ಉತ್ತರ ಪ್ರದೇಶದಲ್ಲಿ ಪೊಲೀಸ್ ಎನ್‍ಕೌಂಟರ್ ಗಳು ನಿಲ್ಲುವುದಿಲ್ಲ : ಆದಿತ್ಯನಾಥ್

Update: 2018-02-15 12:49 GMT

ಲಕ್ನೋ,ಫೆ.15: ರಾಜ್ಯದಲ್ಲಿ ಪೊಲೀಸ್ ಎನ್‍ಕೌಂಟರ್ ಗಳು ನಿಲ್ಲುವುದಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ತಿಳಿಸಿದ್ದಾರೆ. ವಿಪಕ್ಷಗಳು ಕ್ರಿಮಿನಲ್ ಗಳೊಂದಿಗೆ ಸಹಾನುಭೂತಿ ಹೊಂದಿವೆ ಎಂದೂ ಅವರು ಆರೋಪಿಸಿದ್ದಾರೆ.

ಸದನದಲ್ಲಿ ಶೂನ್ಯ ವೇಳೆಯಲ್ಲಿ ಮಾತನಾಡಿದ ಆದಿತ್ಯನಾಥ್, ಅಪರಾಧಿಗಳಿಗೆ ಯಾರು ಪ್ರೋತ್ಸಾಹ ನೀಡುತ್ತಿದ್ದಾರೆಂಬುದು ಎಲ್ಲರಿಗೂ ತಿಳಿದಿದೆ ಎಂದರಲ್ಲದೆ  1200 ಎನ್‍ಕೌಂಟರ್ ಗಳಲ್ಲಿ 40 ಕುಖ್ಯಾತ ಕ್ರಿಮಿನಲ್ ಗಳನ್ನು ಸಾಯಿಸಲಾಗಿದೆ ಎಂದಿದ್ದಾರೆ.

ಎರಡು ಎನ್‍ಕೌಂಟರ್ ಗಳು ಸೇರಿದಂತೆ ಮೂರು ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಆದಿತ್ಯನಾಥ್ ಸರಕಾರಕ್ಕೆ  ಸದನದ ಅಧ್ಯಕ್ಷ ರಮೇಶ್ ಯಾದವ್ ಫೆಬ್ರವರಿ 13ರಂದು ನೀಡಿದ ಸೂಚನೆಯ ಬಗ್ಗೆ  ದೇವೇಂದ್ರ ಪ್ರತಾಪ್ ಸಿಂಗ್ ಅವರು ಕೇಳಿದ ಪ್ರಶ್ನೆಯೊಂದಕ್ಕೆ ಆದಿತ್ಯನಾಥ್ ಉತ್ತರಿಸುತ್ತಿದ್ದರು.

“ನೊಯ್ಡಾದಲ್ಲಿ ಫೆಬ್ರವರಿ 3ರಂದು  ಜಿತೇಂದ್ರ ಯಾದವ ಎಂಬಾತನಿಗೆ ಗುಂಡೊಂದು ತಾಗಿದ ಘಟನೆಯು ಪೊಲೀಸ್ ಎನ್‍ಕೌಂಟರ್ ಅಲ್ಲ. ಇದರಿಂದ ಬಾಧಿತ ವ್ಯಕ್ತಿಯೂ ಅಂತೆಯೇ ಹೇಳಿದ್ದಾನೆ,'' ಎಂದು ಆದಿತ್ಯನಾಥ್ ತಿಳಿಸಿದರು.

ಶಾಸಕ ಸಿಂಗ್ ಅವರು ಎತ್ತಿದ ಪ್ರಶ್ನೆಯ ಬಗ್ಗೆ ತಮ್ಮ ನಿರ್ಧಾರವನ್ನು ಕಾಯ್ದಿರಿಸುವುದಾಗಿ ಯಾದವ್  ನಂತರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News