ಮಂಡ್ಯ: ಕಾವೇರಿ ತೀರ್ಪು ಸ್ವಾಗತಿಸಿ ವಿವಿಧ ಸಂಘಟನೆಗಳಿಂದ ಸಿಹಿ ವಿತರಣೆ

Update: 2018-02-16 18:51 GMT

ಮಂಡ್ಯ, ಫೆ.16: ಕಾವೇರಿ ನದಿ ನೀರು ಹಂಚಿಕೆ ಕುರಿತ ಸುಪ್ರೀಂಕೋರ್ಟ್ ಅಂತಿಮ ತೀರ್ಪಿಗೆ ಜಿಲ್ಲೆಯಲ್ಲಿ ಸ್ವಾಗತ ವ್ಯಕ್ತವಾಗಿದ್ದು, ವಿವಿಧ ಪಕ್ಷ ಮತ್ತು ಸಂಘಟನೆಗಳ ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ.

ಕೋರ್ಟ್‍ನ ತೀರ್ಪನ್ನು ಕುತೂಹಲದಿಂದ ಕಾಯುತ್ತಿದ್ದ ಜಿಲ್ಲೆಯ ಜನತೆ, ಸಂಘಟನೆಗಳ ನೂರಾರು ಕಾರ್ಯಕರ್ತರು ತೀರ್ಪು ಹೊರಬೀಳುತ್ತಿದ್ದಂತೆ ಬೀದಿಗಿಳಿದು ಸಾರ್ವಜನಿಕರಿಗೆ ಸಹಿ ವಿತರಿಸಿ ಸಂಭ್ರಮಿಸಿದರು.

ಮೊದಲಿನಿಂದಲೂ ಕಾವೇರಿ ನೀರು ಹಂಚಿಕೆ ಕುರಿತ ತೀರ್ಪುಗಳು ರಾಜ್ಯದ ಹಿತಕ್ಕೆ ಮಾರಕವಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾವೇರಿ ಹೋರಾಟ ಭುಗಿಲೇಳುತ್ತಿತ್ತು. ಆದರೆ, ಸುಪ್ರೀಂಕೋರ್ಟ್‍ನ ತೀರ್ಪು ಇದಕ್ಕೆ ಬ್ರೇಕ್ ಹಾಕಿದೆ. ಅಂತಿಮ ತೀರ್ಪು ಕೂಡ ರಾಜ್ಯಕ್ಕೆ ವಿರುದ್ಧವಾದರೆ ಜಿಲ್ಲೆಯಲ್ಲಿ ಭುಗಿಲೇಳುವ ಕಾವೇರಿ ಕಿಚ್ಚನ್ನು ಶಮನಗೊಳಿಸಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿತ್ತು. ಆದರೆ, ತೀರ್ಪು ಹೊರ ಬೀಳುತ್ತಿದ್ದಂತೆ ಪೊಲೀಸರು ನಿರಾಳರಾದರು.

ನಗರ ಸೇರಿದಂತೆ ಜಿಲ್ಲೆಯ ತಾಲೂಕು ಮತ್ತು ಪ್ರಮುಖ ಪಟ್ಟಣ, ವಾಣಿಜ್ಯ ಕೇಂದ್ರಗಳಲ್ಲಿ ನಿಯೋಜನೆಗೊಂಡಿದ್ದ ಪೊಲೀಸರ ತಂಡದ ಸಮ್ಮುಖದಲ್ಲೇ ಜಿಲ್ಲೆಯ ಜನತೆ ಕಾವೇರಿ ವಿಜಯೋತ್ಸವ ಆಚರಿಸುವ ಮೂಲಕ ಪರಸ್ಪರ ಸಂತಸ ಹಂಚಿಕೊಂಡರು. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಸಿದ್ದಶೆಟ್ಟಿ, ರಾಜಣ್ಣ, ಆಚಿಜನಪ್ಪ, ಇತರ ಸಂಘಟನೆಗಳ ಕಾರ್ಯಕರ್ತರು ಮಂಡ್ಯದ ಸಂಜಯ ವೃತ್ತದಲ್ಲಿ ನೀರಿನ ಬಾಟಲ್ ವಿತರಿಸಿ ತೀರ್ಪು ಸ್ವಾಗತಿಸಿದರು.

ಜೆಡಿಎಸ್ ಮುಖಂಡ ಕೀಲಾರ ರಾಧಾಕೃಷ್ಣ ಅವರ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಹಾಗೂ ಬಿಜೆಪಿ ನಗರಾಧ್ಯಕ್ಷ ಎಚ್.ಅರ್.ರವೀಂದ್ರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿವಿತರಿಸಿ ಸಂಭ್ರಮಿಸಿದರು.

ಶ್ರೀರಂಗಪಟ್ಟಣ, ಮದ್ದೂರು, ಕೆಆರ್‍ಎಸ್ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸುಪ್ರೀಂಕೋಟ್ ಅಂತಿಮ ತೀರ್ಪನ್ನು ಸ್ವಾಗತಿಸಿ ವಿಜಯೋತ್ಸವ ಆಚರಿಸಿದ ಬಗ್ಗೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News