ಅಭಿವೃದ್ಧಿ ಮುಂದಿಟ್ಟುಕೊಂಡು ಓಟು ಪಡೆಯಲು ಕಾಂಗ್ರೆಸ್‍ಗೆ ಸಾಧ್ಯವಿಲ್ಲ: ಶೋಭಾ ಕರಂದ್ಲಾಜೆ

Update: 2018-02-16 19:06 GMT

ದಾವಣಗೆರೆ,ಫೆ.16: ಫೆ. 27ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪರವರ ಜನ್ಮದಿನದ ಹಿನ್ನಲೆಯಲ್ಲಿ ದಾವಣಗೆರೆಯಲ್ಲಿ ರಾಜ್ಯ ಮಟ್ಟದ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದು, ರಾಜ್ಯಾದ್ಯಂತ ಸುಮಾರು 4 ಲಕ್ಷಕ್ಕೂ ಅಧಿಕ ರೈತರನ್ನು ಆಹ್ವಾನಿಸಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ-ಜಾತಿಗಳ ನಡುವೆ ಹಾಗೂ ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡಿ, ಓಟು ಗಿಟ್ಟಿಸಲು ಹೊರಟಿದ್ದಾರೆ. ಅಭಿವೃದ್ಧಿ ಮುಂದಿಟ್ಟುಕೊಂಡು ಓಟು ಪಡೆಯಲು ಕಾಂಗ್ರೆಸ್‍ಗೆ ಸಾಧ್ಯವಿಲ್ಲ. ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 3 ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಪರಿಹಾರ ಸಿಕ್ಕಿದ್ದು ಕೆಲವರಿಗೆ ಮಾತ್ರ ಎಂದರು. 

ಮೂಗಿಗೆ ತುಪ್ಪ ಸವರುವ ಬಜೆಟ್: ಈ ಬಾರಿ ಮಂಡಿಸಿರುವ ಬಜೆಟ್ ಟೊಳ್ಳು ಬಜೆಟ್ ಆಗಿದ್ದು, ಇದಕ್ಕೆ ಕೇವಲ 20 ದಿನಗಳ ಆಯುಷ್ಯ ಮಾತ್ರ. ಅವರು ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ಬಜೆಟ್‍ಗಳಲ್ಲಿ ಮಂಡಿಸಿರುವ ಯಾವುದೇ ಯೋಜನೆ ಈವರೆಗೆ ಅನುಷ್ಠಾನಕ್ಕೆ ಬಂದಿಲ್ಲ. ಚುನಾವಣೆ ಹಿನ್ನಲೆಯಲ್ಲಿ ಮಂಡಿಸಿರುವ ಈ ಬಜೆಟ್ ಕೇವಲ ಜನಸಾಮಾನ್ಯರ ಹಾಗೂ ರೈತರ ಮೂಗಿಗೆ ತುಪ್ಪ ಸವರುವ ಪ್ರಯತ್ನ ಎಂದು ಟೀಕಿಸಿದರು. 

ಅನ್ನಭಾಗ್ಯ ಯೋಜನೆ ಜಾರಿಗೆ ತಂದಾಗ ಒಂದು ಕುಟುಂಬಕ್ಕೆ 30 ಕೆ.ಜಿ. ಘೋಷಿಸಿದ್ದರು, ಇದೀಗ ಒಬ್ಬರಿಗೆ 7 ಕೆ.ಜಿ. ನೀಡುತ್ತಿದ್ದಾರೆ. ಶಾದಿಭಾಗ್ಯ ಯೋಜನೆ ಜಾರಿಗೆ ತಂದಾಗ ಅಲ್ಪಸಂಖ್ಯಾತರಿಗೆ ಮಾತ್ರವಲ್ಲದೇ ಪ. ಜಾತಿ ಮತ್ತು ಪಂಗಡದವರಿಗೂ ಅನುಷ್ಟಾನಗೊಳಿಸುವಂತೆ ಬಿಜೆಪಿಯಿಂದ ಆಗ್ರಹಿಸಲಾಯಿತು. ಆದರೆ ಕನಿಷ್ಟ ಪಕ್ಷ ಮುಸಲ್ಮಾನರಿಗೂ ಆ ಯೋಜನೆ ಸರಿಯಾಗಿ ದೊರೆಯದೇ, ಕೇವಲ 3-4 ಮುಸ್ಲಿಂ ಕುಟುಂಬದವರು ಮಾತ್ರ ಈ ಯೋಜನೆಯ ಸದುಪಯೋಗ ಪಡೆದಿದ್ದಾರೆ ಎಂದರು.

ಕನ್ನಡ ಭಾಷೆಗೆ ಅಪಮಾನ ಮಾಡಿದ, ಹಿಂದೂಗಳನ್ನು ಮತಾಂತರ ಮಾಡಿದ, ಹಿಂದೂಗಳನ್ನು ಹತ್ಯೆ ಮಾಡಿ ಆಡಳಿತ ಮೆರೆದ ಬಹಮನಿ ಸುಲ್ತಾನರ ಕರಾಳ ನೆನಪನ್ನು, ಸಿಎಂ ಸಿದ್ಧರಾಮಯ್ಯನವರು ಮತ್ತೊಮ್ಮೆ ನಮಗೆ ಅವರ ಉತ್ಸವವನ್ನು ಆಚರಿಸುವ ಮೂಲಕ ನೆನಪು ಮಾಡಲು ಹೊರಟಿದ್ದಾರೆ ಎಂದರು.

ರಾಜ್ಯದಲ್ಲಿ 13 ಬಜೆಟ್ ಮಂಡನೆ ಮಾಡಿದ ನಾಯಕ ಎಂದು ವರ್ತಿಸುತ್ತಿರುವ ಸಿಎಂ ಸಿದ್ಧರಾಮಯ್ಯ ಒಬ್ಬ ಖಳನಾಯಕ. ಈ ಸಂದರ್ಭ ಸಂಸದ ಜಿ.ಎಂ. ಸಿದ್ದೇಶ್ವರ್, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ, ಬಿ.ಎನ್. ಬಸವರಾಜ್, ಎಸ್.ವಿ. ರಾಮಚಂದ್ರ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಚಿತ್ರದುರ್ಗದ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್, ಹೇಮಂತ್ ಕುಮಾರ್, ರಮೇಶ್ ನಾಯ್ಕ್ ಮತ್ತಿತರರು ಇದ್ದರು.

ರಾಹುಲ್‍ಗಾಂಧಿಗೆ ರಾಜಕೀಯ ಗಂಧಗಾಳಿಯೂ ತಿಳಿದಿಲ್ಲ. ಹೇಳಿಕೊಟ್ಟ, ಬರೆದುಕೊಟ್ಟ ಸಿದ್ಧಭಾಷಣ ಮಾಡುತ್ತಾರೆ. ಅವರು ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭ ಒಂದೇ ತೆರನಾದ ಭಾಷಣ ಮಾಡಿದ್ದನ್ನು ಗಮನಿಸಿದರೆ ಅದು ಅರ್ಥವಾಗುತ್ತದೆ ಎಂದು ಅವರು ಟೀಕಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News