‘ಸರ್ವೇಜನ ಸುಖಿನೋ ಭವಂತು- ಸರ್ವವ್ಯಾಪಿ ಬಜೆಟ್’

Update: 2018-02-16 14:43 GMT

ಬೆಂಗಳೂರು, ಫೆ.16: ರಾಜ್ಯ ವಿಧಾನಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ, ನೀರಾವರಿ, ಶಿಕ್ಷಣ, ಕಂದಾಯ, ಬೆಂಗಳೂರು ಅಭಿವೃದ್ಧಿ, ಮಹಿಳಾ ಸಬಲೀಕರಣ, ಕಾರ್ಮಿಕರು, ಮಧ್ಯಮ ವರ್ಗದವರು ಸೇರಿದಂತೆ ಎಲ್ಲ ವರ್ಗದವರ ಓಲೆಕೈಗಾಗಿ ಬಜೆಟ್‌ನಲ್ಲಿ ಸಾಕಷ್ಟು ಕಸರತ್ತು ನಡೆಸಿದ್ದಾರೆ.

ಮುಖ್ಯಮಂತ್ರಿಯಾಗಿ 6ನೆ ಬಜೆಟ್, ಹಣಕಾಸು ಸಚಿವರಾಗಿ ದಾಖಲೆಯ 13ನೆ ಬಜೆಟ್ ಮಂಡಿಸಿದ ಸಿದ್ದರಾಮಯ್ಯ, ಒಟ್ಟು 2,09,181 ಕೋಟಿ ರೂ.ಗಳ ಬೃಹತ್ ಗಾತ್ರದ ಬಜೆಟ್ ಅನ್ನು ಮಂಡಿಸಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಆಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದ್ದು, ಈ ಹಿಂದೆ ಸಹಕಾರಿ ಸಂಘಗಳಲ್ಲಿನ 50 ಸಾವಿರ ರೂ.ವರೆಗಿನ ಸಾಲ ಮನ್ನಾಗಷ್ಟೇ ಸರಕಾರ ಸೀಮಿತವಾಗಿದೆ. ಆದರೆ, ಪ್ರಾಥಮಿಕ ಸಹಕಾರ ಸಂಘಗಳಲ್ಲಿ ಸಾಲ ಪಡೆದ ರೈತರು ನಿಧನರಾದಲ್ಲಿ ಅವರ 1 ಲಕ್ಷ ರೂ.ಗಳವರೆಗಿನ ಸಾಲ ಮನ್ನಾ ಮಾಡುವ ಯೋಜನೆಯನ್ನು ಘೋಷಿಸಲಾಗಿದೆ.

ಖುಷ್ಕಿ ಭೂಮಿಯ ರೈತರ ಸಂಕಷ್ಟಗಳನ್ನು ನೇರವಾಗಿ ಪರಿಹರಿಸಲು ‘ರೈತ ಬೆಳಕು’ ಎಂಬ ವಿಶಿಷ್ಟ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದ್ದು, ಈ ಯೋಜನೆಗೆ ಪ್ರತಿವರ್ಷ 3500 ಕೋಟಿ ರೂ.ಖರ್ಚಾಗಲಿದೆ. ಅಂದಾಜು 70 ಲಕ್ಷಕ್ಕೂ ಹೆಚ್ಚು ರೈತರಿಗೆ ಪ್ರಯೋಜನವಾಗಲಿದೆ.

ರಾಜ್ಯದ ಎಲ್ಲ ಜನತೆಗೆ ಪ್ರಥಮ ಹಾಗೂ ನಿರ್ದಿಷ್ಟ ದ್ವಿತೀಯ ಮತ್ತು ತೃತೀಯ ಹಂತದ ಚಿಕಿತ್ಸೆ ದೊರಕುವಂತೆ ‘ಆರೋಗ್ಯ ಕರ್ನಾಟಕ ಯೋಜನೆ’ಯನ್ನು ಇದೇ ಫೆಬ್ರವರಿ ತಿಂಗಳಲ್ಲಿ ಪ್ರಾರಂಭಿಸುವುದಾಗಿ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ಮೀನುಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳಲು ಮಹಿಳಾ ಮೀನುಗಾರರಿಗೆ 50 ಸಾವಿರ ರೂ.ಗಳವರೆಗೆ ಶೇ.2ರ ಬಡ್ಡಿದರದಲ್ಲಿ ವಾಣಿಜ್ಯ ಗ್ರಾಮೀಣ ಪ್ರಾದೇಶಿಕ ಬ್ಯಾಂಕುಗಳಿಂದ ನೀಡುತ್ತಿರುವ ಸಾಲವನ್ನು 2018-19ನೆ ಸಾಲಿನಿಂದ ಶೂನ್ಯ ಬಡ್ಡಿ ದರದಲ್ಲಿ ನೀಡಲು ಉದ್ದೇಶಿಸಲಾಗಿದೆ.

ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ 25 ಸಾವಿರಕ್ಕೂ ಹೆಚ್ಚು ಹಮಾಲರು ಕಾರ್ಯ ನಿರ್ವಹಿಸುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ವಸತಿ ರಹಿತ 1000 ಹಮಾಲರನ್ನು ಗುರುತಿಸಿ ಸರಕಾರದ ವಿವಿಧ ವಸತಿ ಯೋಜನೆಗಳಡಿಯಲ್ಲಿ ಆದ್ಯತೆ ಮೇಲೆ ವಸತಿ ಸೌಲಭ್ಯವನ್ನು ಕಲ್ಪಿಸಲು ಉದ್ದೇಶಿಸಲಾಗಿದೆ.

ಪಶ್ಚಿಮವಾಹಿನಿ ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಹರೇಕಳ ಎಂಬಲ್ಲಿ ಕುಡಿಯುವ ನೀರು ಹಾಗೂ ನೀರಾವರಿ ಸೌಲಭ್ಯ ಕಲ್ಪಿಸಲು ನೇತ್ರಾವತಿ ನದಿಗೆ ಉಪ್ಪು ನೀರು ತಡೆಯುವ ಕಿಂಡಿ ಅಣೆಕಟ್ಟನ್ನು 174 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುವುದಾಗಿ ಘೋಷಿಸಲಾಗಿದೆ.

ವಿದ್ಯಾರ್ಥಿನಿಯರಿಗೆ ಶುಲ್ಕ ವಿನಾಯಿತಿ

ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯುವುದನ್ನು ಉತ್ತೇಜಿಸಲು ಎಲ್ಲ ಸರಕಾರಿ ಕಾಲೇಜುಗಳಲ್ಲಿ ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪಡೆಯುವ ಎಲ್ಲ ವಿದ್ಯಾರ್ಥಿನಿಯರಿಗೆ ಪೂರ್ಣ ಶುಲ್ಕ ವಿನಾಯಿತಿ ನೀಡಲು ಉದ್ದೇಶಿಸಲಾಗಿದ್ದು, ಇದರಿಂದ 3.7 ಲಕ್ಷ ವಿದ್ಯಾರ್ಥಿನಿಯರು ಪ್ರಯೋಜನ ಪಡೆಯಲಿದ್ದಾರೆ. ಹಾಗೆಯೇ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ತಿಳಿಸಲಾಗಿದೆ.

ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ನಿಯಂತ್ರಿಸಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಖನಿಜ ನಿಧಿಯ ಅನುದಾನದಡಿಯಲ್ಲಿ 96 ಕೋಟಿ ರೂ.ಗಳ ವೆಚ್ಚದಲ್ಲಿ 42 ನಿರಂತರ ಪರಿವೇಷ್ಟಕ ವಾಯುಗುಣಮಟ್ಟ ಮಾಪನ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

ನಗರ ಪ್ರದೇಶಗಳಲ್ಲಿ ಹೊಸದಾಗಿ 250 ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಲು 17.50 ಕೋಟಿ ರೂ., ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವ ಪ್ರದೇಶಗಳಲ್ಲಿ ಅವರ ಮಕ್ಕಳ ಪಾಲನೆ ಮಾಡಲು 100 ಸಂಚಾರಿ ಅಂಗನವಾಡಿ ಕೇಂದ್ರ, ಶಿಶುಪಾಲನಾ ಕೇಂದ್ರಗಳ ಸ್ಥಾಪನೆಗೆ 10 ಕೋಟಿ ರೂ.ಒದಗಿಸಲಾಗಿದೆ.

ಸೋಲಿಗ, ಜೇನುಕುರುಬ, ಕಾಡು ಕುರುಬ, ಇರುಳಿಗ, ಕೋರಗ, ಎರವ, ಹಸಲರು, ಹಕ್ಕಿಪಿಕ್ಕಿ, ಸಿದ್ಧಿ ಇತ್ಯಾದಿ ಆದಿವಾಸಿ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ 300 ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ. ವಿದ್ಯಾಸಿರಿ ಯೋಜನೆಯಡಿ 2018-19ನೆ ಸಾಲಿನಿಂದ ಫಲಾನುಭವಿಗಳ ಸಂಖ್ಯೆಯನ್ನು 1 ಲಕ್ಷ ವಿದ್ಯಾರ್ಥಿಗಳಿಗೆ ಹೆಚ್ಚಳ, ಹಿಂದುಳಿದ ವರ್ಗಗಳು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಹಾಲಿ ಇರುವ ಕೆನೆಪದರ ಆದಾಯ ಮಿತಿಯನ್ನು 6 ರಿಂದ 8 ಲಕ್ಷ ರೂ.ಗಳಿಗೆ ಹೆಚ್ಚಳ.

ಸವಿತಾ ಸಮಾಜ, ತಿಗಳ, ಮಡಿವಾಳ ಮತ್ತು ಕುಂಬಾರರ ಆರ್ಥಿಕಾಭಿವೃದ್ಧಿಗಾಗಿ 100 ಕೋಟಿ ರೂ.ಅನುದಾನ, ಅತಿ ಹಿಂದುಳಿದ ಬುಡಬುಡಕೆ, ಗೊಲ್ಲ, ಹೆಳವ, ಗೊಂದಳಿ, ಜೋಗಿ, ಶಿಕ್ಕಲಿಗರ್, ಪಿಚಗುಂಟಲ, ದೊಂಬಿದಾಸ ಇತ್ಯಾದಿ ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳ ಸಮಗ್ರ ಅಭಿವೃದ್ಧಿಗೆ 100 ಕೋಟಿ ರೂ. ನಿಗದಿ ಮಾಡಲಾಗಿದೆ.

ಕ್ರೈಸ್ತ ಸಮುದಾಯ ಅಭಿವೃದ್ಧಿ ಹಾಗೂ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 200 ಕೋಟಿ ರೂ., ಜೈನ ಮತ್ತು ಸಿಖ್ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ 80 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು.

ನದಾಫ್/ಪಿಂಜಾರ್ ಸಮುದಾಯದ ರಾಜ್ಯಮಟ್ಟದ ಸಂಘಕ್ಕೆ 2 ಕೋಟಿ ರೂ., ದಿ ಬ್ಯಾರಿ ವೆಲ್‌ಫೇರ್ ಅಸೋಸಿಯೇಷನ್‌ಗೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ 2 ಕೋಟಿರೂ.ಗಳ ಸಹಾಯ ಧನ. ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯವನ್ನು ಒದಗಿಸಲು 800 ಕೋಟಿ ರೂ.ಅನುದಾನ.

ಮುಂದಿನ ಐದು ವರ್ಷಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 20 ಲಕ್ಷ ಮನೆಗಳ ನಿರ್ಮಾಣ, ಪ್ರಸ್ತುತ ಬೆಂಗಳೂರು ನಗರ ಪ್ರದೇಶಕ್ಕೆ ಜಾರಿಗೆ ತರಲಾದ ಬಹುಮಹಡಿ ಕಟ್ಟಡ ನಿರ್ಮಾಣದ ಯೋಜನೆಯನ್ನು ರಾಜ್ಯದ ಎಲ್ಲ ನಗರ ಪ್ರದೇಶಗಳಿಗೂ ವಿಸ್ತರಿಸಿ ‘ಮುಖ್ಯಮಂತ್ರಿಗಳ ನಗರ ವಸತಿ ಯೋಜನೆ’ ಜಾರಿ ಮಾಡುವುದಾಗಿ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

‘ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ’ಯಡಿಯಲ್ಲಿ ಅಂದಾಜು 30 ಲಕ್ಷ ಫಲಾನುಭವಿಗಳಿಗೆ 1350 ಕೋಟಿ ರೂ.ಗಳ ವೆಚ್ಚದಲ್ಲಿ ಉಚಿತ ಅನಿಲ ಸಂಪರ್ಕ, ಎರಡು ಬರ್ನರ್ ಉಳ್ಳ ಗ್ಯಾಸ್ ಸ್ಟೌವ್ ಮತ್ತು ಎರಡು ರೀಫಿಲ್‌ಗಳನ್ನು ನೀಡಲಾಗುವುದು.

ಮಲೆನಾಡು ಅಭಿವೃದ್ಧಿ ಮಂಡಳಿಗೆ 70 ಕೋಟಿ ರೂ., ಬಯಲು ಸೀಮೆ ಅಭಿವೃದ್ಧಿ ಮಂಡಳಿಗೆ 55 ಕೋಟಿ ರೂ. ಹಾಗೂ ಕರಾವಳಿ ಪ್ರದೇಶಗಳ ಅಭಿವೃದ್ಧಿ ಮಂಡಳಿಗಾಗಿ 25 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಒದಗಿಸಲಾಗಿದೆ.

ರಾಜ್ಯ ಲೋಕಸೇವಾ ಆಯೋಗಕ್ಕೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಸಲ್ಲಿಸುವ ಅರ್ಜಿಗಳಿಗೆ ಈಗಾಗಲೆ ಶುಲ್ಕ ವಿನಾಯಿತಿ ನೀಡಿದಂತೆ, ಮಹಿಳೆಯರು ಹಾಗೂ ವಿಕಲಚೇತನ ಅರ್ಜಿದಾರರಿಗೂ ಅರ್ಜಿ ಶುಲ್ಕ ವಿನಾಯಿತಿ ಸೌಲಭ್ಯ ವಿಸ್ತರಣೆ.

163 ಪುಟ, 4 ಗಂಟೆ 10 ನಿಮಿಷ

ಮುಖ್ಯಮಂತ್ರಿ ಸಿದ್ದರಾಮಯ್ಯ 163 ಪುಟಗಳ ಬಜೆಟ್ ಅನ್ನು ಸತತ 4 ಗಂಟೆ 10 ನಿಮಿಷಗಳ ಕಾಲ ನಿರರ್ಗಳವಾಗಿ ಓದಿದರು. ಬೆಳಗ್ಗೆ 11.35ಕ್ಕೆ ಬಜೆಟ್ ಮಂಡನೆ ಆರಂಭಿಸಿ, ಮಧ್ಯಾಹ್ನ 3.45ಕ್ಕೆ ಮುಗಿಸಿದರು. ಒಮ್ಮೆಯೂ ಕೂರದೆ, ವಿಶ್ರಾಂತಿ ಪಡೆಯದೆ, ಬಜೆಟ್ ಮಂಡನೆ ಮುಂದುವರೆಸಿದರು. ಈ ಅವಧಿಯಲ್ಲಿ ಐದಾರು ಬಾರಿ ನೀರು ಕುಡಿದರು. ಬಜೆಟ್ ಮುಗಿದ ಬಳಿಕ ಸದನದಲ್ಲಿ ಸಚಿವರು, ಶಾಸಕರು ಅವರಿಗೆ ಅಭಿನಂದನೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News