ತಾಯಿ, ಮಗಳಿಗೆ ಮಲ ತಿನಿಸಿ, ತಲೆ ಬೋಳಿಸಿದ ಗ್ರಾಮಸ್ಥರು

Update: 2018-02-17 09:16 GMT

ರಾಂಚಿ,ಫೆ.17 : ಮಾಟಗಾತಿಯರೆಂಬ ಶಂಕೆಯಿಂದ ದುಲ್ಮಿ ಎಂಬ ಗ್ರಾಮದ ಜನರು ಮಹಿಳೆಯೊಬ್ಬಳು ಮತ್ತಾಕೆಯ  ಮಗಳ ತಲೆ ಬೋಳಿಸಿ ಅವರಿಗೆ ಬಲವಂತವಾಗಿ ಮಲ ತಿನಿಸಿದ ಘಟನೆ ವರದಿಯಾಗಿದೆ.

ಸಂತ್ರಸ್ತೆಯರಾದ ಕರೋ ದೇವಿ (65) ಮತ್ತಾಕೆಯ ಪುತ್ರಿ ಬಸಂತಿ ದೇವಿ (35) ಈ ಬಗ್ಗೆ ಶುಕ್ರವಾರ ಪೊಲೀಸ್ ದೂರು ದಾಖಲಿಸಿದ್ದಾರೆ. ತಮ್ಮ ಸಂಬಂಧಿಕರು ತಮ್ಮನ್ನು ಮನೆಯಿಂದ ಹೊರಗೆಳೆದು ಈ ಕೃತ್ಯ ನಡೆಸಿದ್ದಾಗಿ ಅವರು ದೂರಿದ್ದು ಪೊಲೀಸರು ಎಲ್ಲಾ 11 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಗುರುವಾರ ಬೆಳಿಗ್ಗೆ ಸುಮಾರು 10 ಗಂಟೆಗೆ ಸಂತ್ರಸ್ತೆಯರ ಸಂಬಂಧಿಗಳೂ ಸೇರಿದಂತೆ  10ರಿಂದ 12 ಮಂದಿಯಿದ್ದ ತಂಡ  ಮಹಿಳೆಯರಿಬ್ಬರನ್ನು  ಹೊರಗೆಳೆದು ಅವರ ಮೈಗೆ ಮಲ ಸವರಿ ಅದನ್ನು ತಿನ್ನುವಂತೆ ಬಲವಂತ ಪಡಿಸಿ ಮೂತ್ರವನ್ನೂ ಕುಡಿಸಿದ್ದಾರೆನ್ನಲಾಗಿದೆ. ನಂತರ ಅವರನ್ನು ಗ್ರಾಮದ ಪಕ್ಕ ಹರಿಯವ ಸುಬೆರ್ ನರೆಖ ನದಿ ಬಳಿ ಕರೆದೊಯ್ದು ಅಲ್ಲಿ ತಲೆ ಬೋಳಿಸಿ ಬಲವಂತವಾಗಿ ಬಿಳಿ ಸೀರೆಯುಡಿಸಿ ನಂತರ ಮನೆಗೆ ಕಳುಹಿಸಲಾಗಿತ್ತು. ಗ್ರಾಮದ ಮೂರು ಮಂದಿಯ ಅಸೌಖ್ಯಕ್ಕೆ ಈ ಇಬ್ಬರು ಮಹಿಳೆಯರು ನಡೆಸಿದ ಮಾಟಮಂತ್ರವೇ ಕಾರಣವೆಂದು  ಗ್ರಾಮಸ್ಥರು ನಂಬಿ ಈ ಕೃತ್ಯವೆಸಗಿದ್ದಾರೆನ್ನಲಾಗಿದೆ.  ಅಸೌಖ್ಯದಿಂದಿದ್ದು  ಪ್ರಜ್ಞಾಹೀನರಾಗಿದ್ದ ಅಕ್ಷಯ್ ಬಿಜಯ್ ಹಾಗೂ ಮಾಲತಿ ದೇವಿ ಎಂಬವರನ್ನು ಅವರ ಕುಟುಂಬ ಸದಸ್ಯರು ವೈದ್ಯರ ಬಳಿ ಕರೆದೊಯ್ಯುವ ಬದಲು ಸ್ಥಳೀಯ ಮಂತ್ರವಾದಿಯ ಬಳಿ ಕರೆದೊಯ್ದಾಗ ಆತ ಬಸಂತಿ ಹಾಗೂ ಕರೋ ನಡೆಸಿದ ಮಾಟದಿಂದಾಗಿ ಹೀಗಾಗಿದೆ ಎಂದು ಹೇಳಿದ್ದೇ ತಡ ಗ್ರಾಮಸ್ಥರು ಅವರ ಮೇಲೆ ಮುಗಿ ಬಿದ್ದಿದ್ದರು.

ಘಟನೆ ನಡೆದ ಕೂಡಲೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಹೆದರಿದ ತಾಯಿ ಮಗಳು ಮರು ದಿನ ಇಚಘರ್ ಎಂಬಲ್ಲಿನ ಕರೋ ದೇವಿಯ ತಾಯಿ ಮನೆಗೆ ತೆರಳಿ ಅಲ್ಲಿ  ತಮ್ಮ ಮೇಲೆ ನಡೆದ ದೌರ್ಜನ್ಯವನ್ನು ವಿವರಿಸಿದ ನಂತರ ಅವರ ಸಹಾಯದಿಂದ ಪೊಲೀಸ್ ಕೇಸ್ ದಾಖಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News