ಸಮಯಪ್ರಜ್ಞೆ ಮೆರೆದು ಹಲವು ವಿದ್ಯಾರ್ಥಿಗಳ ಪ್ರಾಣ ರಕ್ಷಿಸಿದ ಭಾರತ ಮೂಲದ ಶಿಕ್ಷಕಿ

Update: 2018-02-17 07:49 GMT

ನ್ಯೂಯಾರ್ಕ್,ಫೆ.17 : ಬುಧವಾರ ಫ್ಲೋರಿಡಾದ  ಮಾರ್ಜೊರಿ ಸ್ಟೋನ್ ಮ್ಯಾನ್ ಡೌಗ್ಲಾಸ್ ಹೈಸ್ಕೂಲಿನಲ್ಲಿ ಯುವಕನೊಬ್ಬನ ಏಕಾಏಕಿ ಗುಂಡಿನ ದಾಳಿಗೆ 17 ಮುಗ್ಧ ಜೀವಗಳು ಬಲಿಯಾದ ಘಟನೆ ಇಡೀ ವಿಶ್ವವನ್ನೇ ದಂಗು ಬಡಿಸಿದೆ. ಆದರೆ ಈ ಭೀಭತ್ಸ, ಭಯಾನಕ ಘಟನೆ ನಡೆಯುತ್ತಿರುವಾಗಲೂ ಧೃತಿಗೆಡದೆ ಭಾರೀ ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸಿ ಹಲವಾರು ವಿದ್ಯಾರ್ಥಿಗಳ ಜೀವವುಳಿಸಿದ ಹೆಗ್ಗಳಿಕೆ ಶಾಲೆಯ ಗಣಿತ ಶಿಕ್ಷಕಿ, ಭಾರತೀಯ ಮೂಲದ ಶಾಂತಿ ವಿಶ್ವನಾಥನ್ ಅವರಿಗೆ ಸಲ್ಲುತ್ತದೆ. ವಿದ್ಯಾರ್ಥಿಗಳು ಅವರನ್ನು ಪ್ರೀತಿಯಿಂದ ಮಿಸೆಸ್ ವಿ ಎಂದು ಕರೆಯುತ್ತಾರೆ.

ಆ ದಿನ ತರಗತಿ ಮುಕ್ತಾಯಗೊಳ್ಳಲು ಇನ್ನೇನು ಸ್ವಲ್ಪವೇ ಹೊತ್ತಿದೆ ಎನ್ನುವಷ್ಟರಲ್ಲಿ ಎರಡನೇ ಬೆಂಕಿ ಅಲಾರ್ಮ್ ಕೇಳಿಸಿದಾಗ ಶಾಂತಿ ಅವರಿಗೆ ಎಲ್ಲೋ ಏನೋ ನಡೆಯ ಬಾರದ್ದು ನಡೆದಿದೆ ಎಂದು ತಿಳಿದಿತ್ತು.

ತಮ್ಮ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಗೆ ಕಳುಹಿಸುವ ಬದಲು ಅವರು ವಿದ್ಯಾರ್ಥಿಗಳೆಲ್ಲರನ್ನೂ ತರಗತಿಯ ಮೂಲೆಯೊಂದರಲ್ಲಿ ಕೂರುವಂತೆ ಮಾಡಿದ್ದರು. ತರಗತಿಯ ಕಿಟಿಕಿ ಬಾಗಿಲುಗಳನ್ನು ಬಂದ್ ಮಾಡಿ, ಕಿಟಿಕಿಯ ಗಾಜನ್ನು ಪೇಪರ್ ಉಪಯೋಗಿಸಿ ಮುಚ್ಚಿ ತರಗತಿಯ ಒಳಗೆ ಯಾರೂ ನೋಡದಂತೆ ಮಾಡಿದ್ದರು. ಪೊಲೀಸ್ ತಂಡ ಬಾಗಿಲನ್ನು ಬಡಿದಾಗಲೂ ಅದು ದಾಳಿಕೋರನೇ ಇರಬೇಕೆಂದು ಶಂಕಿಸಿ ಬಾಗಿಲು ತೆರೆಯಿದೆ, ಒಂದೋ ಬಾಗಿಲು ಒಡೆಯಿರಿ, ಇಲ್ಲವೇ ಬಾಗಿಲ ಕೀ ಉಪಯೋಗಿಸಿ ತೆರೆಯಿರಿ,'' ಎಂದು ಹೇಳಿದ್ದರು. ರಕ್ಷಣಾ ತಂಡ ಹಾಗೆಯೇ  ಮಾಡಿತೆಂದು  ಆ ತರಗತಿಯ ವಿದ್ಯಾರ್ಥಿಯೊಬ್ಬನ ತಾಯಿ ನೀಡಿದ್ದ ಮಾಹಿತಿಯಿಂದ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News