ಮತ್ತೊಂದು ವಿಶ್ವ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ

Update: 2018-02-17 05:19 GMT

ಕೇಪ್‌ಟೌನ್,ಫೆ.17: ಈಗ ನಡೆಯುತ್ತಿರುವ ದಕ್ಷಿಣ ಆಫ್ರಿಕ ಪ್ರವಾಸದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದ್ದು, ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ 500ಕ್ಕೂ ಅಧಿಕ ರನ್ ಕಲೆ ಹಾಕಿ ಮತ್ತೊಂದು ವಿಶ್ವ ದಾಖಲೆ ನಿರ್ಮಿಸಿದ್ದಾರೆ.

 ಕೊಹ್ಲಿ 71 ರನ್ ತಲುಪುತ್ತಲ್ಲೇ ಈ ಸಾಧನೆ ಮಾಡಿದ್ದಾರೆ. ಈ ಮೈಲುಗಲ್ಲು ತಲುಪಿದ ಬಳಿಕ ಕೊಹ್ಲಿ 35ನೇ ಶತಕ ದಾಖಲಿಸಿದರು. ಸರಣಿಯಲ್ಲಿ ಮೂರನೇ ಶತಕ ದಾಖಲಿಸಿರುವ ಕೊಹ್ಲಿ ದ್ವಿಪಕ್ಷೀಯ ಸರಣಿಯಲ್ಲಿ ಈ ಸಾಧನೆ ಮಾಡಿದ ಮೊದಲಿಗ. ಕೊಹ್ಲಿ ಕೇವಲ 96 ಎಸೆತಗಳಲ್ಲಿ 129 ರನ್ ಗಳಿಸಿದ್ದು, ಇದರಲ್ಲಿ 19 ಬೌಂಡರಿ ಹಾಗೂ 2 ಸಿಕ್ಸರ್‌ಗಳಿವೆ.

29ರ ಹರೆಯದ ಕೊಹ್ಲಿ ದ್ವಿಪಕ್ಷೀಯ ಸರಣಿಯಲ್ಲಿ ಒಟ್ಟು 558 ರನ್ ಗಳಿಸುವುದರೊಂದಿಗೆ ಸಹ ಆಟಗಾರ ರೋಹಿತ್ ಶರ್ಮ(491) ದಾಖಲೆಯನ್ನು ಮುರಿದರು. ರೋಹಿತ್ 2013-14ರಲ್ಲಿ ಆಸ್ಟ್ರೇಲಿಯ ವಿರುದ್ಧ ದ್ವಿಪಕ್ಷೀಯ ಸರಣಿಯಲ್ಲಿ 491 ರನ್ ಗಳಿಸಿದ್ದಾರೆ. ಈ ವೇಳೆ ಕೊಹ್ಲಿ ಅತ್ಯಂತ ವೇಗವಾಗಿ 17,000 ಅಂತಾರಾಷ್ಟ್ರೀಯ ರನ್ ಪೂರೈಸಿದರು. 200 ಇನಿಂಗ್ಸ್‌ನಲ್ಲಿ 9,500 ರನ್ ಗಳಿಸಿದ ಕೊಹ್ಲಿ ದಕ್ಷಿಣ ಆಫ್ರಿಕದ ಎಬಿ ಡಿವಿಲಿಯರ್ಸ್(215 ಇನಿಂಗ್ಸ್) ದಾಖಲೆಯನ್ನು ಹಿಂದಿಕ್ಕಿದರು.

ಕ್ಯಾಚ್‌ನಲ್ಲಿ ಕೊಹ್ಲಿ ಶತಕ

ಕೊಹ್ಲಿ ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ ಫೀಲ್ಡಿಂಗ್‌ನಲ್ಲೂ ದಾಖಲೆ ನಿರ್ಮಿಸಿದ್ದಾರೆ. 6ನೇ ಏಕದಿನ ಪಂದ್ಯದಲ್ಲಿ ಜಸ್‌ಪ್ರಿತ್ ಬುಮ್ರಾ ಬೌಲಿಂಗ್ನಲ್ಲಿ ತಾಹಿರ್ ನೀಡಿದ ಕ್ಯಾಚ್ ಪಡೆಯುವ ಮೂಲಕ 100 ಕ್ಯಾಚ್ ಪಡೆದ ಸಾಧನೆ ಮಾಡಿದ್ದಾರೆ. ಏಕದಿನದಲ್ಲಿ 100 ಕ್ಯಾಚ್ ಪಡೆದ 30ನೇ ಕ್ರಿಕೆಟಿಗನಾಗಿದ್ದಾರೆ. ಭಾರತದ ಸೌರವ್ ಗಂಗುಲಿ, ಸುರೇಶ್ ರೈನಾ ಹಾಗೂ ವೆಸ್ಟ್‌ಇಂಡೀಸ್‌ನ ವಿವಿ ರಿಚರ್ಡ್ಸ್ ದಾಖಲೆಯನ್ನು ಸರಿಗಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News