ಕಾವೇರಿ ನದಿಯಿಂದ ಕರ್ನಾಟಕಕ್ಕೆ 14.75 ಟಿಎಂಸಿ ಹೆಚ್ಚುವರಿ ನೀರು ಬಳಕೆಗೆ ಸುಪ್ರೀಂ ಅಸ್ತು

Update: 2018-02-16 15:44 GMT

ಹೊಸದಿಲ್ಲಿ,ಫೆ.16: ಕಾವೇರಿ ನದಿ ನೀರಿನ ನ್ಯಾಯವಾದ ಪಾಲಿಗಾಗಿ ಶತಮಾನ ಗಳಿಂದಲೂ ಹೋರಾಟ ನಡೆಸುತ್ತಿದ್ದ ಕರ್ನಾಟಕದ ರೈತರ ಪಾಲಿಗೆ ಶುಕ್ರವಾರ ಶುಭವಾರವಾಗಿ ಪರಿಣಮಿಸಿದೆ. ಕಾವೇರಿ ಜಲವಿವಾದ ಕುರಿತು ತನ್ನ ತೀರ್ಪನ್ನು ಶುಕ್ರವಾರ ಪ್ರಕಟಿಸಿರುವ ಸರ್ವೋಚ್ಚ ನ್ಯಾಯಾಲಯವು ಕಾವೇರಿಯ ಜೀವಜಲದಲ್ಲಿ ಕರ್ನಾಟಕದ ಪಾಲನ್ನು 14.75 ಟಿಎಂಸಿ ಅಡಿಗಳಷ್ಟು ಹೆಚ್ಚಿಸಿದೆ ಮತ್ತು ಇದೇ ವೇಳೆ ರಾಜ್ಯದಿಂದ ತಮಿಳುನಾಡಿಗೆ ಹಂಚಿಕೆಯಾಗಬೇಕಾದ ನೀರಿನ ಪ್ರಮಾಣದಲ್ಲಿ 14.75 ಟಿಎಂಸಿ ಅಡಿ ಕಡಿತಗೊಳಿಸಿದೆ. ಕಾವೇರಿ ಜಲವಿವಾದ ನ್ಯಾಯಮಂಡಳಿ(ಸಿಡಬ್ಲೂಡಿಟಿ) ಯು ಫೆ.2007ರ ತನ್ನ ಅಂತಿಮ ತೀರ್ಪಿನಲ್ಲಿ ತಮಿಳುನಾಡಿಗೆ 419 ಟಿಎಂಸಿ ಅಡಿ ಕಾವೇರಿ ನೀರನ್ನು ನಿಗದಿಗೊಳಿಸಿದ್ದು, ಅದನ್ನು ಸರ್ವೋಚ್ಚ ನ್ಯಾಯಾಲಯವು 404.25 ಟಿಎಂಸಿ ಅಡಿಗಳಿಗೆ ತಗ್ಗಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರು ಎದುರಿಸುತ್ತಿರುವ ಕುಡಿಯುವ ನೀರಿನ ಕೊರತೆಯನ್ನು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿರುವ ಮುಖ್ಯ ನ್ಯಾಯಮೂರ್ತಿ ದೀಪಕ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಅಮಿತಾವ್ ರಾಯ್ ಹಾಗೂ ಎ.ಎಂ.ಖನ್ವಿಲ್ಕರ್ ಅವರ ಪೀಠವು ನಗರವು ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿಲ್ಲದಿದ್ದರೂ ಅದಕ್ಕೆ 4.57 ಟಿಎಂಸಿ ಅಡಿ ನೀರನ್ನು ಮೀಸಲಿರಿಸುವ ಮೂಲಕ ತನ್ನ ಉದಾರತೆಯನ್ನು ಮೆರೆದಿದೆ.

ಸರ್ವೋಚ್ಚ ನ್ಯಾಯಾಲಯದ ತೀರ್ಪು ಕರ್ನಾಟಕಕ್ಕೆ ಖುಷಿಯನ್ನು ನೀಡಿದ್ದರೆ, ಇದೇ ವೇಲೆ ತಮಿಳುನಾಡಿನ ರಾಜಕೀಯ ಪಕ್ಷಗಳು ತೀರ್ಪಿನ ಕುರಿತು ತೀವ್ರ ಆಘಾತವನ್ನು ವ್ಯಕ್ತಪಡಿಸಿವೆ.

ಉಳಿದಂತೆ ಕಾವೇರಿ ಜಲವಿವಾದ ನ್ಯಾಯಮಂಡಳಿಯ ತೀರ್ಪನ್ನು ಎತ್ತಿ ಹಿಡಿದಿರುವ ಸರ್ವೋಚ್ಚ ನ್ಯಾಯಾಲಯವು, ಮುಂದಿನ 15 ವರ್ಷಗಳವರೆಗೆ ನದಿನೀರು ಹಂಚಿಕೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.

ಸರ್ವೋಚ್ಚ ನ್ಯಾಯಾಲಯವು ಕರ್ನಾಟಕಕ್ಕೆ 270 ಟಿಎಂಸಿ ಅಡಿ ನೀರನ್ನು ನಿಗದಿ ಮಾಡಿದ್ದು, ಇದು ನ್ಯಾಯಮಂಡಳಿಯು ಹಂಚಿಕೆ ಮಾಡಿದ್ದ ಪ್ರಮಾಣಕ್ಕಿಂತ 14.75 ಟಿಎಂಸಿ ಅಡಿಗಳಷ್ಟು ಹೆಚ್ಚಾಗಿದೆ. ಕುಡಿಯುವ ನೀರಿಗೆ ಅತ್ಯಂತ ಹೆಚ್ಚಿನ ಆದ್ಯತೆ ಅಗತ್ಯವೆಂದಿರುವ ಪೀಠವು, ಬೆಂಗಳೂರಿಗೆ ಹೆಚ್ಚು ನೀರನ್ನು ನೀಡುವ ಜೊತೆಗೆ ನಗರದ ಕೈಗಾರಿಕಾ ಅಗತ್ಯಗಳಲ್ಲಿ ಏರಿಕೆಯಾಗಿದೆ ಎನ್ನುವುದನ್ನೂ ಗಮನಕ್ಕೆ ತೆಗೆದುಕೊಂಡಿದೆ.

ಕಾವೇರಿ ಜಲವಿವಾದ ನ್ಯಾಯಮಂಡಳಿಯು ಪುದುಚೇರಿ(30 ಟಿಎಂಸಿ ಅಡಿ) ಮತ್ತು ಕೇರಳ(7 ಟಿಎಂಸಿ ಅಡಿ)ಗಳಿಗೆ ಹಂಚಿಕೆ ಮಾಡಿದ್ದ ನೀರಿನ ಪ್ರಮಾಣದಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ.

ಸರ್ವೋಚ್ಚ ನ್ಯಾಯಾಲಯವು ಕಾವೇರಿ ನದಿಪಾತ್ರದ ಕೆಳಗೆ ಲಭ್ಯವಿರುವ ಒಟ್ಟು 20 ಟಿಎಂಸಿ ಅಡಿ ಅಂತರ್ಜಲದಿಂದ 10 ಟಿಎಂಸಿ ಅಡಿ ನೀರನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳಲು ತಮಿಳುನಾಡಿಗೆ ಅನುಮತಿಯನ್ನು ನೀಡಿದೆ. ಇದರಿಂದಾಗಿ ತಮಿಳುನಾಡಿನ ಪಾಲು ಕೇವಲ 4.75 ಟಿಎಂಸಿ ಅಡಿಗಳಷ್ಟು ಕಡಿಮೆಯಾಗಲಿದೆ.

ಇನ್ನು ಮುಂದೆ ಪ್ರತಿವರ್ಷ ಅಂತರರಾಜ್ಯ ಬಿಳಿಗುಂಡ್ಲು ಜಲಾಶಯದಿಂದ ತಮಿಳುನಾಡಿಗೆ ಈಗಿನ 192 ಟಿಎಂಸಿ ಅಡಿಗೆ ಬದಲಾಗಿ 177.25 ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯವು ಕರ್ನಾಟಕಕ್ಕೆ ನಿರ್ದೇಶ ನೀಡಿದೆ.

ಈ ಕಿರು ಬದಲಾವಣೆಗಳೊಂದಿಗೆ, ಕಾವೇರಿ ಜಲವಿವಾದ ನ್ಯಾಯಮಂಡಳಿಯು 2007ರಲ್ಲಿ ತನ್ನ ಅಂತಿಮ ತೀರ್ಪನ್ನು ನೀಡಲು ಅನುಸರಿಸಿದ್ದ ವಿಧಾನವನ್ನು ತಾನು ಸಂಪೂರ್ಣವಾಗಿ ಅನುಮೋದಿಸುತ್ತಿದ್ದೇನೆ ಎಂದು ಪೀಠವು ತನ್ನ ಸರ್ವಾನುಮತದ ತೀರ್ಪಿನಲ್ಲಿ ಹೇಳಿತು.

ಕರ್ನಾಟಕಕ್ಕೆ ಖುಷಿ ನೀಡಿದ ತೀರ್ಪು

ತೀರ್ಪು ಹೊರಬೀಳುತ್ತಿದ್ದಂತೆ ವಿಧಾನಸಭೆಯಲ್ಲಿ ಸಂಭ್ರಮದಿಂದ ಬೀಗುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತು. ಕಾಕತಾಳೀಯವೆಂಬಂತೆ ಶುಕ್ರವಾರವೇ ರಾಜ್ಯದ ಮುಂಗಡಪತ್ರ ಮಂಡನೆಯಾಗಿದೆ.

ತೀರ್ಪಿಗೆ ಗೌರವ

ತೀರ್ಪು ಹೊರಬೀಳುತ್ತಿದ್ದಂತೆ ತಮಿಳುನಾಡು ಪರ ವಕೀಲ ಎ.ನವನೀತಕೃಷ್ಣನ್ ಅವರು, ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ತಾನು ಗೌರವಿಸುತ್ತೇನೆ, ಆದರೆ ತನ್ನ ರಾಜ್ಯಕ್ಕೆ ಹಂಚಿಕೆ ಮಾಡಿರುವ ನೀರಿನ ಪ್ರಮಾಣ ಅಗತ್ಯಕ್ಕೆ ತಕ್ಕಂತಿಲ್ಲ ಎಂದು ಹೇಳಿದರು.

ವಿವಾದದ ಹುಟ್ಟು

 2007,ಫೆಬ್ರುವರಿಯಲ್ಲಿ ತನ್ನ ಅಂತಿಮ ತೀರ್ಪನ್ನು ಪ್ರಕಟಿಸಿದ್ದ ಕಾವೇರಿ ಜಲವಿವಾದ ನ್ಯಾಯಮಂಡಳಿಯು, ತಮಿಳುನಾಡಿಗೆ 419 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿತ್ತು ಮತ್ತು ಕರ್ನಾಟಕವು ಪ್ರತಿವರ್ಷ 10 ಮಾಸಿಕ ಕಂತುಗಳಲ್ಲಿ 192 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಬಿಡುಗಡೆಗೊಳಿಸಬೇಕು ಎಂದು ಆದೇಶಿಸಿತ್ತು. 2007ರ ಆದೇಶಕ್ಕೆ ಮುನ್ನ ಕಾವೇರಿ ಜಲಾನಯನ ಪ್ರದೇಶದಲ್ಲಿ ಲಭ್ಯ ಒಟ್ಟು ನೀರಿನ ಪೈಕಿ ಸುಮಾರು ನಾಲ್ಕನೇ ಮೂರು ಪಾಲು(562 ಟಿಎಂಸಿ ಅಡಿ) ನೀರಿಗೆ ತಮಿಳುನಾಡು ಬೇಡಿಕೆ ಮಂಡಿಸಿದ್ದರೆ, ಕರ್ನಾಟಕವು ಸುಮಾರು ಮೂರನೇ ಎರಡು ಪಾಲು(465 ಟಿಎಂಸಿ ಅಡಿ) ನೀರನ್ನು ತನಗೆ ಹಂಚಿಕೆ ಮಾಡುವಂತೆ ಆಗ್ರಹಿಸಿತ್ತು.

ನ್ಯಾಯಮಂಡಳಿಯ ಆದೇಶದಿಂದ ಅಸಮಾಧಾನಗೊಂಡಿದ್ದ ಕರ್ನಾಟಕ ಮತ್ತು ತಮಿಳುನಾಡು ಅದನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಗಳನ್ನು ಸಲ್ಲಿಸಿದ್ದವು. ಈ ಪೈಕಿ ಮೊದಲ ಅರ್ಜಿ ಕರ್ನಾಟಕದಿಂದ ಸಲ್ಲಿಕೆಯಾಗಿತ್ತು.

ತಮಿಳುನಾಡು, ಕರ್ನಾಟಕ ಮತ್ತು ಕೇರಳ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷದ ಸೆ.20ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ಅದಕ್ಕೂ ಮುನ್ನ 2016,ಆಗಸ್ಟ್‌ನಲ್ಲಿ ಕರ್ನಾಟಕದ ಜಲಾಶಯಗಳಿಂದ ತನಗೆ ಬಿಡುಗಡೆ ಮಾಡಲಾಗಿರುವ ಕಾವೇರಿ ನೀರಿನಲ್ಲಿ 50.0052 ಟಿಎಂಸಿ ಅಡಿಗಳಷ್ಟು ಕೊರತೆಯಿದೆ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದ ತಮಿಳುನಾಡು, ಈ ವಿಷಯದಲ್ಲಿ ಅದರ ಮಧ್ಯಪ್ರವೇಶವನ್ನು ಕೋರಿತ್ತು.

ನದಿನೀರು ಯಾವುದೇ ರಾಜ್ಯದ ಸೊತ್ತಲ್ಲ

1892 ಮತ್ತು 1924ರಲ್ಲಿ ಮೈಸೂರು ಮಹಾರಾಜರು ಮತ್ತು ಮದ್ರಾಸ್ ಪ್ರೆಸಿಡೆನ್ಸಿ ನಡುವೆ ಮಾಡಿಕೊಳ್ಳಲಾಗಿದ್ದ ಸಂವಿಧಾನ ಪೂರ್ವ ಒಪ್ಪಂದಗಳನ್ನು ನೆಚ್ಚಿಕೊಳ್ಳುವಂತಿಲ್ಲ ಎಂಬ ಕರ್ನಾಟಕದ ವಾದವನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿತು.

ಕರ್ನಾಟಕದ ಮನವಿಯನ್ನು ‘ವಿವೇಕಯುತವಲ್ಲ’ ಎಂದು ಬಣ್ಣಿಸಿದ ಪೀಠವು, ‘‘ನ್ಯಾಯಮಂಡಲಿಯು ಸರಿಯಾದ ಧೋರಣೆಯನ್ನೇ ತಳೆದಿತ್ತು ಎನ್ನುವುದು ನಮ್ಮ ಅಭಿಪ್ರಾಯವಾಗಿದೆ, ನೀರಿನಂತಹ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಯಾವುದೇ ಒಂದು ರಾಜ್ಯವು ತನ್ನ ಒಡೆತನವನ್ನು ಸಾಧಿಸುವಂತಿಲ್ಲ’’ ಎಂದು ಹೇಳಿತು.

ಆದರೆ ಬೆಂಗಳೂರಿನ ನೀರಿನ ಸಮಸ್ಯೆಯನ್ನು ಗಮನಕ್ಕೆ ತೆಗೆದುಕೊಳ್ಳಬೇಕೆಂಬ ಕರ್ನಾಟಕದ ಮನವಿಯನ್ನು ಅದು ಪುರಸ್ಕರಿಸಿತು.

ಎಲ್ಲ ರಾಜ್ಯಗಳು ಚಾಚೂತಪ್ಪದೆ ತೀರ್ಪನ್ನು ಪಾಲಿಸಬೇಕು ಎಂದು ಸೂಚಿಸಿದ ಸರ್ವೋಚ್ಚ ನ್ಯಾಯಾಲಯವು, 1956ರ ಅಂತರರಾಜ್ಯ ಜಲವಿವಾದಗಳ ಕಾಯ್ದೆಯ ಕಲಂ 6ಎ ಅಡಿ ಈ ಬಗ್ಗೆ ಉಸ್ತುವಾರಿ ವಹಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶ ನೀಡಿತು.

1802ರಷ್ಟು ಹಳೆಯದಾದ ಕಾವೇರಿ ವಿವಾದದಲ್ಲಿ ಸರ್ವೋಚ್ಚ ನ್ಯಾಯಾಲಯವು 28 ದಿನಗಳ ಮ್ಯಾರಥಾನ್ ವಿಚಾರಣೆಯನ್ನು ನಡೆಸಿತ್ತು. 1956ರ ಕಾಯ್ದೆಯಡಿ ಇದು ಇಂತಹ ಮೊದಲ ತೀರ್ಪಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News