ನೀರವ್ ಮೋದಿ ಮಳಿಗೆಗಳ ಮೇಲಿನ ಐಟಿ ದಾಳಿಯಿಂದ ರಟ್ಟಾಯ್ತು ಬಾಲಿವುಡ್ ಸೆಲೆಬ್ರಿಟಿಗಳ ಈ ಗುಟ್ಟು

Update: 2018-02-17 07:21 GMT

ಹೊಸದಿಲ್ಲಿ, ಫೆ,17: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಬರೋಬ್ಬರಿ ರೂ 11,000 ಕೋಟಿ ವಂಚಿಸಿ ಇದೀಗ ದೇಶ ಬಿಟ್ಟು ಪರಾರಿಯಾಗಿರುವ ಖ್ಯಾತ ವಜ್ರೋದ್ಯಮಿಗಳಾದ ನೀರವ್ ಮೋದಿ ಹಾಗೂ ಮೆಹುಲ್ ಚೊಕ್ಸಿಗೆ ಸೇರಿದ ಸಂಸ್ಥೆಗಳ ಮೇಲೆ  ಕಳೆದ ವರ್ಷ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿಗಳ ಸಂದರ್ಭ ಈ ಮಳಿಗೆಗಳಿಂದ ಹಲವು ಬಾಲಿವುಡ್ ಹಾಗೂ ಹಾಲಿವುಡ್ ಸಿಲೆಬ್ರಿಟಿಗಳು ನಗದು ಪಾವತಿಸಿ ಬೆಲೆಬಾಳುವ ಆಭರಣ ಖರೀದಿಸಿದ್ದಾರೆಂದು ತಿಳಿದು ಬಂದಿತ್ತು.

ನೀರವ್ ಮೋದಿ ಮಳಿಗೆಗಳಿಂದ  ಖರೀದಿ ಮಾಡುತ್ತಿದ್ದ ಗ್ಲಾಮರ್ ಲೋಕದ ದಿಗ್ಗಜರ ಪಟ್ಟಿಯೇ ಅಧಿಕಾರಿಗಳಿಗೆ ಲಭ್ಯವಾಗಿದೆ. ನಟರ ಹೊರತಾಗಿ ರಾಜಕಾರಣಿ ಖರೀದಿದಾರರ ವಿವರಗಳೂ ಲಭ್ಯವಾಗಿತ್ತು. ಈ ದಾಳಿಗಳು ಸರಕಾರದ ನೋಟು ಅಮಾನ್ಯೀಕರಣ ನೀತಿ ಜಾರಿಯಾದ ನಂತರ ನಡೆದಿದ್ದವು ಎಂಬುದು ಉಲ್ಲೇಖಾರ್ಹ.

ಈ ಮಳಿಗೆಗಳಲ್ಲಿ ಸಿಲೆಬ್ರಿಟಿ ಖರೀದಿದಾರರು ಭಾಗಶಃ ಮೊತ್ತವನ್ನು ಕಾರ್ಡ್ ಅಥವಾ ಚೆಕ್ ಮೂಲಕ ಹಾಗೂ ದೊಡ್ಡ ಮೊತ್ತವನ್ನು ನಗದಿನ ಮೂಲಕ ಪಾವತಿಸುತ್ತಿದ್ದರೆಂದು ಮೂಲವೊಂದು ತಿಳಿಸಿದೆ.

ಕಳೆದ ವರ್ಷದ ದಾಳಿಗಳ ವೇಳೆ ಸಂಗ್ರಹಿಸಲಾದ ಮಾಹಿತಿ ಈಗಿನ ತನಿಖೆಯ ವೇಲೆ ಸಹಕಾರಿಯಾಗಿ ನೀರವ್ ಮೋದಿ ಮತ್ತಿತರ ಆರೋಪಿಗಳ ವಿರುದ್ಧ  ಪ್ರಬಲ ಸಾಕ್ಷ್ಯಗಳುಳ್ಳ ತನಿಖಾ ವರದಿ ಸಲ್ಲಿಸಲು ಸಹಾಯವಾಗುವುದೆಂದು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News