ಹನೂರು: ಸಿರಿಧಾನ್ಯ ಸಂಸ್ಕರಣಾ ಘಟಕದ ಉದ್ಘಾಟನಾ ಸಮಾರಂಭ

Update: 2018-02-13 12:11 GMT

ಹನೂರು,ಫೆ.13: ಆಧುನಿಕತೆ ಬೆಳೆದಂತೆಲ್ಲಾ ಮಾನವ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದು, ಈ ರೋಗಗಳ ನಿವಾರಣೆಗೆ ಸಿದ್ದ ಔಷಧ ಹುಡುಕುತ್ತಾ ಹೋರಟಾಗ ಸಾಮೆ, ಜೋಳ, ಸವಣೆ, ರಾಗಿ, ಸಜ್ಜೆಯಂತಹ ಸಿರಿಧಾನ್ಯಗಳು ರಾಮಬಾಣದಂತೆ ದೊರೆತವು ಎಂದು ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹರೀಶ್‍ಕುಮಾರ್ ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯ ವಡಕೆಹಳ್ಳ ಗ್ರಾಮದಲ್ಲಿ ವಿಶ್ವ ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ 82ನೇ ಜನ್ಮದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯ ವತಿಯಿಂದ ಮಹದೇಶ್ವರ ಸಾವಯವ ಸಿರಿಧಾನ್ಯ ಸ್ವ-ಸಹಾಯ ಸಂಘ ಮತ್ತು ಸಿರಿಧಾನ್ಯಗಳ ಸಂಸ್ಕರಣಾ ಘಟಕದ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿ ಮಾತನಾಡಿದ ಜಿ.ಪಂ ಸಿಇಓ ಹರೀಶ್‍ಕುಮಾರ್, ಚಾಮರಾಜನಗರ ಜಿಲ್ಲೆ ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರನ್ನು ಹೊಂದಿದೆ. ಆದರೆ ವ್ಯಾಪಾರೀಕರಣಕ್ಕೆ ಸಿಲುಕಿ ಕಲಬೆರಕೆ ರಾಸಾಯನಿಕ ಸಿಂಪಡಣೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಸಿಲುಕಿರುವುದು ದುರದೃಷ್ಟಕರ. ಇಂತಹ ಸಂದರ್ಭದಲ್ಲಿ ರೈತರು ಸಾವಯವ ಕೃಷಿ ಮತ್ತು ಸಿರಿಧಾನ್ಯಗಳ ಉತ್ಪಾದನೆಗೆ ಹೆಚ್ಚು ಒತ್ತು ಕೊಟ್ಟು ಕೃಷಿ ಮಾಡಿದಲ್ಲಿ ಔಷಧೀಯ ಗುಣಗಳುಳ್ಳ ಆಹಾರ ಪದಾರ್ಥಗಳ ಉತ್ಪಾದನೆ ಜೊತೆಗೆ ಆರ್ಥಿಕವಾಗಿಯೂ ಸಬಲರಾಗಬಹುದು. ಈ ನಿಟ್ಟಿನಲ್ಲಿ ರೈತರು ಹೆಚ್ಚು ಸಾವಯವ ಕೃಷಿ ಮತ್ತು ಸಿರಿಧಾನ್ಯಗಳ ಉತ್ಪಾದನೆಗೆ ಒತ್ತು ಕೊಡಬೇಕು ಮತ್ತು ಈ ರೀತಿಯ ಸಂಸ್ಕರಣಾ ಘಟಕಗಳು ಜಿಲ್ಲೆಯಾದ್ಯಂತ ತಲೆ ಎತ್ತುವಂತಾಗಬೇಕು ಎಂದು ಹೇಳಿದರು.

ಚಾಮರಾಜನಗರ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ತಿರುಮಲ್ಲೇಶ್ ಮಾತನಾಡಿ, 2018-19ನೇ ಸಾಲಿನ ಆರ್ಥಿಕ ವರ್ಷವನ್ನು ಸಿರಿಧಾನ್ಯಗಳ ವರ್ಷವೆಂದು ಘೋಷಣೆ ಮಾಡಲು ಕ್ರಮವಹಿಸಲಾಗಿದೆ. ಆದುದರಿಂದ ಜಿಲ್ಲೆಯ ರೈತಪರ ಸಂಘಟನೆಗಳು ಈ ಬಗ್ಗೆ ರೈತರಿಗೆ ಹೆಚ್ಚಿನ ಅರಿವು ಮೂಡಿಸಿ ಸಾವಯವ ಕೃಷಿಗೆ ಒತ್ತು ನೀಡುವಂತೆ ಪ್ರೇರೇಪಿಸಬೇಕು. ಸಾವಯವ ಕೃಷಿ ಮತ್ತು ಸಿರಿಧಾನ್ಯಗಳ ಮಹತ್ವವನ್ನರಿತ ಕೃಷಿ ಸಚಿವರಾದ ಕೃಷ್ಣ ಭೈರೇಗೌಡ ರಾಜ್ಯದ ವಿವಿಧ ಜಿಲ್ಲೆ, ತಾಲೂಕುಗಳು ಮತ್ತು ಹೊರರಾಜ್ಯಗಳಿಗೆ ತೆರಳಿ ಸಿರಿಧಾನ್ಯಗಳ ಮಹತ್ವದ ಬಗ್ಗೆ ಪ್ರಚಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ಸಾವಯವ ಸಿರಿಧಾನ್ಯ ಮೇಳವನ್ನು ಆಯೋಜಿಸಿ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಬಿತ್ತನೆ ಬೀಜ ಒದಗಿಸುವುದೇ ಸವಾಲು: ಸಿರಿಧಾನ್ಯಗಳನ್ನು ಹೊರತುಪಡಿಸಿ ಉಳಿದಂತಹ  ಬಿತ್ತನೆ ಬೀಜಗಳನ್ನು ಸರ್ಕಾರದ ವತಿಯಿಂದ ಸಬ್ಸಿಡಿ ದರದಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲಾಗುತ್ತಿದೆ. ಆದರೆ ಸಿರಿಧಾನ್ಯಗಳ ಉತ್ಪಾದನೆ ಅತ್ಯಲ್ಪ ಪ್ರಮಾಣದಲ್ಲಿರುವುದರಿಂದ ಸಿರಿಧಾನ್ಯಗಳಾದ ಸಾಮೆ, ಜೋಳ, ನವಣೆ, ರಾಗಿ, ಸಜ್ಜೆ, ಅರ್ಕ, ಊದಲು ಬಿತ್ತನೆ ಬೀಜಗಳನ್ನು ರೈತರ ಅವಶ್ಯಕತೆಗನುಗುಣವಾಗಿ ವಿತರಿಸುವುದು ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ರೈತಪರ ಸಂಘಟನೆಗಳು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಜಿಲ್ಲೆಯ ಭೋಗಾಪುರ ಗ್ರಾಮದಲ್ಲಿ ಅಂಧರ ಶಾಲೆ ಆರಂಭಿಸಿ ಪೋಷಣೆ ಮಾಡುತ್ತಿರುವ ದೀಪಾ ಅಕಾಡೆಮಿಯ ಮುಖ್ಯ ಶಿಕ್ಷಕಿಯಾದ ಶಿಲ್ಪಾರಿಗೆ ರೈತ ಚೇತನ ಪ್ರೊ.ಎಂಡಿಎನ್ ಪ್ರತಿಷ್ಠಾನದ ವತಿಯಿಂದ ಸಾಮಾಜಿಕ ಕಳಕಳಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬರಗೂರು ಕೆಳಮಠದ ಸುಬ್ರಮಣ್ಯ ರಾಜೇಂದ್ರ ಸ್ವಾಮಿ, ಕೃಷಿ ನಿರ್ದೇಶಕ ಯೋಗೇಶ್, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ಕಾರ್ಯದರ್ಶಿ ಗುರುಪ್ರಸಾದ್, ಚೆಂಗಡಿ ಕರಿಯಪ್ಪ, ಓಬಳಿ ವಿದ್ಯಾಸಂಸ್ಥೆಯ ಗಂಗಾಧರ್ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News