ಜೆಡಿಎಸ್-ಬಿಎಸ್ಪಿ ಮೈತ್ರಿ ಎಂಬ ಪ್ರಹಸನ

Update: 2018-02-16 04:39 GMT

ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಬಿಎಸ್ಪಿಯ ನಡುವೆ ಮೈತ್ರಿಯ ಘೋಷಣೆಯಾಗಿದೆ. ಆದರೆ ಜೆಡಿಎಸ್ ಪಕ್ಷವು ಮೈತ್ರಿ ಮಾಡಿಕೊಳ್ಳಲು ಹೊರಟಿರುವ ಬಿಎಸ್ಪಿ ಕರ್ನಾಟಕದಲ್ಲಿ ಎಷ್ಟರಮಟ್ಟಿಗೆ ತನ್ನ ಬೇರನ್ನು ಇಳಿಸಿಕೊಂಡಿದೆ ಎಂದು ಕೆದಕಿ ನೋಡಿದರೆ ನಿರಾಶೆಯಾಗುತ್ತದೆ. ಬಹುಶಃ ಸಿದ್ದರಾಮಯ್ಯರ ವರ್ಚಸ್ಸನ್ನು ಎದುರಿಸಲು ಬಿಎಸ್ಪಿ ಎನ್ನುವ ಹೆಸರನ್ನು ಒಂದು ತಂತ್ರವಾಗಿಯಷ್ಟೇ ಜೆಡಿಎಸ್ ಬಳಸಿಕೊಂಡಿದೆ. ಆ ಮೂಲಕ ದಲಿತರ ಮತಗಳನ್ನು ಸ್ವಲ್ಪ ಮಟ್ಟಿಗಾದರೂ ಸೆಳೆಯಬಹುದೋ ಎಂಬ ಲೆಕ್ಕಾಚಾರದಲ್ಲಿದೆ. ಆದರೆ ಈ ರಾಜ್ಯದಲ್ಲಿ ದಲಿತರು ಬಿಎಸ್ಪಿಯನ್ನು ತಮ್ಮ ಧ್ವನಿಯೆಂದು ಭಾವಿಸಿಲ್ಲ. ತಮ್ಮ ಪಕ್ಷವೆಂದು ಅದನ್ನು ನೆಚ್ಚಿಕೊಂಡೂ ಇಲ್ಲ. ದಲಿತರ ಪ್ರಬಲ ನಾಯಕರು ರಾಷ್ಟ್ರೀಯ ಪಕ್ಷಗಳ ಪ್ರಮುಖ ಹುದ್ದೆಗಳಲ್ಲಿ ಇರುವುದರಿಂದ ಮತ್ತು ಬಿಎಸ್ಪಿಯಲ್ಲಿರುವ ಬಹುತೇಕ ನಾಯಕರಿಗೆ ಯಾವುದೇ ಚಳವಳಿ, ಹೋರಾಟಗಳ ಇತಿಹಾಸವೇ ಇಲ್ಲದೇ ಇರುವುದರಿಂದ ರಾಜ್ಯದಲ್ಲಿ ಬಿಎಸ್ಪಿ ಮೈತ್ರಿ ಮುಂದಿನ ಚುನಾವಣೆಯಲ್ಲಿ ನಿರ್ಣಾಯಕವಾಗುತ್ತದೆ ಎಂದು ಭಾವಿಸುವಂತಿಲ್ಲ. ಉತ್ತರ ಪ್ರದೇಶದಲ್ಲಿ ಬಿಎಸ್ಪಿ ನೆಲೆಗೊಂಡ ಇತಿಹಾಸವನ್ನೊಮ್ಮೆ ನಾವು ಗಮನಿಸಬೇಕಾಗಿದೆ.

ಕಾನ್ಶೀರಾಂ ಮೂಲಕ ಹುಟ್ಟಿಕೊಂಡ ಸಾಮಾಜಿಕ ಹೋರಾಟವೇ ಮುಂದೆ ರಾಜಕೀಯ ಶಕ್ತಿಯ ರೂಪಪಡೆಯಿತು. ಸಂಘಟಿತವಾಗುವ ಅಗತ್ಯವನ್ನು ದಲಿತ ಮತ್ತು ಶೋಷಿತ ಸಮುದಾಯಕ್ಕೆ ಮನದಟ್ಟು ಮಾಡಿದ ಹೆಗ್ಗಳಿಕೆ ಕಾನ್ಶೀರಾಂ ಅವರಿಗೇ ಸೇರಬೇಕು. ಆದರೆ ಮುಂದೆ ಮಾಯಾವತಿ ರಾಜಕೀಯ ಉದ್ದೇಶಕ್ಕಾಗಿ ಈ ‘ಬಹುಜನ’ ಚಳವಳಿಯೊಳಗೆ ಬೇರೆ ಬೇರೆ ಪ್ರಯೋಗಗಳನ್ನು ಮಾಡಲು ಹೋಗಿ ಎಡವಟ್ಟು ಮಾಡಿಕೊಂಡರು. ಬಹುಜನವನ್ನು ಸರ್ವಜನವಾಗಿಸುವ ಅವರ ಯತ್ನ ಮತ್ತೆ ಬಿಎಸ್ಪಿಯೊಳಗೆ ಮೇಲ್ಜಾತಿಯ ಜನ ಪ್ರಾಬಲ್ಯಹೊಂದಲು ಅವಕಾಶ ನೀಡಿತು. ಇತ್ತ ಕರ್ನಾಟಕದಲ್ಲಿ ಬಿಎಸ್ಪಿಗೆ ಯಾವುದೇ ದಲಿತರ ಅಥವಾ ಬಹುಜನರ ಸಮಸ್ಯೆಗಳನ್ನು ಮುಂದಿಟ್ಟು ಮಹತ್ವದ ಹೋರಾಟ ರೂಪಿಸಿದ ಇತಿಹಾಸವೇ ಇಲ್ಲ. ಬಿಎಸ್ಪಿಯಲ್ಲಿ ಬೆರಳೆಣಿಕೆಯ ನಾಯಕರನ್ನು ಬಿಟ್ಟರೆ ಉಳಿದ ನಾಯಕರ ಪರಿಚಯ ಸ್ವತಃ ದಲಿತರಿಗೇ ಇಲ್ಲ. ಜೊತೆಗೆ ಬಿಎಸ್ಪಿ ತನ್ನ ಪಕ್ಷವನ್ನು ಬಹುಜನರ ಪಕ್ಷವಾಗಿ ಹರಡುವಲ್ಲೂ ವಿಫಲವಾಯಿತು. ಯಾವುದೇ ಪಕ್ಷಗಳಲ್ಲಿ ಪ್ರವೇಶ ಸಿಗದ ನಿರಾಶ್ರಿತರು ಬಿಎಸ್ಪಿಯನ್ನು ಮುಂದಿಟ್ಟುಕೊಂಡು ಸ್ಥಳೀಯವಾಗಿ ಪುಡಿ ರಾಜಕೀಯ ಮಾಡಿರುವುದನ್ನು ಬಿಟ್ಟರೆ ಕರ್ನಾಟಕದಲ್ಲಿ ಅದು ತನ್ನ ಬೇರನ್ನು ಇನ್ನೂ ಪರಿಣಾಮಕಾರಿಯಾಗಿ ಇಳಿಸಿಕೊಂಡಿಲ್ಲ. ಹೀಗಿರುವಾಗ, ಬಿಎಸ್ಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೇನೆ ಎಂಬ ಜೆಡಿಎಸ್‌ನ ಹೇಳಿಕೆ ಚುನಾವಣೆಯ ಮೇಲೆ ಗಂಭೀರ ಪರಿಣಾಮ ಉಂಟು ಮಾಡಲಾರದು. ಇಷ್ಟಕ್ಕೂ ಸಿದ್ದರಾಮಯ್ಯ ಅವರಲ್ಲಿ ಬಹುಜನರನ್ನು ಜೊತೆಗೆ ಕೊಂಡು ಹೋಗುವ ಗುಣಗಳಿವೆ.

ಇಂದು ಮುಸ್ಲಿಮರು, ದಲಿತರು, ಕ್ರೈಸ್ತರು ಮೊದಲಾದ ಸಮುದಾಯಗಳು ಕಾಂಗ್ರೆಸ್‌ನ ಜೊತೆಗೆ ಅಸಮಾಧಾನಗಳನ್ನು ಹೊಂದಿರಬಹುದು. ಆದರೆ ಸಿದ್ದರಾಮಯ್ಯ ಜೊತೆಗೆ ಯಾವುದೇ ಅಸಮಾಧಾನಗಳನ್ನು ಹೊಂದಿಲ್ಲ. ಉದ್ದೇಶ ಪೂರ್ವಕವಾಗಿ ಯಾವುದೇ ದಲಿತ ವಿರೋಧಿ ನೀತಿಗಳನ್ನು ಸಿದ್ದರಾಮಯ್ಯ ಅನುಸರಿಸಿದ ಉದಾಹರಣೆ ಇಲ್ಲ. ಹಾಗೆ ನೋಡಿದರೆ ಪರಮೇಶ್ವರ್ ದಲಿತ ಸಮುದಾಯದಿಂದ ಬಂದ ನಾಯಕರು. ಆದರೆ ಇಂದಿಗೂ ದಲಿತ ಸಮುದಾಯ ಪರಮೇಶ್ವರ್‌ಗಿಂತ ಸಿದ್ದರಾಮಯ್ಯ ಜೊತೆಗೇ ಒಲವು ಇಟ್ಟುಕೊಂಡಿದೆ. ದಲಿತರ ಸಮಸ್ಯೆಗಳಿಗೆ ಪರಮೇಶ್ವರ್ ಸ್ಪಂದಿಸಿರುವುದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ.

ಇನ್ನು ಜೆಡಿಎಸ್ ಮತ್ತು ಕಾಂಗ್ರೆಸ್‌ನೊಳಗಿರುವ ದಲಿತ ನಾಯಕರು ಮತ್ತು ಅವರ ಸ್ಥಾನಗಳಿಗೆ ಹೋಲಿಸಿದರೆ, ಜೆಡಿಎಸ್ ಈವರೆಗೆ ದಲಿತರಿಗೆ ಮಾಡಿದ್ದಾದರೂ ಏನು? ಎಂಬ ಪ್ರಶ್ನೆ ತಲೆಯೆತ್ತುತ್ತದೆ. ಇಂದು ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್‌ರಂತಹ ನಾಯಕರು ಅತ್ಯುನ್ನತ ಸ್ಥಾನದಲ್ಲಿದ್ದಾರೆ. ಖರ್ಗೆಯವರಂತೂ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸನ್ನು ಪ್ರತಿನಿಧಿಸುತ್ತಿದ್ದಾರೆ. ಅಂತಹ ಎಷ್ಟು ದಲಿತ ನಾಯಕರನ್ನು ಜೆಡಿಎಸ್ ರಾಜ್ಯಕ್ಕೆ ಕೊಟ್ಟಿದೆ? ಪ್ರಬಲ ಜಾತಿಯನ್ನು ಪ್ರತಿನಿಧಿಸುವ ಕುಮಾರಸ್ವಾಮಿಗಿಂತ, ಶೋಷಿತ ಸಮುದಾಯವನ್ನು ಪ್ರತಿನಿಧಿಸುವ ಸಿದ್ದರಾಮಯ್ಯ ದಲಿತರಿಗೆ ಸಾಮಾಜಿಕವಾಗಿ ಹೆಚ್ಚು ಹತ್ತಿರದಲ್ಲಿದ್ದಾರೆ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಈ ಹಿಂದೆ ಸಿದ್ದರಾಮಯ್ಯ ಅಹಿಂದ ಚಳವಳಿಯನ್ನು ಹುಟ್ಟು ಹಾಕಿದಾಗ, ಅದರ ವಿರುದ್ಧ ದೇವೇಗೌಡರು ‘ಒಳಮೀಸಲಾತಿ’ಯ ಅಸ್ತ್ರವನ್ನು ಬಳಸಿದ್ದರು. ಅದನ್ನು ಹೊರತು ಪಡಿಸಿದಂತೆ ಕುಮಾರ ಸ್ವಾಮಿಯವರು ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿ ಸುದ್ದಿ ಮಾಡಿದ್ದರು. ಇದರಾಚೆಗೆ ದಲಿತರ ಸಾಮಾಜಿಕ ಏಳುಬೀಳುಗಳಿಗೆ, ಅವರ ನೋವು ನಲಿವುಗಳಿಗೆ ಈ ನಾಯಕರು ಕೊಟ್ಟ ಕೊಡುಗೆ ಏನೇನೂ ಇಲ್ಲ. ಈ ಕಾರಣದಿಂದಲೇ, ಬಿಎಸ್ಪಿಯನ್ನು ಮುಂದಿಟ್ಟುಕೊಂಡು ಕುಮಾರಸ್ವಾಮಿಯವರು ದಲಿತರ ಜೊತೆಗೆ ಗುರುತಿಸಿಕೊಳ್ಳಲು ಹೊರಟಿದ್ದಾರೆ. ಆದರೆ ಬಿಎಸ್ಪಿಯೇ ರಾಜ್ಯದಲ್ಲಿ ದಲಿತರ ಜೊತೆಗೆ ಇನ್ನೂ ಗುರುತಿಸಿಕೊಂಡಿಲ್ಲದೇ ಇರುವಾಗ, ಬಿಎಸ್ಪಿಯೊಂದಿಗೆ ಗುರುತಿಸಿಕೊಂಡ ಕಾರಣಕ್ಕಾಗಿ ಕುಮಾರಸ್ವಾಮಿ ದಲಿತರ ನಾಯಕರಾಗಲು ಸಾಧ್ಯವಿಲ್ಲ.

ಜೆಡಿಎಸ್ ಮತ್ತು ಬಿಎಸ್ಪಿಯ ಮೈತ್ರಿಯಿಂದ ಕರ್ನಾಟಕಕ್ಕೆ ರಾಜಕೀಯವಾಗಿ ಯಾವ ಪ್ರಯೋಜನವೂ ಇಲ್ಲ. ಮುಖ್ಯವಾಗಿ ಇದರ ಲಾಭವನ್ನು ಬಿಜೆಪಿ ತನ್ನದಾಗಿಸಬಹುದು ಅಥವಾ ಜೆಡಿಎಸ್‌ಗೆ ಕೆಲವು ಸಾವಿರ ಮತಗಳನ್ನು ಹೆಚ್ಚುವರಿಯಾಗಿ ದೊರಕಿಸಿಕೊಟ್ಟು, ಬಿಜೆಪಿ ಮತ್ತು ಕಾಂಗ್ರೆಸ್‌ನ ನಡುವೆ ವ್ಯಾಪಾರ ಕುದುರಿಸಲು ಸಹಾಯ ಮಾಡಿಕೊಡಬಹುದು. ಅಪ್ಪ ಮಕ್ಕಳ ರಾಜಕೀಯ ಅಸ್ತಿತ್ವವನ್ನು ಉಳಿಸಲು ಬಿಎಸ್ಪಿ ಯಾಕೆ ಜೆಡಿಎಸ್‌ನ ಜೀತಕ್ಕಿಳಿಯಬೇಕು? ಎನ್ನುವ ಪ್ರಶ್ನೆಗೆ ಮೊತ್ತ ಮೊದಲು ಬಿಎಸ್ಪಿಯ ನಾಯಕರು ಉತ್ತರ ನೀಡಬೇಕಾಗಿದೆ. ಈ ಮೈತ್ರಿ ರಾಜ್ಯದ ಬಹುಜನರ ಹಿತಾಸಕ್ತಿಯನ್ನು ಯಾವ ರೀತಿಯಲ್ಲಿ ಉಳಿಸಲಿದೆ? ಎನ್ನುವುದನ್ನು ಬಹುಜನರಿಗಲ್ಲವಾದರೂ, ದಲಿತರಿಗೆ ವಿವರಣೆ ನೀಡ ಬೇಕು. ಇಲ್ಲವಾದರೆ ಇದು ಸಮಯದ ಅಗತ್ಯಕ್ಕಾಗಿ ಮಾಡಿಕೊಂಡ ಒಂದು ಸಮಯ ಸಾಧಕ ಮೈತ್ರಿ ಎಂದು ಕರೆಯಲ್ಪಡಬಹುದು. ಗುಜರಾತ್‌ನಲ್ಲಿ ಒಂದು ರಾಷ್ಟ್ರೀಯ ಪಕ್ಷಕ್ಕೆ ಸವಾಲು ಹಾಕಿ, ಜಿಗ್ನೇಶ್ ಮೇವಾನಿ ಹೇಗೆ ಗೆದ್ದರು ಎನ್ನುವುದನ್ನು ರಾಜ್ಯದ ಬಿಎಸ್ಪಿ ನಾಯಕರು ಅವಲೋಕನ ಮಾಡಬೇಕಾಗಿದೆ. ದಲಿತರು ಮಾತ್ರವಲ್ಲ, ಮುಸ್ಲಿಮರು, ಕೆಳಜಾತಿಯ ಎಲ್ಲ ಶೋಷಿತರು ಜಿಗ್ನೇಶ್ ಜೊತೆಗೆ ಒಂದಾಗಿದ್ದರು. ಉತ್ತರ ಪ್ರದೇಶದಲ್ಲಿ ಬಿಎಸ್ಪಿಗೆ ಯಾಕೆ ಹಿನ್ನಡೆಯಾಯಿತು ಎನ್ನುವುದರ ಕುರಿತೂ ಹಿಂದಕ್ಕೊಮ್ಮೆ ಕಣ್ಣು ಹೊರಳಿಸಬೇಕು. ಸಮಯ ಸಾಧಕ ನಾಯಕರ ಕೈಯಿಂದ ಬಿಎಸ್ಪಿಯನ್ನು ಬಿಡಿಸಿ, ಅದು ಸಾಮಾಜಿಕ ಹೋರಾಟಗಳ ಮೂಲಕ ರಾಜ್ಯಾದ್ಯಂತ ವಿಸ್ತರಿಸ ಬೇಕು. ಆಗ ಎಲ್ಲ ಸಮುದಾಯಗಳ ಶೋಷಿತರು ತಮ್ಮನ್ನು ಬಿಎಸ್ಪಿ ಮೂಲಕ ಗುರುತಿಸ ತೊಡಗುತ್ತಾರೆ. ಚುನಾವಣೆಯ ಸಂದರ್ಭದಲ್ಲಷ್ಟೇ ಕಣ್ಣು ಪಿಳುಕಿಸುವ ಬಿಎಸ್ಪಿ ಖಂಡಿತವಾಗಿಯೂ ಮುಂದಿನ ಚುನಾವಣೆಯಲ್ಲಿ ನಿರ್ಣಾಯಕವಾಗಲಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News