು ಗಡ್ಕರಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News