ತುಮಕೂರು: ಭರವಸೆ ಈಡೇರಿಸದ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಬಿಸಿಯೂಟ ನೌಕರರ ಧರಣಿ

Update: 2018-02-17 11:40 GMT

ತುಮಕೂರು,ಫೆ.17: ಮುಷ್ಕರ ನಿರತ ಅಕ್ಷರ ದಾಸೋಹ ನೌಕರರಿಗೆ ಕೊಟ್ಟ ಭರವಸೆಯನ್ನು ರಾಜ್ಯ ಸರಕಾರ ಈಡೇರಿಸಲಿಲ್ಲ ಎಂದು ಆರೋಪಿಸಿ ಇಂದು ಅಕ್ಷರ ದಾಸೋಹ ನೌಕರರು ಎಐಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಬೇಡಿಕೆ ಪೂರೈಸುವಂತೆ ಜಿಲ್ಲಾಧಿಕಾರಿಗಳಿ ಮನವಿ ಸಲ್ಲಿಸಿದರು.

ನಗರ ಟೌನ್‍ಹಾಲ್ ವೃತ್ತದಿಂದ ಎಂ.ಜಿ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಸರಕಾರ ಫೆಬ್ರವರಿ 10 ರಂದು ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಪ್ರತಿಭಟನಾನಿರತ ಅಕ್ಷರ ದಾಸೋಹ ನೌಕರರಿಗೆ ನೀಡಿದ ಭರವಸೆಯಂತೆ ಅವರ ವೇತನ ಹೆಚ್ಚಿಸಬೇಕು. ಸೇವಾ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪ್ರತಿಭಟನಾನಿರತ ಅಕ್ಷರ ದಾಸೋಹ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಎಐಟಿಯುಸಿ ಜಿಲ್ಲಾಧ್ಯಕ್ಷ ಗಿರೀಶ್, ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಸುಮಾರು 10 ಸಾವಿರದಷ್ಟು ಅಕ್ಷರ ದಾಸೋಹ ನೌಕರರು ಫೆಬ್ರವರಿ 06 ರಿಂದ 10ರವರೆಗೆ ಆಹೋರಾತ್ರಿ ಧರಣಿ ನಡೆಸಿದ್ದು, ಈ ವೇಳೆ ಮುಖ್ಯಮಂತ್ರಿಗಳ ಪರವಾಗಿ ಸ್ಥಳಕ್ಕೆ ಆಗಮಿಸಿದ ಶಿಕ್ಷಣ ಸಚಿವರು ಸಿ.ಎಂ. ಅವರ ಜೊತೆಗೆ ಮಾತನಾಡಿ, ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಅಲ್ಲದೆ ಸ್ವತಹಃ ಮುಖ್ಯ ಮಂತ್ರಿಗಳು ಕಾರ್ಮಿಕ ಮುಖಂಡರೊಂದಿಗೆ ನಡೆಸಿದ ಮಾತುಕತೆಯ ವೇಳೆಯೂ ಅಕ್ಷರ ನೌಕರರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ ಶುಕ್ರವಾರ ಮಂಡಿಸಿದ ಬಜೆಟ್‍ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಅಲ್ಲದೆ ಐಸಿಡಿಎಸ್, ಅಕ್ಷರ ದಾಸೋಹ ಹಾಗೂ ಎನ್.ಆರ್.ಹೆಚ್.ಎಂ.ಯೋಜನೆಗಳಲ್ಲಿ ದುಡಿಯುತ್ತಿರುವ ಅಸಂಘಟಿತ ವಲಯದ ನೌಕರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಸರಕಾರ ತಾನು ನೀಡಿದ ಭರವಸೆಯನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹಗಲು ರಾತ್ರಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ಹಿಂಜರಿಯುವುದಿಲ್ಲ. ಸರಕಾರ ಇದಕ್ಕೆ ಅವಕಾಶ ನೀಡದೆ, ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿ ಸುಮಾರು 1,18,265 ಅಕ್ಷರ ದಾಸೋಹ ನೌಕರರು ದುಡಿಯುತ್ತಿದ್ದು, ಅತ್ಯಂತ ಕಡಿಮೆ ವೇತನಕ್ಕೆ ಬೆಳಗ್ಗೆ 9:30 ರಿಂದ ಸಂಜೆ 4;30ರ ವರೆಗೆ ದುಡಿಯಬೇಕಾಗಿದೆ. ಉದ್ಯೋಗದ ಭದ್ರತೆಯೂ ಇಲ್ಲ. ಪ್ರಸ್ತುತ ಮುಖ್ಯ ಅಡುಗೆಯವರಿಗೆ 2200ರೂ ಮತ್ತು ಸಹಾಯಕರಿಗೆ 2100 ರೂ ನೀಡುತ್ತಿದೆ. ಇಂದಿನ ಬೆಲೆ ಏರಿಕೆಯಲ್ಲಿ ಇಷ್ಟು ಕಡಿಮೆ ವೇತನಕ್ಕೆ ಜೀವನ ನಡೆಸುವುದು ಕಷ್ಟವಾಗಿದೆ. ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಠ 10,500 ರೂ ವೇತನ ನೀಡಬೇಕೆಂಬುದು ಎಐಟಿಯುಸಿ ಬೇಡಿಕೆಯಾಗಿದೆ. ಇದು ಕಳೆದ 16 ವರ್ಷಗಳ ನಿರಂತರ ಬೇಡಿಕೆಯಾಗಿದೆ. ಸರಕಾರ ಈ ಕುರಿತು ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡು ಆದೇಶ ಹೊರಡಿಸದಿದ್ದರೆ ಉಗ್ರ ಹೋರಾಟ ರೂಪಿಸುವುದು ಅನಿವಾರ್ಯ ಎಂದು ಅಕ್ಷರ ದಾಸೋಹ ನೌಕರರ ಜಿಲ್ಲಾ ಸಂಚಾಲಕಿ ವನಜಾಕ್ಷಮ್ಮ ತಿಳಿಸಿದರು.

ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕರಾದ ಸತ್ಯನಾರಾಯಣ, ಕಾಂತರಾಜು, ಶಾಂತಮ್ಮ, ಕಮಲ ಹೆಚ್.ಆರ್, ಪುಷ್ಪವತಿ, ರಾಧಮ್ಮ, ಶಾಂತಮ್ಮ, ಉಮಾದೇವಿ, ಸುಶೀಲಮ್ಮ ಸೇರಿದಂತೆ ನೂರಾರು ಅಕ್ಷರ ದಾಸೋಹ ನೌಕರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News