ಶ್ರವಣಬೆಳಗೊಳದಲ್ಲಿ ಶತಮಾನದ 2 ನೇ ಮಹಾಮಸ್ತಕಾಭಿಷೇಕ

Update: 2018-02-18 07:15 GMT

ಶ್ರವಣಬೆಳಗೋಳ,ಫೆ.17: ಶತಮಾನದ 2 ನೇ ಮಹಾಮಸ್ತಕಾಭಿಷೇಕವು ಇಂದು ಜೈನ ಸಂಪ್ರದಾಯದಂತೆ ಮಂತ್ರೋಪದೇಶದ ನಡುವೆ ಭಗವಾನ್ ಬಾಹುಬಲಿಗೆ ಕಳಸಗಳ ಅಭಿಷೇಕ ಮಾಡುವ ಮೂಲಕ ನಡೆಯಿತು.  

ಪವಿತ್ರ ಜಲ, ಎಳನೀರು, ಕಬ್ಬಿನಹಾಲು, ಹಾಲು, ಕಲ್ಕಚೂರ್ಣ, ಅರಿಶಿಣ ಅಕ್ಕಿಹಿಟ್ಟು, ಸರ್ವೌಷಧ (ವಿವಿಧ ಗಿಡ ಮೂಲಿಕೆಗಳ ಕಶಾಯ) ಚತುರ್‍ಕೋನ ಕಳಸ, ಮೂರು ಬಗೆಯ ಗಂಧದ ಅಭಿಷೇಕ, ಪುಷ್ಪವೃಷ್ಠಿ ಹಾಗೂ ಪೂರ್ಣಕುಂಭದ ಅಭಿಷೇಕ ಮತ್ತು ಜಯಾಮಾಲಾದೊಂದಿಗೆ ಮಂಗಳಾರತಿ, ಇವುಗಳನ್ನೆಲ್ಲ ಗೋಮಟೇಶ್ವರನ ಹಿಂದೆ ವಿಶೇಷವಾಗಿ ನಿರ್ಮಿಸಲಾಗಿರುವ ಅಟ್ಟಣಿಗೆ ಮೇಲೆ ಹತ್ತಿ ಬಾಹುಬಲಿ ಮೇಲೆ ಅಭಿಷೇಕ ಮಾಡಿದರು. ಪಾದದ ಬಳಿ ಸಂಗ್ರಹವಾದ  ಅಭಿಷೇಕ ಮಾಡಿದ ದ್ರವ್ಯವನ್ನು ಭಕ್ತರು ಪ್ರಸಾದದ ರೂಪದಲ್ಲಿ ಸ್ವೀಕರಿಸಿದರು. ಮಹಾಮಸ್ತಕಾಭಿಷೇಕ ಜೈನರ ಪ್ರಮುಖ ಉತ್ಸವವಾದರೂ ಎಲ್ಲಾ ಧರ್ಮದವರು ಪಾಲ್ಗೊಂಡಿರುವುದು ವಿಶೇಷವಾಗಿತ್ತು.

ಜೈನ ಧರ್ಮದ ಪರಮ ಪೂಜ್ಯ ಆಚಾರ್ಯ ಶ್ರೀ 108 ವರ್ಧಮಾನಸಾಗರ ಮಹಾರಾಜರು, ಪರಮ ಪೂಜ್ಯ ಆಚಾರ್ಯ ಶ್ರೀ 108 ವಾಸ್ತು ಪೂಜ್ಯ ಸಾಗರ  ಮಹಾರಾಜರು, ಪರಮ ಪೂಜ್ಯ ಆಚಾರ್ಯ ಶ್ರೀ 108 ಚಂದ್ರ ಪೂಜ್ಯ ನಾಗರ ಮಹಾರಾಜರು ಮತ್ತು ಸಂಗಸ್ತ ಮುನಿಗಳು, ಮಾತಾಜೀ, ತ್ಯಾಗಿಗಳು ಇಲ್ಲಿನ ಸಾನಿಧ್ಯ ವಹಿಸಿದ್ದರು. ಚಾರುಕ್ಯ ಶ್ರೀ ಭಟ್ಟಾರಸ ಸ್ವಾಮೀಜಿಯವರ ನೇತೃತ್ವದಲ್ಲಿ ಮಹಾಮಸ್ತಕಾಭಿಷೇಕ ಜರಗಿತು. ಈ ಐತಿಹಾಸಿಕ ಮಹಾಮಸ್ತಕಾಭಿಷೇಕಕ್ಕೆ ಸಹಸ್ರಾರು ಜನರು ಸಾಕ್ಷಿಯಾದರು. 

ಮಹಾಮಸ್ತಕಾಭಿಷೇಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಎ.ಮಂಜು,ಸಚಿವೆ ಉಮಾಶ್ರಿ , ಶ್ರೀ ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ  ಹಾಗೂ ದೇಶದ, ರಾಜ್ಯದ, ಜಿಲ್ಲೆಯ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News