ಏಶ್ಯದ ದೇಶಗಳನ್ನು ‘ಸತಾಯಿಸಲು’ ಚೀನಾಕ್ಕೆ ಅಮೆರಿಕ ಅವಕಾಶ ನೀಡದು: ಟ್ರಂಪ್ ಆಡಳಿತ

Update: 2018-02-16 17:24 GMT

ವಾಶಿಂಗ್ಟನ್, ಫೆ. 16: ಏಶ್ಯದ ದೇಶಗಳನ್ನು ‘ಸತಾಯಿಸಲು’ ಅಥವಾ ‘ಬಲವಂತಪಡಿಸಲು’ ಚೀನಾಕ್ಕೆ ಅಮೆರಿಕ ಅವಕಾಶ ನೀಡುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಚೀನಾವು ಈ ವಲಯದಲ್ಲಿ ತನ್ನ ತೋಳ್ಬಲವನ್ನು ಪ್ರದರ್ಶಿಸಲು ಮುಂದಾಗುತ್ತಿರುವ ನಡುವೆಯೇ ಅಮೆರಿಕದಿಂದ ಈ ಎಚ್ಚರಿಕೆ ಹೊರಟಿದೆ.

 ಅದೇ ವೇಳೆ, ಅಮೆರಿಕ ಚೀನಾದೊಂದಿಗೆ ‘ಫಲಪ್ರದ’ ಸಂಬಂಧವನ್ನು ಹೊಂದಲು ಬಯಸುತ್ತದೆ ಹಾಗೂ ಉಭಯ ದೇಶಗಳು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಗಳನ್ನು ನಡೆಸಬೇಕು ಎನ್ನುವುದು ಟ್ರಂಪ್ ಆಡಳಿತದ ನಿಲುವಾಗಿದೆ ಎಂದು ಪೂರ್ವ ಏಶ್ಯ ಮತ್ತು ಪೆಸಿಫಿಕ್ ವ್ಯವಹಾರಗಳ ಉಸ್ತುವಾರಿ ಸಹಾಯಕ ಕಾರ್ಯದರ್ಶಿ ಸೂಸಾನ್ ತಾರ್ನ್‌ಟನ್ ಹೇಳಿದರು.

ಅವರು ಸೆನೆಟ್ ವಿದೇಶ ಬಾಂಧವ್ಯಗಳ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ವಿವರಣೆ ನೀಡುತ್ತಿದ್ದರು.

‘‘ಆದರೆ, ಏಶ್ಯದಲ್ಲಿ ಅಮೆರಿಕವನ್ನು ಅಸ್ಥಿರಗೊಳಿಸುವ ಚೀನಾ ಪ್ರಯತ್ನಗಳನ್ನೂ ನಾವು ಸಹಿಸುವುದಿಲ್ಲ ಹಾಗೂ ಈ ವಲಯದ ದೇಶಗಳ ವಿರುದ್ಧ ಬಲಪ್ರಯೋಗ ನಡೆಸಲೂ ನಾವು ಬಿಡುವುದಿಲ್ಲ. ಈ ಬಗ್ಗೆಯೂ ನಮ್ಮ ನಿಲುವು ಸ್ಪಷ್ಟವಾಗಿದೆ’’ ಎಂದರು.

‘‘ಚೀನಾದ ಏಳಿಗೆಗೆ ಕಾರಣವಾದ ಅಂತಾರಾಷ್ಟ್ರೀಯ ವ್ಯವಸ್ಥೆ ಮುಂದುವರಿಯಬೇಕಾದರೆ, ಅದರ ನಿಯಮಗಳು ಮತ್ತು ಮಾನದಂಡಗಳನ್ನು ಚೀನಾ ಅನುಸರಿಸಬೇಕು ಹಾಗೂ ದೇಶಗಳನ್ನು ಸತಾಯಿಸಬಾರದು ಹಾಗೂ ಬೆದರಿಸಬಾರದು. ಬದಲಿಗೆ, ಅವುಗಳನ್ನು ಸಮಾನ ಭಾಗೀದಾರರು ಎನ್ನುವಂತೆ ಪರಿಗಣಿಸಬೇಕು’’ ಎಂದು ತಾರ್ನ್‌ಟನ್ ನುಡಿದರು.

ಟ್ರಂಪ್ ಆಡಳಿತವು ಟ್ರಂಪ್ ನಾಯಕತ್ವದಡಿಯಲ್ಲಿ ಭಾರತ-ಪೆಸಿಫಿಕ್ ತಂತ್ರಗಾರಿಕೆಯನ್ವಯ ಈ ವಲಯದಾದ್ಯಂತ ಭಾಗೀದಾರಿಕೆಗಳನ್ನು ವಿಸ್ತರಿಸುವ ಹಾಗೂ ಭದ್ರಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.

ಚೀನಾವು ಸಂಪನ್ಮೂಲ ಸಮೃದ್ಧ ದಕ್ಷಿಣ ಚೀನಾ ಸಮುದ್ರದಲ್ಲಿರುವ ದ್ವೀಪಗಳ ಒಡೆತನಕ್ಕೆ ಸಂಬಂಧಿಸಿದಂತೆ ಹಲವಾರು ಆಗ್ನೇಯ ಏಶ್ಯ ದೇಶಗಳೊಂದಿಗೆ ವಿವಾದ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News