ಚುನಾವಣೆ ಬಂದಾಗ ಮಾತ್ರ ಹಿಂದೂವಾಗುವ ರಾಹುಲ್ ಗಾಂಧಿ: ಮುರುಳೀಧರ್ ರಾವ್

Update: 2018-02-16 18:31 GMT

ದಾವಣಗೆರೆ,ಫೆ.16: ರಾಜ್ಯದಲ್ಲಿ ರೈತವಿರೋಧಿ ನೀತಿಗಳಿಂದ ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮುರುಳೀಧರ್ ರಾವ್ ಹೇಳಿದರು.

ಶಾಮನೂರು ಜಯದೇವಪ್ಪ ಕಲ್ಯಾಣ ಮಂಟಪದಲ್ಲಿ ಫೆ. 27ರಂದು ದಾವಣಗೆರೆ ನಗರಕ್ಕೆ ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ದೇಶದಲ್ಲಿಯೇ ಅತೀ ಹೆಚ್ಚು ರೈತರು ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದೇ ಸಿಎಂ ಸಿದ್ದರಾಮಯ್ಯ ಸಾಧನೆಯಾಗಿದೆ. ಸಿಎಂ, ನಾವು ನಂ.1 ಸ್ಥಾನದಲ್ಲಿದ್ದೇವೆ ಎಂದು ನಾಮಫಲಕ ಹಾಕಿಕೊಂಡಿದ್ದಾರೆ. ಆದರೆ, ಅವರು ನಿಜವಾಗಿ ನಂ. 1 ಸ್ಥಾನದಲ್ಲಿರುವುದು ರೈತರ ಆತ್ಮಹತ್ಯೆಯಲ್ಲಿ ಎಂದು ಟೀಕಿಸಿದರು. 

ರೈತ ಆತ್ಮಹತ್ಯೆ ನಿಲ್ಲಬೇಕಾದರೆ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗಬೇಕು. ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಕೃಷಿ ವಲಯ ವೇಗವಾಗಿ ಬೆಳೆಯುತ್ತಿದೆ. ಅಲ್ಲೆಲ್ಲಾ ಕೃಷಿ ಬೆಳವಣಿಗೆ ದರ ಶೇ. 8ರಿಂದ 10ರ ವರೆಗೆ. ಮಧ್ಯ ಪ್ರದೇಶದಲ್ಲಂತೂ ಕೃಷಿ ಬೆಳವಣಿಗೆ ಶೇ.21ರ ವರೆಗೆ ಹೋಗಿದೆ. ಮೂರು ಬಾರಿ ರಾಷ್ಟ್ರಪತಿಗಳಿಂದ ಪ್ರಶಂಸೆ ಸಹ ಪಡೆದುಕೊಂಡಿದೆ. ಆದರೆ, ಕಾಂಗ್ರೆಸ್ ಆಡಳಿತ ಇರುವ ಕರ್ನಾಟಕದಲ್ಲಿ ರೈತರು ಸಾಲು ಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ದೂರಿದರು.

ಚುನಾವಣೆ ಬಂದಾಗ ಮಾತ್ರ ಹಿಂದೂವಾಗುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣೆ ಮುಗಿಯುವವರೆಗೂ ಹಿಂದೂ ದೇವಸ್ಥಾನಗಳಿಗೆ ತೆರಳುತ್ತಾರೆ. ಮೊನ್ನೆಯಷ್ಟೇ ಕರ್ನಾಟಕಕ್ಕೆ ಬಂದಿದ್ದಾಗ ಅವರು ಬಂದು ಹೋಗಿದ್ದು ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಲ್ಲ. ಬದಲಿಗೆ, ಮಂದಿರಗಳಿಗೆ. ಚುನಾವಣಾ ಸಮಯದಲ್ಲಿ ಹಿಂದುವಾಗುವ ರಾಹುಲ್ ಗಾಂಧಿ, ಗುಜರಾತ್‍ನಲ್ಲೂ ಚುನಾವಣೆಗೂ ಮುನ್ನ ಇದೇ ರೀತಿ ದೇವಾಲಯ ಸುತ್ತಿದ್ದರು ಎಂದರು.  

ಸಂಸದರಾದ ಶೋಭಾ ಕರಂದ್ಲಾಜೆ, ಜಿ.ಎಂ. ಸಿದ್ದೇಶ್ವರ್, ಮಾಜಿ ಸಚಿವರಾದ ಸಿ.ಎಂ. ಉದಾಸಿ, ಎಸ್.ಎ. ರವೀಂದ್ರನಾಥ, ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಮಾಡಾಳು ವಿರುಪಾಕ್ಷಪ್ಪ, ಬಿ.ಪಿ. ಹರೀಶ್, ಬಸವರಾಜ ನಾಯ್ಕ, ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಮುಖಂಡರಾದ ಡಾ. ಎ.ಎಚ್. ಶಿವಯೋಗಿಸ್ವಾಮಿ, ನವೀನ್, ಬಿಜೆಪಿ ಸ್ಲಂ ಮೋರ್ಚಾ ರಾಜ್ಯಾಧ್ಯಕ್ಷ ಜಯಪ್ರಕಾಶ್ ಅಂಬರ್‍ಕರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News