ಹನೂರು: ಅದ್ದೂರಿಯಾಗಿ ಜರುಗಿದ ಮಲೆಮಹದೇಶ್ವರನ ಶಿವರಾತ್ರಿ ಮಹಾರಥೋತ್ಸವ

Update: 2018-02-16 18:44 GMT

ಹನೂರು,ಫೆ.16: ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಮಲೆ ಮಹದೇಶ್ವರನ ಶಿವರಾತ್ರಿ ಮಹಾರಥೋತ್ಸವ ಅದ್ದೂರಿಯಾಗಿ ಶುಕ್ರವಾರ ಬೆಳಿಗ್ಗಿನ ಶುಭ ವೇಳೆಯಲ್ಲಿ ಜರುಗಿತು. ಈ ದಿಸೆಯಲ್ಲಿ ಸಾಲೂರು ಮಠದ ಬೃಹನ್ಮಠಾಧ್ಯಕ್ಷ ಗುರುಸ್ವಾಮೀಜಿ ಹಾಗೂ ಬೇಡಗಂಪಣ ಅರ್ಚಕರು ಲಕ್ಷಾಂತರ ಮಂದಿ ಭಕ್ತರ ಸಮ್ಮುಖದಲ್ಲಿ ಚಾಲನೆ ನೀಡಿದರು. 

ಮಹಾರಥೋತ್ಸವದ ಅಂಗವಾಗಿ ತೇರನ್ನು ವಿವಿಧ ಪುಷ್ಪ, ತಳಿರು ತೋರಣ ಹಾಗೂ ಬಣ್ಣಬಣ್ಣದ ಬಟ್ಟೆಗಳಿಂದ ಸಿಂಗಾರಿಸಲಾಗಿತ್ತು. ಬೆಳಿಗ್ಗೆ 10ರಲ್ಲಿ ಸಾಲೂರು ಬೃಹನ್ಮಾಠಾಧ್ಯಕ್ಷ ಗುರುಸ್ವಾಮಿಜೀ ಅವರ ನೇತೃತ್ವದಲ್ಲಿ ಬೇಡಗಂಪಣ ಅರ್ಚಕ ವೃಂದದವರು ದೇಗುಲದ ಗರ್ಭಗುಡಿಯಲ್ಲಿ ಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಬಳಿಕ ಬಿಳಿ ಆನೆ ಉತ್ಸವವನ್ನು ನೆರವೇರಿಸಲಾಯಿತಲ್ಲದೇ ಗರ್ಭಗುಡಿಯ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ನಂತರ ತೇರಿನ ಬಳಿ ತೆರಳಿ ಅರ್ಧಗಂಟೆ ಧಾರ್ಮಿಕ ವಿಧಿವಿಧಾನಗೊಂದಿಗೆ ಪೂಜೆ ಕೈಂಕರ್ಯ ನಡೆಸಿ, ಸ್ವಾಮಿಯ ವಿಗ್ರಹಮೂರ್ತಿಯನ್ನು ತೇರಿನಲ್ಲಿ ಕುಳ್ಳರಿಸಿ ಬೂದು ಕುಂಬಳ ಕಾಯಿಯಿಂದ ದೃಷ್ಠಿ ತೆಗೆಯಲಾಯಿತು. ಬಳಿಕ ಮಹಾಮಂಗಳಾರತಿ ಹಾಗೂ ಬೇಡಗಂಪಣರ 108 ಹೆಣ್ಣು ಮಕ್ಕಳು ಬೆಲ್ಲದ ಆರತಿ ಬೆಳಗಿದ ನಂತರ ಮಹಾ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. 

ಬಳಿಕ ಸೂಕ್ತ ಪೋಲಿಸ್ ಬಂದೋಬಸ್ತ್ ನೊಂದಿಗೆ ದೇಗುಲದ ಮುಖ್ಯದ್ವಾರದ ಆವರಣದಿಂದ ಸತ್ತಿಗೆ, ಸೂರಿಪಾನಿ, ಛತ್ರಿ, ಚಾಮರ, ನಂಧಿಧ್ವಜ ಹಾಗೂ ಮಂಗಳವಾದ್ಯದೊಂದಿಗೆ ದೇಗುಲದ ಸುತ್ತ ಒಂದು ಸುತ್ತು ತೇರನ್ನು ಪ್ರದಕ್ಷಿಣೆ ಹಾಕಲಾಯಿತು. ಇದೇ ವೇಳೆ ಹುಲಿವಾಹನ, ಬಸವವಾಹನ ಹಾಗೂ ರುದ್ರಾಕ್ಷಿವಾಹನದ ಉತ್ಸವವನ್ನು ನೆರವೇರಿಸಲಾಯಿತು. ಈ ವೇಳೆ ಬೇಡಗಂಪಣ ಸಮುದಾಯದ ಹೆಣ್ಣು ಮಕ್ಕಳು ಬೆಲ್ಲದ ಆರತಿ ಹಿಡಿದು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ವೀರಗಾಸೆ ಕುಣಿತ ಭಕ್ತಾಧಿಗಳ ಗಮನ ಸೆಳೆಯಿತು. ರಥೋತ್ಸವದಲ್ಲಿ ನೆರೆದಿದ್ದ ಭಕ್ತರು ತೇರಿಗೆ ಹಣ್ಣು ಧವನ, ಧನ, ಧಾನ್ಯ ಎಸೆದು ನಮಿಸುವುದರ ಮೂಲಕ ಮಾದಪ್ಪನ ಕೃಪೆಗೆ ಪಾತ್ರರಾದರು.  

ಉಘೇ ಮಾದಪ್ಪ ಉಘೇ: ರಥೋತ್ಸವದಲ್ಲಿ ತಮಿಳುನಾಡು ಸೇರಿದಂತೆ ಚಾಮರಾಜನಗರ, ಬೆಂಗಳೂರು, ಮೈಸೂರು, ಮಂಡ್ಯ, ನರಸೀಪುರ, ರಾಮನಗರ, ಕನಕಪುರ, ಚನ್ನಪಟ್ಟಣ, ಮದ್ದೂರು, ದೊಡ್ಡಬಳ್ಳಾಪುರ ಮಳವಳ್ಳಿ, ಮಂಡ್ಯ, ನಂಜನಗೂಡು, ಟಿ. ನರಸೀಪುರ, ಹೆಚ್.ಡಿ.ಕೋಟೆ ಹಾಗೂ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿದ್ದರು. ತೇರನ್ನು ಎಳೆಯುವಾಗ ಭಕ್ತರು ಜೈ ಮಹತ್ ಮಲೆಯಾ, ‘ಉಘೇ ಮಾದಪ್ಪ ಉಘೇ’ ಎಂಬಿತ್ಯಾದಿ ಜಯ ಘೋಷಗಳು ಮುಗಿಲು ಮುಟ್ಟಿದವು. ರಥೋತ್ಸವ ನಡೆದ ಬಳಿಕ ಭಕ್ತರು ತೇರನ್ನು ಸ್ಪರ್ಶಿಸಿ ನಮಸ್ಕರಿಸುವುದರ ಮೂಲಕ ಮಾದಪ್ಪನನ್ನು ನೆನೆದರು.  

ಸೂಕ್ತ ಪೋಲಿಸ್ ಬಂದೋಬಸ್ತ್: ಮಹಾರಥೋತ್ಸವದ ಹಿನ್ನಲೆ ಮ.ಬೆಟ್ಟದ ದೇಗುಲದ ಆವರಣದಲ್ಲಿ ಬೆಳಗ್ಗೆ 9ರಿಂದಲೇ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಕಿಕ್ಕಿರಿದು ತುಂಬಿದ್ದರು. ಈ ಹಿನ್ನಲೆಯಲ್ಲಿ ಪೋಲಿಸ್ ಇಲಾಖೆ ವತಿಯಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು. ತೇರಿನ ಪೂಜಾ ಕೈಂಕರ್ಯದ ವೇಳೆ ಪೋಲಿಸರು ಭಕ್ತರನ್ನು ತೇರು ಸಂಚರಿಸುವ ಮಾರ್ಗದಿಂದ ದೂರ ಸರಿಸುವಂತೆ ಸೂಚನೆ ನೀಡುತ್ತಿದ್ದರು. ರಥೋತ್ಸವ ಪ್ರಾರಂಭವಾದ ಬಳಿಕ ಬದಿಯಲ್ಲಿ ನಿಂತಿದ್ದ ಭಕ್ತರು ತೇರನ್ನು ಎಳೆಯಲು ಜಯಘೋಷಗಳನ್ನು ಕೂಗುತ್ತಾ ನಾ ಮುಂದು ತಾ ಮುಂದು ಎಂದು ಮುಂದೆ ಬಂದಾಗ ಪೋಲಿಸರು ಭಕ್ತರನ್ನು ದೂರ ಸರಿಸಲು ಹರಸಾಹಸ ಪಡಬೇಕಾಯಿತು. 

ರಥೋತ್ಸವದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ, ಸಹಾಯಕ ಕಾರ್ಯದರ್ಶಿ ಬಸವರಾಜು, ಪ್ರಾಧಿಕಾರದ ನೌಕರರು, ದೇಗುಲದ ಅರ್ಚಕ ವೃಂದ ಹಾಗೂ ಸಿಬ್ಬಂದಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News