ಹರಿಹರ: ಸರ್ಕಾರಿ ಗೌರವದೊಂದಿಗೆ ಹುತಾತ್ಮ ಯೋಧ ಜಾವಿದ್ ಅಂತ್ಯಕ್ರಿಯೆ

Update: 2018-02-15 14:00 GMT

ಹರಿಹರ,ಫೆ.15:  ಹುತಾತ್ಮ ಯೋಧ ಕೆ. ಜಾವಿದ್ ಮೃತದೇಹದ ಅಂತ್ಯಕ್ರಿಯೆಯು ಇಲ್ಲಿನ ಅಂಜುಮನ್ ದಫನಭೂಮಿಯಲ್ಲಿ ಗುರುವಾರ ಸಂಜೆ 4 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ರಾಜಸ್ಥಾನದ ಜೋಧ್‍ಪುರ ಜಿಲ್ಲೆಯ ಪೋಕ್ರಾನ್ ಅಣುಬಾಂಬ್ ತರಬೇತಿ ಕೇಂದ್ರದಲ್ಲಿ ನಡೆಸಿದ್ದ ಬಾಂಬ್ ಹಾರಿಸುವ ತರಬೇತಿಯಲ್ಲಿ ವೀರ ಮರಣವನ್ನಪ್ಪಿದ್ದ ಯೋಧನಿಗೆ, ಭಾರತ ಸೇನೆಯ ಪರವಾಗಿ ಭಾರತ ಸೇನಾ ಸಿಬ್ಬಂದಿಯಿಂದ ಶೋಕಾಚರಣೆ ನಡೆಯಿತು.

ನಗರದ ಪಿ.ಬಿ ರಸ್ತೆಯ ಪಕ್ಕದ ತಾಲೂಕು ಕ್ರೀಡಾಂಗಣದಿಂದ ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ಸೇರಿದ್ದ ಅಪಾರ ಅಭಿಮಾನಿಗಳು ಸೈನಿಕ ಜಾವಿದ್ ಅಮರ ಹೈ-ಅಮರ್ ಹೈ ಎಂದು ಕೂಗುತ್ತಿದ್ದರು. ಮೆರವಣಿಗೆ ಸಾಗಿಬಂದ ದಾರಿಯುದ್ದಕ್ಕೂ ಸಾರ್ವಜನಿಕರು ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಚವನ್ನು ಅರ್ಪಿಸಿ ಗೌರವ ಸಲ್ಲಿಸಿದರು.

ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಸೇನೆಯ ಸಿಬ್ಬಂದಿ ಶೋಕ ಸಂದೇಶವಾಗಿ ಆಕಾಶದಲ್ಲಿ ಮೂರು ಸುತ್ತು ಗುಂಡು ಹಾರಿಸಿದರು. ಇಸ್ಲಾಂ ಧರ್ಮದ ಸಂಪ್ರದಾಯದಂತೆ ದಫನಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು. ನಂತರ ಭಾರತ ಸೇನೆಯು ವೀರ ಮರಣವನ್ನಪ್ಪಿರುವ ಸೈನಿಕನ ಮೃತದೇಹದ ಮೇಲೆ ಹೊದಿಸಿದ್ದ ರಾಷ್ಟ್ರ ಧ್ವಜವನ್ನು ಹುತಾತ್ಮ ಯೋಧನ ಪತ್ನಿಗೆ ಹಸ್ತಾಂತರಿಸಿತು. ಶೋಕಾಚರಣೆಗಾಗಿ ನಗರದ ಅನೇಕ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಶ್ರದ್ಧಾಂಜಲಿ ಸಲ್ಲಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಎಚ್.ಎಸ್. ಶಿವಶಂಕರ, ತಹಶೀಲ್ದಾರ ಅಬ್ದುಲ್ ರೆಹನ್‍ಪಾಷಾ, ಕಂದಾಯ ಅಧಿಕಾರಿ ಪ್ರಕಾಶ, ಸಿಪಿಐ ಲಕ್ಷ್ಮಣ ನಾಯ್ಕ, ಪಿಎಸ್‍ಐ ಶ್ರೀಧರ, ಸೇನೆಯ ಶಿಬ್ಬಂದಿ, ನಗರಸಭೆ ಅಧ್ಯಕ್ಷೆ ಸುಜಾತಾ ರೇವಣಸಿದ್ದಪ್ಪ  ಅಂಜುಮನ್ ಸಂಸ್ಥೆಯ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.            

ಸಾರ್ವಜನಿಕ ದರ್ಶನಕ್ಕೆ: ಸೈನಿಕ ಜಾವಿದ್ ಮೃತದೇಹವನ್ನು ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗಿತ್ತು. ಮೃತದೇಹ ಬೆಂಗಳೂರಿನಿಂದ ಬುಧವಾರ ರಾತ್ರಿಯೇ ನಗರದ ಪಿ.ಬಿ. ರಸ್ತೆಯ ಪಕ್ಕದ ಜಾವಿದ್ ಮನೆ ತಲುಪಿತ್ತು. ರಾತ್ರಿಯಿಂದ ಬೆಳಗಿನ ಜಾವದವರೆಗೆ ಇಸ್ಲಾಂ ಧರ್ಮದ ಸಂಪ್ರದಾಯದಂತೆ ಕಾರ್ಯಕ್ರಮಗಳನ್ನು ನಡೆಸಲಾಯಿತು. ಗುರುವಾರ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮನೆಯ ಮುಂದೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ನಂತರ 11 ಗಂಟೆಗೆ ಸೇನೆಯ ಮುಖಂಡರು ಮತ್ತವರ ಸಿಬ್ಬಂದಿ ಹಾಗೂ ಜಿಲ್ಲಾ, ತಾಲೂಕು ಆಡಳಿತ ಸರ್ಕಾರದ ಪರವಾಗಿ ಗೌರವ ವಂದನೆ, ಶ್ರದ್ಧಾಂಜಲಿ ಸಲ್ಲಿಸಿದರು.

ನಂತರ ಮೆರವಣಿಗೆ ಮೂಲಕ ಪಿ.ಬಿ. ರಸ್ತೆ ಮೂಲಕ ಹಾದು ನಗರದ ಕ್ರೀಡಾಂಗಣ ತಲುಪಿತು. ನಗರ ಹಾಗೂ ಗ್ರಾಮೀಣ ಪ್ರದೇಶದ ಶಾಲಾ-ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಸಾರ್ವಜನಿಕರು, ಜಿಲ್ಲೆಯ ಸರ್ಕಾರಿ ನೌಕರರು, ವಿವಿಧ ಸಂಘಟನೆಗಳ ಮುಖಂಡರು, ರಾಜಕೀಯ ಪಕ್ಷಗಳ ನೇತಾರರು, ಹೋರಾಟಗಾರರು ವೀರಯೋಧ ಜಾವಿದ್‍ರ ಅಂತಿಮ ದರ್ಶನ ಪಡೆದು, ಕಂಬನಿ ಮಿಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News