ರಾಜ್ಯ ಬಜೆಟ್-2018: ವಾರ್ತಾಭಾರತಿಯೊಂದಿಗೆ ಗಣ್ಯರ ಬಜೆಟ್ ಪ್ರತಿಕ್ರಿಯೆ

Update: 2018-02-16 18:20 GMT

ಈ ಬಾರಿ ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಅಯವ್ಯಯ ಸರ್ವಜನರ ಏಳಿಗೆಯ ದೃಷ್ಟಿಯಲ್ಲಿದೆ. ವಿಶೇಷವಾಗಿ ಹಿಂದುಳಿದ ವರ್ಗದವರಿಗೆ, ಶೋಷಣೆಗೊಳಗಾದವರ ಬಗ್ಗೆ ಹೆಚ್ಚು ಗಮನ ನೀಡಲಾಗಿದೆ. ಹಾಗೆಯೇ ಬೆಂಗಳೂರು ನಗರವನ್ನು ಅತ್ಯುತ್ತಮವಾಗಿ ರೂಪಿಸಲು ಯೋಜನೆ ಕೈಗೊಂಡಿರುವುದ ಸ್ವಾಗತಾರ್ಹ, ಜಾನುವಾರು, ಕುರಿ ಸಾಗಾಣೆಗೆ ಒತ್ತು ನೀಡಿರುವುದು ಒಳ್ಳೆಯ ಬೆಳವಣಿಗೆ.
 - ಪ್ರೊ.ಕೆ.ಎಸ್.ಭಗವಾನ್,ಸಾಹಿತಿ

ಮೂಲಭೂತವಾಗಿ ಶ್ರೀಸಾಮಾನ್ಯರ ಬದುಕನ್ನು ಉತ್ತಮ ಗೊಳಿಸುವ ಆಶಾಧಾಯಕ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡನೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಅಯವ್ಯಯಕ್ಕೆ ಹೋಲಿಸಿದರೆ ರೈತರು, ಕಾರ್ಮಿಕರು, ದಲಿತರು, ಅಲ್ಪಸಂಖ್ಯಾರು ವಿಶೇಷವಾಗಿ ಮಹಿಳೆಯರಿಗೆ ಹಲವಾರು ಉಪಯುಕ್ತವಾದ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಒಟ್ಟಾರೆ ಗ್ರಾಮೀಣ ಪ್ರಧಾನ, ಕೃಷಿ ಪ್ರಧಾನ, ದುರ್ಬಲವರ್ಗಗಳ ಪ್ರಧಾನವಾದ ಬಜೆಟ್ ಇದಾಗಿದೆ.
-ಪ್ರೊ.ಮಹೇಶ್ ಚಂದ್ರಗುರು, ಪ್ರಾಧ್ಯಾಪಕರು. 

ರಾಜ್ಯ ಕಂಡ ಅಪರೂಪದ ನಾಯಕ ಮುಖ್ಯಮಂತ್ರಿ ಸಿದ್ಧರಾಮಯ್ಯ, 13 ನೇ ಬಜೆಟ್ ಮಂಡನೆ ಮಾಡುತ್ತಿರುವುದು ವಕೀಲರ ಸಮೂಹಕ್ಕೆ ದೊಡ್ಡ ಗೌರವ. ಅವರ ಮುತ್ಸದ್ದಿತನವನ್ನು ಈ ಬಜೆಟ್‍ನಲ್ಲಿ ತೋರಿಸಿದ್ದಾರೆ. ರಾಜ್ಯದಲ್ಲಿ ಎಲ್ಲಾ ವರ್ಗಕ್ಕೂ ನ್ಯಾಯ ದೊರಕಿಸುವ ಬಜೆಟ್. ಮುಂದಿನ ಬಾರಿ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬಂದರೆ ಬಜೆಟ್ ಘೋಷಣೆ ಸಾಕಾರಗೊಳಿಸಲು ನೆರವಾಗಲಿದೆ.
-ಮಂಜುಳ ಮಾನಸ, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ.

ಕೃಷಿಗೆ ಉತ್ತೇಜನಕಾರಿಯಾದ ಬಜೆಟ್ ಅಲ್ಲ. ಇದೊಂದು ಸಾಮಾನ್ಯ ಬಜೆಟ್. ಇದರಲ್ಲಿ ವಿಶೇಷತೆ ಏನೂ ಇಲ್ಲ. ಸಾಮಾನ್ಯವಾಗಿ ಎಲ್ಲಾ ಇಲಾಖೆಗಳಿಗೂ ಅನುದಾನ ನೀಡುವ ಬಜೆಟ್ ಇದಾಗಿದೆ. ರೈತರ ಸಹಕಾರ ಬ್ಯಾಂಕ್‍ಗಳಿನ ಸಾಲ ಮನ್ನಾ ಮಾಡಲಾಗುವುದು ಎಂಬ ನಿರೀಕ್ಷೆ ಹೊಂದಿದ್ದೆವು. ಜೊತೆಗೆ ವಾಣಿಜ್ಯ ಬ್ಯಾಂಕ್‍ಗಳಲ್ಲಿ ರೈತರ ಒಂದು ಲಕ್ಷದ ವರೆಗಿನ ಸಾಲ ಮನ್ನಾ ಮಾಡಬಹುದಿತ್ತು. ಆದರೆ ಅದು ಹುಸಿಯಾಗಿದೆ. ಬೆಂಗಳೂರು ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.  ಕೃಷಿಗೆ ಪೂರಕವಾಗಿ ಉದ್ಯೋಗ ಸೃಷ್ಟಿಸ ಬಹುದಿತ್ತು ಆದರೆ ಅದು ಸಾಧ್ಯವಾಗಿಲ್ಲ. ಸಿರಿಧಾನ್ಯ ಬೆಳೆಗಳಿಗೆ, ನೀರಾವರಿಗೆ, ಮೇಕೆ, ಕುರಿ ಸಾಕಾಣೆಗೆ ಒತ್ತು ನೀಡಲಾಗಿದೆ. ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಅವರ ಪೀಠ ಸ್ಥಾಪನೆಗೆ ಮುಂದಾಗಿರುವುದು ಮತ್ತು ಚಾಮರಾಜನಗರದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡಲು ಮುಂದಾಗಿರುವುದು ಸಮಾಧಾನ ತಂದಿದೆ.
-ಬಡಗಲಪುರ ನಾಗೇಂದ್ರ, ರೈತ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News