ಫೆ.21ರಿಂದ ಅಮಿತ್ ಶಾ ಕರಾವಳಿ ಪ್ರವಾಸ

Update: 2018-02-14 13:38 GMT

ಬೆಂಗಳೂರು, ಫೆ.14: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಫೆ.21ಮತ್ತು 22 ರಂದು ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ ಪ್ರವಾಸ ಮಾಡಲಿದ್ದು, ಸಭೆ, ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ತಿಳಿಸಿದರು.

ನಗರದಲ್ಲಿ ಮಾತನಾಡಿದ ಅವರು, ಫೆ.20ರಂದು ಬೆಳಗ್ಗೆ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಬಂಟ್ವಾಳದಲ್ಲಿ ನಡೆಯುವ ನವಶಕ್ತಿ ಸಮಾವೇಶದಲ್ಲಿ ಪಾಲ್ಗೊಳ್ಳುವರು. ನಂತರ ಉಡುಪಿಯಲ್ಲಿ ನಡೆಯುವ ಕರಾವಳಿ ಮೀನುಗಾರರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆಂದು ಹೇಳಿದರು.

ಫೆ.21ರಂದು ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡುವ ಅವರು, ಅದೇ ದಿನ ಮಂಗಳೂರು ವಿಭಾಗದ ಶಕ್ತಿ ಕೇಂದ್ರ ಮತ್ತು ಸಾಮಾಜಿಕ ಜಾಲತಾಣದ ಪ್ರಮುಖರ ಸಭೆಯಲ್ಲಿ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು. ಫೆ.22 ರಂದು ಹಾವೇರಿಯಲ್ಲಿ ಪರಿಶಿಷ್ಟ ಜಾತಿ ವರ್ಗದ ಸಮಾವೇಶ, ಫೆ.24ರಂದು ರಾಯಚೂರಿನಲ್ಲಿ ಹಿಂದುಳಿದ ವರ್ಗಗಳ ಸಮಾವೇಶ, 25ರಂದು ಕಲ್ಬುರ್ಗಿಯ ಪರಿಶಿಷ್ಟ ಜಾತಿ ವರ್ಗದ ಸಮಾವೇಶ ನಡೆಯಲಿದೆ ಎಂದು ಅವರು ತಿಳಿಸಿದರು.

ರೈತ ಸಮಾವೇಶ: ಫೆ.27ರಂದು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಹುಟ್ಟುಹಬ್ಬದ ಅಂಗವಾಗಿ ದಾವಣಗೆರೆಯಲ್ಲಿ ಬಿಜೆಪಿಯ ರೈತ ಸಮಾವೇಶ ಆಯೋಜಿಸಲಾಗಿದ್ದು, ಈ ಸಮಾವೇಶದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡು ಯಡಿಯೂರಪ್ಪರಿಗೆ ನೇಗಿಲು ನೀಡಿ ಸನ್ಮಾನಿಸುವರು. ಫೆ.28ರಂದು ಮಂಗಳೂರಿನಲ್ಲಿ ಬಿಜೆಪಿಯ ಮೊದಲ ಮಹಿಳಾ ಸಮಾವೇಶ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಮುಖಂಡರಾದ ರವಿಕುಮಾರ್, ವಾಮನಾಚಾರ್, ಅನ್ವರ್ ಮಾನಿಪ್ಪಾಡಿ ಮತ್ತಿತರರಿದ್ದರು.

ಪ್ರಧಾನಿ ನರೇಂದ್ರ ಮೋದಿ ಫೆ.19ರಂದು ಶ್ರವಣಬೆಳಗೊಳಕ್ಕೆ ಭೇಟಿ ನೀಡಲಿದ್ದಾರೆ. ನಂತರ ಮೈಸೂರಿನಲ್ಲಿ ಇಎಸ್‌ಐ ಆಸ್ಪತ್ರೆ ಉದ್ಘಾಟನೆ, ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಿ, ಸಂಜೆ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
-ಶೋಭಾ ಕರಂದ್ಲಾಜೆ, ಸಂಸದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News